Advertisement

ನಾಡು-ನುಡಿಯ ಅಭಿಮಾನ ಇಲ್ಲಿನ ಕನ್ನಡಿಗರಿಂದ ಕಲಿಯಬೇಕು

04:20 PM Oct 15, 2017 | |

ಮುಂಬಯಿ: ಊರಿನಲ್ಲಿ  ಸಾಹಿತ್ಯಕ ಕಾರ್ಯಕ್ರಮಗಳಾದರೆ ಸಭಿಕರು ಯಾರೂ ಕೂಡಾ ಇರುವುದಿಲ್ಲ. ಆದರೆ ಮುಂಬಯಿಯ ತುಳು-ಕನ್ನಡಿಗರ ಸಾಹಿತ್ಯಾಭಿಮಾನವನ್ನು  ಮೆಚ್ಚಲೇಬೇಕು. ನಾಡು-ನುಡಿಯ ಅಭಿಮಾನವನ್ನು ಮುಂಬಯಿಗರಿಂದ ಕಲಿಯಬೇಕು.  ಕೋಣೆಯ ಸಂಸ್ಕೃತಿ ಮುಕ್ತತೆಗೆ ಕುರ್ಕಾಲರಂತಹ ಶಿಕ್ಷಕರೆ ಪ್ರೇರಕ ಶಕ್ತಿಯಾಗಿದ್ದರು. ನಮ್ಮನ್ನು ನಾವು  ಪ್ರಶ್ನೆ ಮಾಡುವ ಕಾಲ ಇದಾಗಿದೆ. ಅದರಲ್ಲೂ ಶಿಕ್ಷಕ ವೃತ್ತಿ ಎನ್ನುವುದೇ ಕಷ್ಟಕರವಾಗಿದೆ. ಕುರ್ಕಾಲರ ಮೇಲಿನ ಅಭಿಮಾನ ಅಪಾರವಾಗಿದ್ದು,  ಈ ಕಾರಣದಿಂದಲೇ ಪ್ರಶಸ್ತಿ ಪ್ರದಾನಿಸುವ ವೇದಿಕೆ ಅರ್ಥಪೂರ್ಣತೆಯಿಂದ ಕೂಡಿದೆ. ಓರ್ವ ಅತ್ಯುತ್ತಮ ವ್ಯಕ್ತಿಗೆ ಪ್ರಶಸ್ತಿ ಪ್ರದಾನಿಸಲು ಹೆಮ್ಮೆಯಾಗುತ್ತಿದೆ. ಯಾವುದೇ ವ್ಯಕ್ತಿಗೆ  ಜೀವನದ ನಿರ್ದಿಷ್ಟ ಗುರಿಯನ್ನು  ಈಡೇರಿಸುವುದೇ ದೊಡª ಗೌರವವಾಗಿದೆ. ಅಂತವರಲ್ಲಿ ಬಿ. ಎಸ್‌. ಕುರ್ಕಾಲರೂ ಒಬ್ಬರಾಗಿದ್ದಾರೆ. ಮಾನವನ ಮನಃ ಪರಿವರ್ತನೆಯಾಗದೆ ಯಾವ ಕೆಲಸವೂ ಸಫಲತೆಯನ್ನು ಕಾಣುವುದಿಲ್ಲ ಎಂದು ಸಾಹಿತಿ, ವಿದ್ವಾಂಸ, ರಾಣಿ ಅಬ್ಬಕ್ಕ ತುಳು ಸಂಶೋಧನಾ ಕೇಂದ್ರ ಬಂಟ್ವಾಳ ಇದರ ಅಧ್ಯಕ್ಷ ಪ್ರೊ| ತುಕಾರಾಮ ಪೂಜಾರಿ  ಹೇಳಿದರು.

Advertisement

ಅ.14 ರಂದು ಸಂಜೆ  ಸಾಂತಾಕ್ರೂಜ್‌ ಪೂರ್ವ ಬಿಲ್ಲವ ಭವನದ ಶ್ರೀ  ನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ  ಮುಖವಾಣಿ ಅಕ್ಷಯ ಮಾಸಿಕವು ಅಕ್ಷಯದ ಮಾಜಿ ಗೌರವ ಪ್ರಧಾನ ಸಂಪಾದಕ ಎಂ. ಬಿ. ಕುಕ್ಯಾನ್‌ ಪ್ರಾಯೋಜಿತ “ಶ್ರೀ ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ 2017’ನ್ನು ನಗದು ಫಲಪುಷ್ಪ, ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ಲಕ್ಷ್ಮೀ ಛಾಯಾ ವಿಚಾರ ವೇದಿಕೆ ಮುಂಬಯಿ ಸಂಚಾಲಕ, ಹಿರಿಯ ಕವಿ, ಸಾಹಿತಿ ಬಿ. ಎಸ್‌. ಕುರ್ಕಾಲ್‌ ಅವರಿಗೆ ಪ್ರದಾನಿಸಿ ಮಾತನಾಡಿದ ಅವರು, ಬದುಕಿನಲ್ಲಿ ಆತ್ಮವಿಮರ್ಶೆ ಮಹಳ ಮುಖ್ಯವಾಗಿದೆ. ಆಂತಹ ಆತ್ಮವಿಮರ್ಶೆಯ ಮೂಲಕ ಬೆಳೆದವರು ಕುರ್ಕಾಲರು. ಸಾಹಿತಿಯಾಗಿ, ಶಿಕ್ಷಕರಾಗಿ, ಸಂಪಾದಕರಾಗಿ ಹೀಗೆ ನಾನಾ ವಲಯದ ಮುಖಾಂತರ ನುಡಿ-ಸೇವೆಗೈದ ಅವರಿಂದ ಸಾಹಿತ್ಯ ಲೋಕ ಇನ್ನಷ್ಟು ಶ್ರೀಮಂತಗೊಳ್ಳಲಿ ಎಂದು ನುಡಿದು ಶುಭಹಾರೈಸಿದರು.

ಸಾಹಿತಿ ಬಿ. ಎಸ್‌. ಕುರ್ಕಾಲ್‌ ದೀಪ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. 
ಅರ್ಹ ವ್ಯಕ್ತಿಗೆ ಪ್ರಶಸ್ತಿ ಲಭಿಸಿದೆ ಬಿಲ್ಲವರ ಅಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಪ್ರಶಸ್ತಿಯ ಘನತೆಗೆ ತಕ್ಕಂತೆ ಅರ್ಹ ವ್ಯಕ್ತಿಗೆ ಪ್ರಾಪ್ತಿಯಾಗಿದೆ. ಪ್ರಶಸ್ತಿಯ ಅರ್ಹತೆ ಪಡಕೊಂಡವರೆಲ್ಲರೂ ಸರ್ವ ಶ್ರೇಷ್ಠರು. ಭವಿಷ್ಯದಲ್ಲೂ ಇನ್ನಷ್ಟು ಪ್ರಾಮಾಣಿಕರಿಗೆ ಈ ಪ್ರಶಸ್ತಿಯನ್ನು ನೀಡುವ ಪ್ರಯತ್ನ ಮಾಡುತ್ತೇವೆ. ಅಸೋಸಿಯೇಶನ್‌ ಇಂದು ಎಲ್ಲ  ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡತ್ತಿದೆ ಎನ್ನಲು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.

ಪ್ರಸಾದದಂತೆ  ಸ್ವೀಕರಿಸಲು ಪ್ರಾಂಜಲ ಮನಸ್ಸಿನಿಂದ ಬಂದಿದ್ದೇನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಿ. ಎಸ್‌. ಕುರ್ಕಾಲ್‌ ಅವರು  ನಾನಿಂದು ಶ್ರೀ  ಗುರುನಾರಾಯಣ ಪ್ರಶಸ್ತಿಯನ್ನು ಪ್ರಸಾದ ದಂತೆ ಸ್ವೀಕರಿಸಲು ಪ್ರಾಂಜಲ ಮನಸ್ಸಿನಿಂದ ಬಂದಿದ್ದೇನೆ. ಕವಿವಾಣಿಯನ್ನು ಮೈಮನಗಳಲ್ಲಿ ತುಂಬಿಕೊಂಡು ಕೆಲಸ ಮಾಡಿದ್ದೇನೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಅವರಲ್ಲಿ ರಾಷ್ಟ್ರಪ್ರೇಮದ ಕಿಡಿ ಪ್ರಜ್ವಲಿಸುವಂತೆ ಮಾಡಲು ಸಾಕಷ್ಟು ಪ್ರಯತ್ನ ಮಾಡಿದ್ದೇನೆ. ವಿದ್ಯಾರ್ಥಿಗಳ ಏಳಿಗೆಗಾಗಿ, ಅವರ ವ್ಯಕ್ತಿತ್ವ ವಿಸಕನಕ್ಕಾಗಿ ಸಾಕಷ್ಟು ದುಡಿದಿ ದ್ದೇನೆ. ಶಾಲೆಯ ಶಿಸ್ತು ಪಾಲನೆಗಾಗಿ ನಾನು ನಿಷ್ಠುರನಾಗಿ ವರ್ತಿಸಿದ್ದುಂಟು. ಆದರೂ ವಿದ್ಯಾರ್ಥಿಗಳು ನನಗೆ ಅಪಾರ ಪ್ರೀತಿಯನ್ನು ಕೊಟ್ಟಿದ್ದಾರೆ. ಅದಕ್ಕೆ ಈ ಪ್ರಶಸ್ತಿ ಗರಿಯಾಗಿಸಿದೆ. ಮುಂಬಯಿಯ ನನ್ನ ಬರಹಗಾರ ಬಂಧುಗಳಲ್ಲಿ ಒಂದು ವಿನಂತಿ. ನಾವೆಲ್ಲರೂ ಕನ್ನಡ ಮಾತೆಯ ಸೇವಕರು. ಪರಸ್ಪರ ಸೌಹಾರ್ದ ಸಹಕಾರದಿಂದ ಮುಂದುವರಿ ಯೋಣ. ಈರ್ಷಾಸೂಯೆ ಸಲ್ಲದು. ನಾವು ಬೆಳೆಯೋಣ. ನಮ್ಮ ಜತೆಯಲ್ಲಿ ಇದ್ದವರನ್ನು ಬೆಳೆಯಲು ಬಿಡೋಣ. ಇನ್ನೊಬ್ಬರ ಪ್ರಗತಿಯನ್ನು ಕಂಡು ಸಂತೋಷ ಪಡೋಣ ಎನ್ನುತ್ತಾ ಈ ಪ್ರಶಸ್ತಿಗೆ ತನ್ನನ್ನು ಗುರುತಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಸಮಾರಂಭದ ವೇದಿಕೆಯಲ್ಲಿ ಗುಜರಾತ್‌ ಬಿಲ್ಲವ ಸಂಘದ ಅಧ್ಯಕ್ಷ ಮೋಹನ್‌ ಸಿ. ಪೂಜಾರಿ ಅಹ್ಮದಾಬಾದ್‌, ಪ್ರಶಸ್ತಿ ಪ್ರಾಯೋಜಕ, ಹಿರಿಯ ಪತ್ರಕರ್ತ ಎಂ. ಬಿ. ಕುಕ್ಯಾನ್‌, ಎನ್‌. ಟಿ. ಪೂಜಾರಿ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಲಹೆಗಾರರು,  ಸಾಹಿತಿಗಳಾದ ಡಾ| ಸುನೀತಾ ಎಂ. ಶೆಟ್ಟಿ,  ನ್ಯಾಯವಾದಿ  ವಸಂತ ಎಸ್‌. ಕಲಕೋಟಿ  ಅವರು ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಸೋಸಿಯೇಶನ್‌ನ ಉಪಾಧ್ಯಕ್ಷರು ಗಳಾದ ರಾಜ ವಿ. ಸಾಲ್ಯಾನ್‌, ಭಾಸ್ಕರ ವಿ. ಬಂಗೇರ, ಪುರುಷೋತ್ತಮ ಎಸ್‌. ಕೋಟ್ಯಾನ್‌, ಗೌರವ ಪ್ರಧಾನ  ಕೋಶಾಧಿಕಾರಿ ಮಹೇಶ್‌ ಸಿ. ಕಾರ್ಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೆ. ಕೋಟ್ಯಾನ್‌, ಭಾರತ್‌ ಬ್ಯಾಂಕಿನ  ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌, ಡಾ| ಕರುಣಾಕರ ಶೆಟ್ಟಿ ಪಣಿಯೂರು, ಹಿರಿಯ ಉದ್ಯಮಿ ಜಯ ಪೂಜಾರಿ, ಎಂ. ಎಸ್‌. ರಾವ್‌ ಅಹ್ಮದಾಬಾದ್‌, ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು, ಹರೀಶ್‌ ಜಿ. ಪೂಜಾರಿ ಕೊಕ್ಕರ್ಣೆ, ಅಕ್ಷಯ ಮಾಸಿಕದ ಸಿಬಂದಿ ಜಯರಾಮ ಜಿ. ನಾಯಕ್‌  ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧರ್ಮಪಾಲ ಜಿ. ಅಂಚನ್‌ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಮಮತಾ ನಾಯಕ್‌ ಪ್ರಾರ್ಥನೆಗೈದರು. ಸಹಾಯಕ ಸಂಪಾದಕ ಹರೀಶ್‌ ಹೆಜ್ಮಾಡಿ ಅತಿಥಿಗಳನ್ನು ಪರಿಚಯಿಸಿ, ಪುರಸ್ಕೃತರ ಸಮ್ಮಾನ ಪತ್ರ ವಾಚಿಸಿದರು. ಭರತ್‌ ಸುವರ್ಣ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಕು| ಸುಷ್ಮಾ ಪೂಜಾರಿ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್‌ ಎನ್‌. ಬಂಗೇರ ಅವರು ವಂದಿಸಿದರು.

Advertisement

ಡಾ| ಆಶಾಲತಾ ಟಿ. ಸುವರ್ಣ, ಡಾ| ವಿಶ್ವನಾಥ ಕಾರ್ನಾಡ್‌, ಅಶೋಕ್‌ ಎಂ.ಕೋಟ್ಯಾನ್‌, ಜ್ಯೋತಿ ಸುವರ್ಣ, ವಾಸು ವಿ. ಪೂಜಾರಿ ಬರೋಡಾ, ಬಾಬಾ ಪ್ರಸಾದ್‌ ಅರಸ, ಸುನಂದಾ  ಮೋಹನ್‌ ಪೂಜಾರಿ, ಚಿತ್ರಾಪು ಕೆ. ಎಂ. ಕೋಟ್ಯಾನ್‌, ಎಸ್‌. ಕೆ. ಸುಂದರ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 

ಶ್ರೀ  ಗುರುನಾರಾಯಣ ರಾತ್ರಿ ಶಾಲಾ ಹಳೆ ವಿದ್ಯಾರ್ಥಿಗಳಿಂದ  ನಾಟ್ಯ ವೈಭವವನ್ನು ಮತ್ತು  ಬಿಲ್ಲವರ ಅಸೋಸಿಯೇಶನ್‌ನ ಥಾಣೆ ಸ್ಥಳಿಯ ಸಮಿತಿಯ ಕಲಾವಿದರಿಂದ “ಸೋತು ಗೆಂದಿಯೊಲು’ ತುಳು ಏಕಾಂಕ ನಾಟಕ ಪ್ರದರ್ಶನಗೊಂಡಿತು.

ಒಳ್ಳೆಯ ಸಾಹಿತಿ, ಶಿಕ್ಷಕನಿಗೆ ಈ ಪ್ರಶಸ್ತಿ ಪ್ರಾಪ್ತಿಯಾಗಿರುವುದಕ್ಕಾಗಿ ಶಿರಬಾಗಿ ನಮಿಸುವೆ. ಕುರ್ಕಾಲರು ಸಮಗ್ರ ಮುಂಬಯಿಗರನ್ನು ಸಂತೃಪ್ತಿಪಡಿಸಿ ಬಾಳಿದವರು. ಶಿಶುಗೀತೆಗಳನ್ನು ಬರೆದು ಮಕ್ಕಳ ಮನಸ್ಸಿನ ಕವಿಯಾಗಿರುವುದೇ ಅವರ ಶ್ರೇಷ್ಠತನವಾಗಿದೆ. ಗುರು ಶಿಷ್ಯರನ್ನು ಒಗ್ಗೂಡಿಸಿದ ಅಪರೂಪದ ಸಂಘಟಕರಿಗೆ ಇಂತಹ ಗೌರವ ಸಮರ್ಥನೀಯ 
– ಡಾ| ಸುನೀತಾ ಎಂ. ಶೆಟ್ಟಿ (ನಗರದ ಹಿರಿಯ ಸಾಹಿತಿ).

ಸಾಹಿತಿ ಬಿ. ಎಸ್‌. ಕುರ್ಕಾಲ್‌ರಸಜ್ಜನಿಕೆ, ಸರಳತೆ ಸರ್ವರಿಗೂ ಮಾದರಿ. ಎಲ್ಲರನ್ನೂ ಪ್ರೋತ್ಸಾಹಿಸುವ ಧೀಮಂತ ವ್ಯಕ್ತಿತ್ವವುಳ್ಳವರು. ಇಂತಹ ಯೋಗ್ಯ ವ್ಯಕ್ತಿಗೆ ಯೋಗ್ಯ ಗೌರವ ಲಭಿಸಿರುವುದು ಪ್ರಶಂಸನೀಯ. ಕುರ್ಲಾಲರು ಕೇವಲ ಸಾಹಿತ್ಯ ಕ್ಷೇತ್ರದಲ್ಲಿ ತಾನು ಬೆಳೆದಿರುವುದಲ್ಲದೆ, ಇತರರನ್ನು ಬೆಳೆಸಿದ್ದಾರೆ ಎನ್ನಲು ಹೆಮ್ಮೆಯಾಗುತ್ತಿದೆ 
– ನ್ಯಾಯವಾದಿ ವಸಂತ ಕಲಕೋಟಿ
( ಹಿರಿಯ ಪತ್ರಕರ್ತ).

ವರದಿ-ಚಿತ್ರ:  ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next