Advertisement

ಶ್ರೀಕೃಷ್ಣದೇವರಾಯ ಪ್ರತಿಮೆ ಸ್ಥಾಪನೆ ಕೂಗು

04:50 PM Mar 23, 2022 | Team Udayavani |

ಹೊಸಪೇಟೆ: ನಗರದ ರೈಲು ನಿಲ್ದಾಣಕ್ಕೆ ವಿಜಯನಗರ ಸಾಮ್ರಾಜ್ಯದ ಪ್ರಖ್ಯಾತ ಅರಸ ಶ್ರೀ ಕೃಷ್ಣದೇವರಾಯರ ಹೆಸರನ್ನು ನಾಮಕರಣ ಮಾಡಬೇಕು ಎಂಬ ಕೂಗು ಕೇಳಿಬಂದ ಬೆನ್ನಲ್ಲಿಯೇ ಇದೀಗ ವಿಶ್ವವಿಖ್ಯಾತ ಹಂಪಿಯಲ್ಲಿ ಶ್ರೀಕೃಷ್ಣ ದೇವರಾಯ ಪ್ರತಿಮೆ ಸ್ಥಾಪನೆ ಮಾಡುವ ಮೂಲಕ ಶ್ರೀ ಕೃಷ್ಣದೇವರಾಯ ವೃತ್ತ ಎಂದು ನಾಮಕರಣ ಮಾಡಬೇಕೆಂಬ ಕೂಗು ಬಲವಾಗಿ ಕೇಳಿ ಬಂದಿದೆ.

Advertisement

ಶ್ರೀಕೃಷ್ಣದೇವರಾಯ (ಕ್ರಿ.ಶ. 1510-ಕ್ರಿ. ಶ.1529) ಆಳ್ವಿಕೆ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗವಾಗಿದೆ. ಶ್ರೀಕೃಷ್ಣದೇವರಾಯನ ಆಡಳಿತಾವ ಧಿಯಲ್ಲಿ ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಪ್ರಬಲ ಸಾಮ್ರಾಜ್ಯವಾಗಿ ಬೆಳೆದಿತ್ತು. ಕಲೆ, ಸಾಹಿತ್ಯ, ಸಂಸ್ಕೃತಿಗೆ ಶ್ರೀಕೃಷ್ಣದೇವರಾಯ ಒತ್ತು ನೀಡಿದ್ದರು. ಶ್ರೀಕೃಷ್ಣದೇವರಾಯನ ಆಳ್ವಿಕೆ ಕಾಲವನ್ನು ಇತಿಹಾಸಕಾರರು ಕೂಡ ವಿಜಯನಗರ ಸಾಮ್ರಾಜ್ಯದ ಸುವರ್ಣಯುಗ ಎಂದು ಗುರುತಿಸುತ್ತಾರೆ. ಇಂಥ ಪ್ರಬಲ ಅರಸನ ಹೆಸರನ್ನು ಹೊಸಪೇಟೆಯ ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ.

ವಿಜಯನಗರ ಸಾಮ್ರಾಜ್ಯದ ಪ್ರಬಲ ದೊರೆ ಶ್ರೀಕೃಷ್ಣದೇವರಾಯರ ಹೆಸರನ್ನು ಹೊಸಪೇಟೆ ರೈಲು ನಿಲ್ದಾಣಕ್ಕೆ ಇಡಬೇಕು ಎಂದು ಈಗಾಗಲೇ ಹಲವು ಬಾರಿ ಸಂಘಸಂಸ್ಥೆಗಳು ಮನವಿ ಮಾಡಿಕೊಂಡಿವೆ. ಈಗ ರೈಲ್ವೆ ಮತ್ತು ಪ್ರವಾಸೋದ್ಯಮ ಇಲಾಖೆಗಳು ಜಂಟಿಯಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಹೊಸಪೇಟೆ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಿವೆ. ಈ ನಿಲ್ದಾಣ ಶೀಘ್ರವೇ ಲೋಕಾರ್ಪಣೆಗೊಳ್ಳಲಿದೆ. ಹಾಗಾಗಿ ಶ್ರೀಕೃಷ್ಣದೇವರಾಯರ ಹೆಸರನ್ನು ರೈಲು ನಿಲ್ದಾಣಕ್ಕೆ ನಾಮಕರಣ ಮಾಡಬೇಕು ಎಂದು ಸಂಘಸಂಸ್ಥೆಗಳು ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡಿವೆ.

ಹಂಪಿ ಸಾಸಿವೆಕಾಳು ಗಣಪತಿ ಮಂಟಪದ ಬಳಿಯ ವೃತ್ತದಲ್ಲಿ ಶ್ರೀಕೃಷ್ಣದೇವರಾಯರ ಪುತ್ಥಳಿ ಸ್ಥಾಪನೆ ಮಾಡಿ, ಆ ವೃತ್ತಕ್ಕೆ ಶ್ರೀಕೃಷ್ಣದೇವರಾಯರ ಹೆಸರನ್ನು ಇಡಬೇಕು ಎಂದು ಹಂಪಿಯ ಶ್ರೀಕೃಷ್ಣದೇವರಾಯ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಪ್ರತಿಷ್ಠಾನದ ಸದಸ್ಯರು ಒತ್ತಾಯಿಸಿದ್ದಾರೆ.

ಈ ಬಗ್ಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳಿಗೂ ಒತ್ತಾಯಿಸಿದ್ದಾರೆ. ನಗರದ ಜೋಳದರಾಶಿ ಗುಡ್ಡದ ಮೇಲೂ ಶ್ರೀಕೃಷ್ಣದೇವರಾಯರ ಪುತ್ಥಳಿ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಚಿತ್ರದುರ್ಗದಲ್ಲಿ ಕಂಚಿನ ಪುತ್ಥಳಿ ನಿರ್ಮಾಣ ಮಾಡಲಾಗುತ್ತಿದೆ. ಈ ಪುತ್ಥಳಿಯನ್ನು ಜೋಳದರಾಶಿ ಗುಡ್ಡದ ಮೇಲೆ ಸ್ಥಾಪನೆ ಮಾಡಲು ಎಲ್ಲ ಸಿದ್ಧತೆ ಕೂಡ ನಡೆದಿದೆ. ಹಾಗಾಗಿ ಹೊಸಪೇಟೆ ರೈಲು ನಿಲ್ದಾಣಕ್ಕೂ ಶ್ರೀಕೃಷ್ಣದೇವರಾಯರ ಹೆಸರನ್ನು ನಾಮಕರಣ ಮಾಡಬೇಕೆಂಬ ಕೂಗು ಎದ್ದಿದೆ.

Advertisement

ಹೊಸಪೇಟೆ ಜಿಲ್ಲಾಕೇಂದ್ರವನ್ನಾಗಿ ವಿಜಯನಗರ ಜಿಲ್ಲೆ ರಚನೆಯಾಗಿರುವ ಹಿನ್ನೆಲೆಯಲ್ಲಿ ಶ್ರೀಕೃಷ್ಣದೇವರಾಯರ ಹೆಸರನ್ನು ಮುನ್ನಲೇಗೆ ತರಬೇಕು. ವಿಜಯನಗರ ಸಾಮ್ರಾಜ್ಯಕ್ಕೆ ಶ್ರೀಕೃಷ್ಣದೇವರಾಯರ ಕೊಡುಗೆ ಮಹತ್ತರದ್ದಾಗಿದೆ. ಹಾಗಾಗಿ ಶ್ರೀಕೃಷ್ಣದೇವರಾಯರ ಹೆಸರನ್ನು ಹಂಪಿ, ಕಮಲಾಪುರ ಮತ್ತು ಹೊಸಪೇಟೆ ಭಾಗದಲ್ಲಿ ರಾರಾಜಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೋಡಿಕೊಳ್ಳಬೇಕು ಎಂದು ಸಂಘಸಂಸ್ಥೆಗಳ ಪದಾ ಧಿಕಾರಿಗಳು ಒತ್ತಾಯಿಸಿದ್ದಾರೆ. ಹೊಸಪೇಟೆಯ ರೈಲು ನಿಲ್ದಾಣವನ್ನು ಹಂಪಿ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿಸಲಾಗಿದೆ.

ಈ ನಿಲ್ದಾಣಕ್ಕೆ ಶ್ರೀಕೃಷ್ಣದೇವರಾಯರ ಹೆಸರನ್ನು ಇಟ್ಟರೆ ಇನ್ನಷ್ಟು ಮೆರಗು ಬರಲಿದೆ. ಈ ಮೂಲಕ ಶ್ರೀಕೃಷ್ಣದೇವರಾಯರನ್ನು ಇಡೀ ಜಗತ್ತಿಗೆ ಪರಿಚಯಿಸಿದಂತೆ ಆಗಲಿದೆ. ಹಂಪಿಗೆ ದೇಶ-ವಿದೇಶಿ ಪ್ರವಾಸಿಗರು ಭೇಟಿ ನೀಡುವುದರಿಂದ ಶ್ರೀಕೃಷ್ಣದೇವರಾಯರ ಹೆಸರನ್ನು ಅಜರಾಮರಗೊಳಿಸಿದಂತಾಗಲಿದೆ ಎಂದು ಸಂಘಗಳ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಹೊಸಪೇಟೆ ರೈಲು ನಿಲ್ದಾಣಕ್ಕೆ ಶ್ರೀಕೃಷ್ಣದೇವರಾಯರ ಹೆಸರನ್ನಿಡಬೇಕು. ಈ ಕುರಿತು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಅವರಿಗೂ ಪತ್ರ ಬರೆದಿರುವೆ. ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೂ ಮನವಿ ಮಾಡಿಕೊಂಡಿರುವೆ – ಅಶೋಕ್‌ ಜೀರೆ, ಅಧ್ಯಕ್ಷರು, ಹುಡಾ, ಹೊಸಪೇಟೆ.

ಹಂಪಿ ಸಾಸಿವೆಕಾಳು ಮಂಟಪದ ಬಳಿಯ ವೃತ್ತದಲ್ಲಿ ಶ್ರೀಕೃಷ್ಣದೇವರಾಯರ ಪ್ರತಿಮೆ ಸ್ಥಾಪಿಸಿ, ಈ ವೃತ್ತಕ್ಕೆ ಶ್ರೀಕೃಷ್ಣದೇವರಾಯರ ಹೆಸರನ್ನಿಡಬೇಕು – ಎಚ್‌. ಹುಲುಗಪ್ಪ, ವಿರುಪಾಕ್ಷಿ, ಶ್ರೀಕೃಷ್ಣದೇವರಾಯ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಪ್ರತಿಷ್ಠಾನದ ಸದಸ್ಯರು, ಹಂಪಿ

Advertisement

Udayavani is now on Telegram. Click here to join our channel and stay updated with the latest news.

Next