Advertisement

ಹೈಡ್ರಾಕ್ಸಿಕ್ಲೊರೋಕ್ವಿನ್‌ ಅಪಾಯದ ಬಗ್ಗೆ ಅರಿವಿರಲಿ

11:54 PM Apr 12, 2020 | Hari Prasad |

ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೊರೋಕ್ವಿನ್‌ ರಫ್ತು ಮೇಲಿನ ನಿಷೇಧವನ್ನು ಭಾರತ ಸಡಿಲಿಸಿರುವುದರಿಂದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕೇಂದ್ರ ಸರಕಾರಕ್ಕೆ ತುಂಬು ಹೃದಯದ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ಕೆಲವು ವಾರಗಳಿಂದ ಅವರು ಹೈಡ್ರಾಕ್ಸಿಕ್ಲೊರೋಕ್ವಿನ್‌ ಬಗ್ಗೆ ಧ್ವನಿಯೆತ್ತುತ್ತಲೇ ಬಂದಿದ್ದಾರೆ. ಅಮೆರಿಕ ವಿನಂತಿಯ ಬೆನ್ನಲ್ಲೇ, ಬ್ರೆಜಿಲ್‌ ಸಹಿತ ಅನೇಕ ರಾಷ್ಟ್ರಗಳೀಗ ಈ ಔಷಧ ರಫ್ತು ಮಾಡಲು ಭಾರತವನ್ನು ವಿನಂತಿಸುತ್ತಿವೆ.

Advertisement

ಭಾರತವೇ ಹೈಡ್ರಾಕ್ಸಿಕ್ಲೊರೋಕ್ವಿನ್‌ನ ಬಹುದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದು, ಪ್ರಪಂಚದ 70 ಪ್ರತಿಶತ ಬೇಡಿಕೆಯನ್ನು ಪೂರೈಸುತ್ತದೆ ಎಂಬುದು ಗಮನಾರ್ಹ. ಮಾರ್ಚ್‌ ತಿಂಗಳಲ್ಲೇ ಟ್ರಂಪ್‌, ಕೊರೊನಾ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೊರೋಕ್ವಿನ್‌ ಬಳಸಲು ಅಮೆರಿಕದ ಫ‌ುಡ್‌ ಆ್ಯಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಷನ್‌(ಎಫ್ಡಿಎ) ಅನುಮತಿ ಕೊಟ್ಟಿದೆ ಎಂದು ಹೇಳಿದ್ದರು.

ಆದರೆ ಎಫ್ಡಿಎ, ತಾನು ಹಾಗೆ ಹೇಳೇ ಇಲ್ಲವೆಂದು ಟ್ರಂಪ್‌ ಮಾತನ್ನು ಅಲ್ಲಗಳೆದಿತ್ತು! ಅನಂತರ ಟ್ರಂಪ್‌, ಈ ಔಷಧವನ್ನು “ಸಹಾನುಭೂತಿಯ ಬಳಕೆ’ಯಡಿ ಬಳಸಲು… ಅಂದರೆ, ಪ್ರಾಣಾಪಾಯ ಎದುರಿಸುತ್ತಿರುವ ರೋಗಿಯ ಚಿಕಿತ್ಸೆಗೆ ಹಾಗೂ ವೈದ್ಯರಿಗೆ ಮುನ್ನೆಚ್ಚರಿಕೆಯಾಗಿ ಈ ಔಷಧ ಕೊಡಲು ನಿರ್ಧರಿಸಿರುವುದಾಗಿ ಹೇಳಿದರು. ಆದರೆ, ಟ್ರಂಪ್‌ ಮೊದಲ ಹೇಳಿಕೆಯೇ ವಿಶ್ವಾದ್ಯಂತ ಬಹಳ ಸುದ್ದಿಯಾಗಿಬಿಟ್ಟಿತು. ಹೈಡ್ರಾಕ್ಸಿಕ್ಲೊರೋಕ್ವಿನ್‌ ಕೊರೊನಾಗೆ ರಾಮಬಾಣ ಎಂಬ ಪುರಾವೆಯಿಲ್ಲದ ಸುದ್ದಿ ವಿಶ್ವಾದ್ಯಂತ ಹರಡಿಬಿಟ್ಟಿತು. ತತ್ಪರಿಣಾಮವಾಗಿ ಕೆಲವು ದಿನಗಳಿಂದ ವಿಶ್ವದ ಅನೇಕ ಭಾಗಗಳಲ್ಲಿ ಈ ಔಷಧದ ಅನಗತ್ಯ ಪ್ರಯೋಗಗಳೂ ನಡೆಯಲಾರಂಭಿಸಿವೆ. ಔಷಧಾಲಯಗಳು ಹಣದಾಸೆಗೆ, ಜನರಿಗೆ ಮಾರಲಾರಂಭಿಸಿವೆ.

ಅನೇಕ ವೈರಾಣು ತಜ್ಞರು ಮತ್ತು ಪರಿಣತರು, “ಹೈಡ್ರಾಕ್ಸಿಕ್ಲೊರೋಕ್ವಿನ್‌ ಕುರಿತು ಅತಿ ಉತ್ಸಾಹ ತೋರಿಸುವುದು ಅಪಾಯಕಾರಿ’ ಎಂದು ಎಚ್ಚರಿಸುತ್ತಿದ್ದಾರೆ. ಆದಾಗ್ಯೂ, ಇದನ್ನು ಪ್ರಯೋಗಾಲಯದಲ್ಲಿ ಕೊರೊನಾ ವೈರಸ್‌ ವಿರುದ್ಧ ಪ್ರಯೋಗ ಮಾಡಲಾಗುತ್ತಿದೆಯಾದರೂ ಇದುವರೆಗೂ ಸಂಪೂರ್ಣವಾಗಿ ಕ್ಲಿನಿಕನ್‌ ಟ್ರಯಲ್‌ಗಳು ಆಗಿಲ್ಲ.
ಐಸಿಎಂಆರ್‌(ಇಂಡಿಯನ್‌ ಕೌನ್ಸಿಲ್‌ ಫಾರ್‌ ಮೆಡಿಕಲ್‌ ರಿಸರ್ಚ್‌ನ) ಹಿರಿಯ ವಿಜ್ಞಾನಿ ರಮನ್‌ ಗಂಗಾಖೇಡ್ಕರ್‌ ಅವರು, “ಸದ್ಯಕ್ಕೆ ಈ ಔಷಧವನ್ನು ಸೋಂಕಿನ ಹೆಚ್ಚು ಅಪಾಯವಿರುವ(ಹೈರಿಸ್ಕ್ ) ಕೆಟಗರಿಗಷ್ಟೇ ಕೊಡಲಾಗುತ್ತಿದ್ದು, ಎಲ್ಲರೂ ಬಳಸಬಾರದು’ ಎಂದು ಎಚ್ಚರಿಸುತ್ತಾರೆ.

ಕ್ಲಿನಿಕಲ್‌ ಟ್ರಯಲ್‌ಗಳು ಇನ್ನೂ ಮುಗಿದಿಲ್ಲಎಂದು ಹೇಳಿದರೂ ಕೆಲವರು ಅಪಾಯ ಮೈಮೇಲೆ ಎಳೆದುಕೊಳ್ಳುತ್ತಿರುವ ಉದಾಹರಣೆಗಳೂ ಸಾಕಷ್ಟಿವೆ. ಟ್ರಂಪ್‌, ಹೈಡ್ರಾಕ್ಸಿಕ್ಲೊರೋಕ್ವಿನ್‌ ಬಗ್ಗೆ ಮಾತನಾಡುತ್ತಿದ್ದಂತೆಯೇ, ನೈಜೀರಿಯಾದಲ್ಲಿ ಅನೇಕರು ಈ ಔಷಧ ಖರೀದಿಗೆ ಮುಗಿಬಿದ್ದು, ಈಗ ಓವರ್‌ ಡೋಸ್‌ನಿಂದಾಗಿ ಆಸ್ಪತ್ರೆ ಸೇರಿ, ಜೀವನ್ಮರಣದ ನಡುವೆ ಒದ್ದಾಡುತ್ತಿರುವ ವರದಿಗಳು ಬಂದಿವೆ.

Advertisement

ಬ್ರಿಟನ್‌ನಲ್ಲಿಯೂ ಕೆಲವು ಘಟನೆಗಳು ವರದಿಯಾಗಿವೆ. ಅಷ್ಟೇ ಏಕೆ, ಕೆಲವು ದಿನಗಳ ಹಿಂದೆ ಅಸ್ಸಾಂನಲ್ಲಿ ಹಠಾತ್ತನೆ ಮೃತಪಟ್ಟ ವೈದ್ಯರೊಬ್ಬರು ಕೂಡ ಹೈಡ್ರಾಕ್ಸಿಕ್ಲೊರೋಕ್ವಿನ್‌ ಸೇವಿಸಿದ್ದರು ಎಂದು ಹೇಳಲಾಗುತ್ತಿದೆ. ಮಲೇರಿಯಾ ವಿರೋಧಿ ಔಷಧಿಯಾಗಿ ಬಳಸಲಾಗುವ ಹೈಡ್ರಾಕ್ಸಿಕ್ಲೊರೋಕ್ವಿನ್‌ನ ಓವರ್‌ಡೋಸ್‌ನಿಂದ ಕುರುಡುತನ, ಖನ್ನತೆ ಮತ್ತು ಹೃದಯ ವೈಫ‌ಲ್ಯವೂ(ಸಾವು) ಆಗಬಲ್ಲದು.

ನೆನಪಿರಲಿ, ಈಗಲೂ ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಅನೇಕ ವೈಜ್ಞಾನಿಕ ಸಂಸ್ಥೆಗಳು ಕೋವಿಡ್‌-19 ಚಿಕಿತ್ಸೆಗೆ ಅಥವಾ ತಡೆಗಟ್ಟುವಿಕೆಗೆ ಪರಿಹಾರ ಎಂದು ಈ ಔಷಧವವನ್ನು ಒಪ್ಪಿಲ್ಲ. ಚೀನ, ಫ್ರಾನ್ಸ್‌ನಲ್ಲಿ ಈ ವಿಚಾರದಲ್ಲಿ ಪ್ರಯೋಗ ನಡೆದಿದೆ ಯಾದರೂ, ಫ‌ಲಿತಾಂಶ ತಿಳಿಯಲು ಸಮಯ ಹಿಡಿಯಬಹುದು. ಹೀಗಾಗಿ, ನಮ್ಮ ವೈದ್ಯಕೀಯ ವಲಯ, ಆರೋಗ್ಯ ಇಲಾಖೆಗಳ ಎಚ್ಚರಿಕೆಯನ್ನು ಎಲ್ಲರೂ ಗಮನವಿಟ್ಟು ಕೇಳಿಸಿಕೊಳ್ಳಬೇಕು. ಜನರು ಸೋಷಿಯಲ್‌ ಮೀಡಿಯಾಗಳಲ್ಲಿ ಬರುವ ಸುಳ್ಳು ಸುದ್ದಿಗಳನ್ನು ನಂಬಿ ಅನಗತ್ಯ ಪ್ರಯೋಗಗಳಿಗೆ ಮುಂದಾಗಿ, ಸಂಚಕಾರ ತಂದುಕೊಳ್ಳದಿರಿ.

Advertisement

Udayavani is now on Telegram. Click here to join our channel and stay updated with the latest news.

Next