Advertisement

ಸಂಚಾರಕ್ಕೆ ಶಾಶ್ವತ ಪರಿಹಾರ ಬೇಕು

11:52 AM Mar 08, 2017 | |

ಸ್ಟೀಲ್‌ ಬ್ರಿಡ್ಜ್, ಫ್ಲೈಓವರ್‌ಗಳೆಲ್ಲವೂ ತಾತ್ಕಾಲಿಕ ಪರಿಹಾರವಷ್ಟೇ ಎನ್ನುತ್ತಾರೆ ನಗರ ಮೂಲಸೌಕರ್ಯ ಸಂಶೋಧನಾ ಸಂಸ್ಥೆ ಗುಬ್ಬಿ ಲ್ಯಾಬ್ಸ್ನ ಮುಖ್ಯಸ್ಥ ಸುಧೀರ್‌. ಜತೆಗೆ, ಇಂದಿನ ಸನ್ನಿವೇಶಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆ, ಸಂಚಾರ ನಿಯಮಗಳನ್ನು ಅಪ್‌ಡೇಟ್‌ ಮಾಡುವ ಅಗತ್ಯವಿದೆ ಎಂಬುದು ಅವರ ವಾದ. 

Advertisement

* ಎಚ್‌.ಎಸ್‌.ಸುಧೀರ, ಗುಬ್ಬಿ ಲ್ಯಾಬ್ಸ್, ನಗರ ಮೂಲ ಸೌಕರ್ಯ ಸಂಶೋಧನಾ ಸಂಸ್ಥೆ 
 ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಾರ್ಷಿಕ 1.5 ಕೋಟಿಯಿಂದ 2 ಕೋಟಿ ಮಂದಿ ಭೇಟಿ ನೀಡುತ್ತಾರೆ. ನಗರದ ಕೇಂದ್ರ ಭಾಗದಲ್ಲಿರುವ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣಕ್ಕೆ ನಿತ್ಯ 10 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುತ್ತಾರೆ. ಹಾಗಾಗಿ ಬಳಕೆದಾರರ ಸಂಖ್ಯೆಗೆ ಅನುಗುಣವಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಾದ್ದು ಸರ್ಕಾದ ಜವಾಬ್ದಾರಿ. 

ಮುಖ್ಯವಾಗಿ ನಗರದಲ್ಲಿ ಈಗಿರುವ ಬಿಎಂಟಿಸಿ ಬಸ್‌ ರೂಟ್‌ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸಬೇಕು. ಈ ಹಿಂದಿನ ಜನಸಂಖ್ಯೆ, ನಗರದ ವಿಸ್ತೀರ್ಣಕ್ಕೆ ಅನುಗುಣವಾಗಿ ಹಿಂದೆ ಬಸ್‌ ರೂಟ್‌ಗಳನ್ನು ರೂಪಿಸಲಾಗಿತ್ತು. ಆದರೆ, ಈಗ ಜನಸಂಖ್ಯೆ, ವಿಸ್ತೀರ್ಣ ಎಲ್ಲವೂ ಹೆಚ್ಚಿದೆ. ಹೀಗಾಗಿ ಸಂಚಾರ, ಬಸ್‌ರೂಟ್‌ಗಳು ಅಪ್‌ಡೇಟ್‌ ಆಗಬೇಕಿದೆ. ಮುಖ್ಯವಾಗಿ ಬಸ್‌ ರೂಟ್‌ಗಳನ್ನು ಬದಲಿಸಬೇಕು.

ಯಲಹಂಕ, ಹೆಬ್ಟಾಳ ಕಡೆಗಿನ ಬಸ್‌ಗಳೆಲ್ಲಾ ಒಂದೇ ಮಾರ್ಗದಲ್ಲಿ ಏಕೆ ಸಂಚರಿಸಬೇಕು? ಯಲಹಂಕಕ್ಕೆ ತೆರಳುವವರೂ, ಹೆಬ್ಟಾಳಕ್ಕೆ ತೆರಳುವವರೂ ಒಂದೇ ಮಾರ್ಗದಲ್ಲೇ ಹೋಗುವ ಬದಲು, ಬದಲಿ ಮಾರ್ಗಗಳಲ್ಲಿ ತೆರಳಲಿ. ವೈಯಕ್ತಿಕ ಕಾರು ಬಳಕೆದಾರರ ಸಂಖ್ಯೆಯೂ ಇತ್ತೀಚೆಗೆ ಹೆಚ್ಚುತ್ತಿದೆ. ಹೀಗಾಗಿ ದಟ್ಟಣೆ ಉಂಟಾಗುತ್ತಿದೆ. ಈ ಬಗ್ಗೆಯೂ ಕ್ರಮ ಕೈಗೊಳ್ಳುವ ಅಗತ್ಯವಿದೆ. ನಗರದ ಹೊರ ಭಾಗದಿಂದ ನಗರದ ಕೇಂದ್ರ ಭಾಗವನ್ನು ಪ್ರವೇಶಿಸುವವರೆಗೆ ಒಂದು ಬಸ್‌,  ಬಳಿಕ ಅಲ್ಲಿಂದ ಕೇಂದ್ರ ಭಾಗದ ಇತರೆಡೆ ಸಂಚರಿಸಲು ಬೇರೆ ಬಸ್‌ಗಳ ಸಂಪರ್ಕ ವ್ಯವಸ್ಥೆ ತರಬಹುದು.

ಅಂದರೆ ಹೊರಭಾಗದಿಂದ ಕೇಂದ್ರ ಭಾಗಕ್ಕೆ ಸಂಪರ್ಕಿಸುವ ಪ್ರವೇಶದವರೆಗೆ ನಿರಂತರವಾಗಿ ಬಸ್‌ ಸಂಚಾರ ವ್ಯವಸ್ಥೆ ಇರಬೇಕು. ಹಾಗೆಯೇ ಒಳಭಾಗದಲ್ಲೂ ಪ್ರತ್ಯೇಕ ಬಸ್‌ ಸಂಚಾರ ವ್ಯವಸ್ಥೆ ಇದ್ದರೆ ತ್ವರಿತವಾಗಿ ನಿರ್ದಿಷ್ಟ ಸ್ಥಳ ತಲುಪಬಹುದಾಗಿದೆ. ಇದರಿಂದ ಆಯಾ ವ್ಯಾಪ್ತಿಯಲ್ಲಿ ಬಸ್‌ಗಳು ಸುಗಮವಾಗಿ ಸಂಚರಿಸಲಿವೆ. ಅತಿ ದೂರದ ಪ್ರಯಾಣಕ್ಕೆ ಒಂದೇ ಬಸ್‌ ಸಂಚಾರ ವ್ಯವಸ್ಥೆ ಕಲ್ಪಿಸುವ ಜತೆಗೆ ವಿಭಜಿಸಿದರೆ ಸಂಚಾರ ಸುಗಮವಾಗಲಿದೆ.

Advertisement

ಹಾಗೆಯೇ ನಗರದ ಕೇಂದ್ರ ಹಾಗೂ ಹೊರ ಭಾಗದ ಪ್ರದೇಶ ಕೂಡುವ ಜಾಗದಲ್ಲಿ “ಇಂಟರ್‌ ಮೀಡಿಯೆಟ್‌ ಹಬ್‌’ (ನಮ್ಮ ಮೆಟ್ರೋ ಮೆಜೆಸ್ಟಿಕ್‌ ಭಾಗದಲ್ಲಿ ನಿರ್ಮಿಸಿರುವ ಇಂಟರ್‌ಚೇಂಜ್‌ ಮಾದರಿ) ನಿರ್ಮಿಸುವುದು ಸೂಕ್ತ. ಹಾಗೆಯೇ ಹೆಬ್ಟಾಳ ಬಳಿ ಸೂಕ್ತ ಸ್ಥಳದಲ್ಲಿ ಬಹುಮಹಡಿ ವಾಹನ ಪಾರ್ಕಿಂಗ್‌ ಕಟ್ಟಡಗಳನ್ನು ನಿರ್ಮಿಸಿ ಅಲ್ಲಿಂದ ಏರ್‌ಪೋರ್ಟ್‌ವರೆಗೆ ಸಮೂಹ ಸಾರಿಗೆಯನ್ನೇ ಬಳಸಲು ಪ್ರೋತ್ಸಾಹ ನೀಡಬೇಕು. ಖಾಸಗಿ ಸಂಸ್ಥೆಗಳು ಬಹುಮಹಡಿ ವಾಹನ ಪಾರ್ಕಿಂಗ್‌ ಕಟ್ಟಡಗಳನ್ನು ನಿರ್ಮಿಸಲು ಉತ್ತೇಜನ ನೀಡಬೇಕು.

ಬಳ್ಳಾರಿ ರಸ್ತೆಯಲ್ಲಿ ಹೆಬ್ಟಾಳ ಕಡೆಯಿಂದ ಬರುವ ವಾಹನಗಳು ಸಂಜಯನಗರಕ್ಕೆ ತೆರಳಲು ಬಲ ತಿರುವು ಕಲ್ಪಿಸಿರುವುದು, ಹಾಗೆಯೇ ಮೇಖೀ ವೃತ್ತದ ಬಳಿಯ ಗ್ರೇಡ್‌ಸೆಪರೇಟರ್‌ನಲ್ಲಿ ಮಳೆ ನೀರು ಹರಿದುಹೋಗಲು ನಿರ್ಮಿಸಿರುವ ಚರಂಡಿಯ ಮೆಶ್‌ಗಳು ಹಾಳಾಗಿರುವುದು, ಅರಮನೆ ಮೈದಾನದಲ್ಲಿ ಮದುವೆ, ಸಭೆ-ಸಮಾರಂಭ ನಡೆಸಲು ಅವಕಾಶ ನೀಡಿರುವುದೂ ದಟ್ಟಣೆ ಉಂಟಾಗಲು ಕಾರಣವಾಗಿದೆ. ಇದರಲ್ಲಿ ಬದಲಾವಣೆ ತರುವ ಬಗ್ಗೆ ಸಂಚಾರ ಪೊಲೀಸರು ಗಮನಹರಿಸಬಹುದು.

ಪಥ ವ್ಯವಸ್ಥೆಯನ್ನು (ಲೇನ್‌ ಡಿಸಿಪ್ಲಿನ್‌ ಸಿಸ್ಟಮ್‌) ಕಟ್ಟುನಿಟ್ಟಾಗಿ ಜಾರಿಗೊಳಿಸಿ ಬಸ್ಸು, ಕಾರುಗಳು ನಿರ್ದಿಷ್ಟ ಪಥದಲ್ಲೇ ಸಂಚರಿಸುವ ವ್ಯವಸ್ಥೆ ತಂದರೆ ದಟ್ಟಣೆ ತಗ್ಗಿಸಬಹುದು. ಅಂಡರ್‌ಪಾಸ್‌, ಮೇಲುಸೇತುವೆ, ಉಕ್ಕಿನ ಸೇತುವೆಗಳಿಂದ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಬಹುದೇ ಹೊರತು ಕಾಯಂ ಪರಿಹಾರವಿರುವುದಿಲ್ಲ. ಹಾಗಾಗಿ ದಟ್ಟಣೆ ನಿವಾರಣೆಗೆ ಏಕೈಕ ಪರಿಹಾರ ಸೂತ್ರದ ಮೊರೆ ಹೋಗದೆ ನಾನಾ ಪರ್ಯಾಯ ಕ್ರಮಗಳನ್ನು ಏಕಕಾಲಕ್ಕೆ ಪ್ರಯೋಗಿಸಿದರೆ ಪರಿಸ್ಥಿತಿ ಸುಧಾರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next