Advertisement
ಕೆಲವೇ ದಿನಗಳ ಹಿಂದೆ ತಮ್ಮ ರಷ್ಯಾ ಪ್ರವಾಸದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅನೇಕ ಭಿನ್ನಾಭಿಪ್ರಾಯದ ನಡುವೆಯೂ ಭಾರತ-ಚೀನಾದ ಗಡಿಯಲ್ಲಿ ಕಳೆದ 40 ವರ್ಷಗಳಲ್ಲಿ ಶಾಂತಿ ನೆಲೆಸಿದೆ ಮತ್ತು ಒಂದೇ ಒಂದು ಗುಂಡು ಹಾರಿಲ್ಲ ಎಂದಿದ್ದರು. ಚೀನಾದ ವಿದೇಶಾಂಗ ವಕ್ತಾರರು ಪ್ರಧಾನಿಯವರ ಈ ಹೇಳಿಕೆಗೆ ಪ್ರಶಂಸೆಯನ್ನು ಕೂಡ ವ್ಯಕ್ತಪಡಿಸಿದ್ದರು. ಪ್ರಧಾನಿ ಯವರ ಹೇಳಿಕೆಯೇನೋ ನಿಜ. ಗುಂಡು ಹಾರಿಸದೇ ತಮಗೆ ಬೇಕಾದದ್ದನ್ನು ಪಡೆದುಕೊಳ್ಳುವ ಧೂರ್ತತನದಲ್ಲಿ ಚೀನೀಯರದು ಎತ್ತಿದ ಕೈ. ಎರಡು ವರ್ಷಗಳ ಹಿಂದಷ್ಟೆ ಸಿಕ್ಕಿಂನ ನಾಥೂಲ್ಲಾ ಗಡಿಯ ಮೂಲಕ ವ್ಯಾಪಾರ ಹಾಗೂ ಮಾನಸ ಸರೋವರ ಯಾತ್ರೆಗೆ ಅನುಮತಿ ನೀಡಿರುವ ಚೀನಾ ಈಗ ಅಚಾನಕ್ ಗಡಿ ತಂಟೆ ತೆಗೆದು 1962ರಲ್ಲಿ ಏನಾಗಿತ್ತೆಂದು ನೆನಪಿಸಿಕೊಳ್ಳಿ ಎಂದು ಕಾಲು ಕೆರೆದು ಜಗಳಕ್ಕೆ ನಿಂತಿದೆ. ಉಭಯ ದೇಶಗಳ ಸೈನಿಕರ ನಡುವೆ ಕೈ ಕೈ ಮಿಲಾಯಿಸಿದ ಘಟನೆ ಗಡಿ ಯಲ್ಲಿ ಶಾಂತಿ ಕದಡಿದೆ.
ಭಾರತ-ಚೀನಾ-ಭೂತಾನ್ ಮೂರು ದೇಶಗಳ ಗಡಿಯ ಸಂಗಮ ಸ್ಥಳವೆನಿಸಿದ ಭೂತಾನಿನ ದೋಕ್ಲಾಮ್ ಪಠಾರದಲ್ಲಿ ಚೀನಾದ ಕಡೆಯಿಂದ ರಸ್ತೆ ನಿರ್ಮಾಣದ ಪ್ರಯತ್ನಕ್ಕೆ ಭಾರತ ಹಾಗೂ ಭೂತಾನ್‌ನ ವಿರೋಧದಿಂದಾಗಿ ನಡೆದ ಈ ಘಟನೆ ಒಮ್ಮಿಂದೊಮ್ಮೆಗೆ ದಶಕಗಳಿಂದ ಶಾಂತವಾಗಿದ್ದ ಗಡಿಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಎರಡೂ ದೇಶಗಳೂ ತಲಾ ಮೂರು ಸಾವಿರ ಸೈನಿಕರನ್ನು ಈಗಾಗಲೇ ನಿಯೋಜಿಸಿವೆ ಎಂದು ವರದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿ, ಮುಂಬರುವ ಅಮೆರಿಕ, ಭಾರತ- ಜಪಾನ್‌ನ ಜಂಟಿ ಮಿಲಿಟರಿ ಸಮರಾಭ್ಯಾಸ, OBOR ಪರಿಯೋಜನೆಗೆ ಭಾರತದ ಬಹಿಷ್ಕಾರದಂತಹ ವಿಷಯಗಳಿಂದಾಗಿ ಭಾರತ-ಚೀನಾ ಸಂಬಂಧ ನಿಮ್ನ ಸ್ತರಕ್ಕೆ ತಲುಪಿದೆ. ಒತ್ತಡ ತಂತ್ರ ಅನುಸರಿಸುವ ಮೂಲಕ ಭಾರತವನ್ನು ಬೆದರಿಸುವ ಉದ್ದೇಶ್ಯದಿಂದಲೇ ಚೀನಾ ಈ ಘಟನೆಗೆ ಮುನ್ನುಡಿ ಬರೆದಿದೆ ಎನ್ನುವುದು ಸ್ಪಷ್ಟ. ಚೀನಾದ ಸರಕಾರಿ ಮಾಧ್ಯಮ “ಗ್ಲೋಬಲ್ ಟೈಮ…’ ಭಾರತವನ್ನು ಹೀಯಾಳಿಸುವ ಲೇಖನಗಳನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚಾಗಿ ಪ್ರಕಟಿಸುತ್ತಾ ಬಂದಿದೆ. ಭಾರತದ ಪ್ರಗತಿಯನ್ನು ಸಹಿಸದ ಚೀನಾ, ಪಾಕಿಸ್ಥಾನದ ಮೂಲಕ ಭಾರತವನ್ನು ಕಟ್ಟಿಹಾಕುವ ತನ್ನ ಇದುವರೆಗಿನ ಯತ್ನ ಅಷ್ಟೊಂದು ಯಶ ಕಾಣದಿರುವುದರಿಂದ ಹತಾಶವಾಗಿ ಇದೀಗ ಗಡಿಯಲ್ಲಿ ಘರ್ಷಣೆಯ ಸ್ಥಿತಿ ನಿರ್ಮಿಸಿ ಲಾಭ ಪಡೆಯುವ ಕುತ್ಸಿತ ಪ್ರಯತ್ನಕ್ಕೆ ಕೈ ಹಾಕಿದೆ. ಈ ಹಿಂದೆಯೂ ಅನೇಕ ಬಾರಿ ಗಡಿ ರೇಖೆ ಉಲ್ಲಂಘಿಸಿ ಉದ್ದಟತನ ತೋರುತ್ತಾ ಬಂದಾಗೆಲ್ಲ ಸಂಯಮದಿಂದ ನಡೆದುಕೊಂಡ ಭಾರತದ ಒಳ್ಳೆಯತನವನ್ನು ಅಪಾರ್ಥಮಾಡಿಕೊಂಡ ಅದರ ಈ ಬಾರಿಯ ನಡೆ ಧೂರ್ತತನದ ಎಲ್ಲೆ ಮೀರುವಂತಹದ್ದಾಗಿದೆ. ಇತಿಹಾಸ ನೆನಪಿಸಿ ಅವಮಾನ
1962ರ ಸೋಲನ್ನು ನೆನಪಿಸಿಕೊಳ್ಳಿ. ಮೊದಲು ಸೇನೆಯನ್ನು ಹಿಂತೆಗೆದುಕೊಂಡರೆ ಮಾತ್ರ ಮಾತುಕತೆ ಎನ್ನುವ, ಕೈಲಾಸ ಮಾನಸ ಸರೋವರ ಯಾತ್ರೆಗೆ ಹೊರಟವರನ್ನು ವಾಪಾಸು ಕಳು ಹಿಸಿದ ರೀತಿ ಎಲ್ಲವೂ ಚೀನಾದ ದಬ್ಟಾಳಿಕೆಯ ಪ್ರವೃತ್ತಿಯನ್ನು ಎತ್ತಿತೋರಿಸುತ್ತದೆ. ಚೀನಾದ ವಿರುದ್ಧ ಯಾವುದೇ ಹೇಳಿಕೆ ನೀಡುವ ಮೊದಲು ನೂರು ಬಾರಿ ಯೋಚಿಸುತ್ತಿದ್ದ ಪರಂಪರೆಯನ್ನು ಬದಿಗಿಟ್ಟು ಮೊದಲ ಬಾರಿಗೆ ರಕ್ಷಣಾ ಮಂತ್ರಿಯೂ ಆಗಿರುವ ವಿತ್ತ ಮಂತ್ರಿ ಅರುಣ್ ಜೇಟ್ಲಿಯವರು 1962ರ ಪರಿಸ್ಥಿತಿಯಲ್ಲಿ ಭಾರತ ಈಗ ಇಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಚೀನಾದ ಸರ್ವೋಚ್ಚ ನಾಯಕರ ಇಚ್ಛೆಯ ಮೇರೆಗೆ ಭಾರತಕ್ಕೆ ಪಾಠ ಕಲಿಸುವ ಉದ್ದೇಶದಿಂದ ಈ ವಿದ್ಯಮಾನಗಳು ನಡೆದಿವೆ ಎನ್ನಲಾಗುತ್ತಿದೆ.
Related Articles
Advertisement
ಚೀನಾದ ದಬ್ಟಾಳಿಕೆ ವಿರುದ್ಧ ಹೆಚ್ಚುತ್ತಿರುವ ವಿರೋಧವಿಶ್ವದ ದೊಡ್ಡಣ್ಣನಾಗಬಯಸುತ್ತಿರುವ ಚೀನಾದ ಅರ್ಥ ವ್ಯವಸ್ಥೆಯೇನೂ ಹೇಳಿಕೊಳ್ಳುವಷ್ಟು ಉತ್ತಮ ಸ್ಥಿತಿಯಲ್ಲಿಲ್ಲ. ಒನ್ ರೋಡ್ -ಒನ್ ಬೆಲ್ಟ್ನಂತಹ ದುಬಾರಿ ವೆಚ್ಚದ ಯೋಜನೆಗಳನ್ನು ರೂಪಿಸಿ ಚಿಕ್ಕ ಪುಟ್ಟ ದೇಶಗಳಿಗೆ ಪ್ರಗತಿಯ ಸುಂದರ ಕನಸು ತೋರಿಸಿ ಲಾಭಬಡುಕತನ ತೋರುತ್ತಿರುವ ಚೀನಾದ ನಿಜ ಬಣ್ಣ ಈಗಾಗಲೆ ಬಯಲಾಗುತ್ತಿದೆ. ಪಾಕಿಸ್ಥಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾದಂತಹ ದೇಶಗಳು ಹೆಚ್ಚಿನ ಬಡ್ಡಿದರದಲ್ಲಿ ಚೀನಾದಿಂದ ಪಡೆದ ಸಾಲ ತೀರಿಸಲಾಗದೇ ದಿವಾಳಿಯ ಸ್ಥಿತಿಗೆ ಬರಬೇಕಾಗಬಹುದೆಂದು ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದೆ. ಆಫ್ರಿಕಾ ಸಹಿತ ಏಶ್ಯಾದ ಅನೇಕ ದೇಶಗಳಲ್ಲಿ ಚೀನಾದ ನೀತಿಯ ವಿರುದ್ಧ ಈಗಾಗಲೇ ಪ್ರತಿಭಟನೆ ಶುರುವಾಗಿದೆ. ಚೀನಾದ ದಬ್ಟಾಳಿಕೆಯ ಪೃವೃತ್ತಿಯ ವಿರುದ್ಧ ನಿಧಾನವಾಗಿ ಯಾದರೂ ಸರಿ ವಿಶ್ವವೇ ಎಚ್ಚೆತ್ತುಕೊಳ್ಳುತ್ತಿದೆ. ವಿಶ್ವ ನಾಯಕತ್ವದ ಕನಸು ಕಾಣುತ್ತಿರುವ ದೇಶವೊಂದಕ್ಕೆ ಇರಬೇಕಾದ ಬೆಂಬಲ ವಿಶ್ವಸಮುದಾಯದ ನಡುವೆ ಚೀನಾಕ್ಕೆ ಇದೆಯೇ? ಕಮ್ಯುನಿ… ಸರ್ವಾಧಿಕಾರ ತತ್ವದ ಅಡಿಯಲ್ಲಿ, ಕೋಟ್ಯಂತರ ಜನರ ಆಶೋತ್ತರಗಳನ್ನು ಹೊಸಕಿ ಹಾಕಿ ಗಳಿಸಿದ ಸಂಪತ್ತಿನಿಂದ ಬೀಗುತ್ತಿರುವ ಡ್ರಾಗನ್‌ನ ಅರ್ಥವ್ಯವಸ್ಥೆ 1991ರಲ್ಲಿ ಸೋವಿಯೆತ್ ರಷ್ಯಾ ನೆಲಕಚ್ಚಿದಂತೆ ಧರಾಶಾಯಿಯಾದರೂ ಅಚ್ಚರಿಯಿಲ್ಲ. 1962ರಲ್ಲಿ ಆದ ಅಪಮಾನದ ಅನಂತರ ನಡೆದ 1967, 1986-87 ಗಡಿ ಘರ್ಷಣೆಗಳಲ್ಲಿ ಭಾರತ ನೀಡಿದ ಪ್ರಹಾರದ ಆಘಾತವನ್ನು ಪೀಪಲ್ ಲಿಬರೇಶನ್ ಆರ್ಮಿ ನೆನಪಿಸಿಕೊಳ್ಳಬೇಕಿದೆ. ಆತ್ಮ ರಕ್ಷಣೆ ಮಾಡಿಕೊಳ್ಳುವ ಸಂಪೂರ್ಣ ಅಧಿಕಾರ ಹಾಗೂ ಕ್ಷಮತೆ ಭಾರತಕ್ಕಿದೆ. ಸಣ್ಣ ಪ್ರಮಾಣದ ಘರ್ಷಣೆಯೇನಾದರೂ ನಡೆದರೂ ಅಂತಾರಾಷ್ಟ್ರೀಯ ಸಮುದಾಯದೆದುರು ಚೀನಾ ತಲೆತಗ್ಗಿಸುವಂತಹ ಇದಿರೇಟನ್ನು ಭಾರತದ ಸೇನೆ ನೀಡಬಲ್ಲದು. ಸದ್ಯದ ಸೇನಾ ನಾಯಕತ್ವವಾಗಲೀ ಅಥವಾ ಅದರ ಹಿಂದಿರುವ ರಾಜಕೀಯ ನಾಯಕತ್ವವಾಗಲೀ ಅತ್ಯಂತ ಸಮರ್ಥವಾಗಿದ್ದು ಚೀನಾದ ಧೂರ್ತತನಕ್ಕೆ ರಾಜತಾಂತ್ರಿಕ ಮತ್ತು ಸೈನಿಕ ಉತ್ತರ ನೀಡಲು ಸಮರ್ಥವಾಗಿದೆ. ಸೈನಿಕ ಸಂಘರ್ಷದಂತಹ ವಿಪತ್ತಿನ ಸ್ಥಿತಿಯಲ್ಲಿ ಪೂರ್ಣಕಾಲೀನ ರಕ್ಷಣಾ ಸಚಿವರಿಲ್ಲದಿರುವುದು ಸಮಸ್ಯೆಯಾಗಬಹುದು. ವಿಯೆಟ್ನಾಮ್‌ನಂತಹ ಚಿಕ್ಕ ದೇಶ ಅಮೆರಿಕದಂತಹ ಸೂಪರ್ ಪವರನ್ನು ಮಣಿಸಿದ ಉದಾಹರಣೆ ಯಿರುವಾಗ ಭಾರತದಂತಹ ಶಕ್ತ ರಾಷ್ಟ್ರ ಚೀನಾಕ್ಕೆ ಬುದ್ಧಿ ಕಲಿಸಲು ಅಶಕ್ತವೆಂದು ಪರಿಗಣಿಸುವುದು ಅದರ ಮೂರ್ಖತನವೇ ಸರಿ. ಬೈಂದೂರು ಚಂದ್ರಶೇಖರ ನಾವಡ