ಅರಿಝೋನಾ: ಇಲ್ಲಿನ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್(Kamala Harris) ಅವರ ಚುನಾವಣ ಪ್ರಚಾರ ಕಚೇರಿಯ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಟೆಂಪೆ ನಗರದಲ್ಲಿನ ಕಚೇರಿಯ ಮುಂಭಾಗದ ಕಿಟಕಿಗಳ ಮೇಲೆ ಪೆಲೆಟ್ ಗನ್ ಬಳಸಿ ಗುಂಡು ಹಾರಿಸಲಾಗಿದೆ.
ಮಂಗಳವಾರ(ಸೆ24) ಎನ್‌ಬಿಸಿ ನ್ಯೂಸ್‌ಗೆ ನೀಡಿದ ಹೇಳಿಕೆಯಲ್ಲಿ, ಹಿಂದಿನ ರಾತ್ರಿ ಘಟನೆ ಸಂಭವಿಸಿದೆ ಎಂದು ಟೆಂಪೆ ಪೊಲೀಸರು ದೃಢಪಡಿಸಿದ್ದಾರೆ. ಡೆಮಾಕ್ರಟಿಕ್ ನ್ಯಾಷನಲ್ ಕಮಿಟಿ ಕಚೇರಿಯಲ್ಲಿ ಗುಂಡಿನ ದಾಳಿಯಿಂದ ಹಾನಿಯಾಗಿದೆ ಎಂದು ಹೇಳಿದ್ದು, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ.
ಘಟನೆಯ ಸಮಯದಲ್ಲಿ ಕಚೇರಿ ಆವರಣದೊಳಗೆ ಯಾರೂ ಇರಲಿಲ್ಲ ಎಂದು ಟೆಂಪೆ ಪೋಲೀಸ್ ಸಾರ್ವಜನಿಕ ಮಾಹಿತಿ ಅಧಿಕಾರಿ ರಯಾನ್ ಕುಕ್ ಹೇಳಿದ್ದಾರೆ. ಕಟ್ಟಡದಲ್ಲಿ ಕೆಲಸ ಮಾಡುವವರ ಮತ್ತು ಹತ್ತಿರದವರ ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ” ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಸ್ಥಳೀಯ ಟಿವಿ ಸ್ಟೇಷನ್‌ಗಳು ತುಣುಕನ್ನು ಪ್ರಸಾರ ಮಾಡಿದ್ದು, ಅದು ಎರಡು ಗುಂಡು ಬಾಗಿಲು ಮತ್ತು ಎರಡು ಕಿಟಕಿಗಳಲ್ಲಿ ರಂಧ್ರಗಳನ್ನು ತೋರಿಸಿದೆ.ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಕೃತ್ಯ ನಡೆದ ಸ್ಥಳದಿಂದ ಸಂಗ್ರಹಿಸಿದ ಪುರಾವೆಗಳನ್ನು ವಿಶ್ಲೇಷಿಸಲಾಗುತ್ತಿದೆ.
ಶುಕ್ರವಾರ ಅರಿಝೋನಾಗೆ ಕಮಲಾ ಹ್ಯಾರಿಸ್ ಅವರ ನಿಗದಿತ ಪ್ರವಾಸಕ್ಕೆ ಕೆಲವೇ ದಿನಗಳ ಮೊದಲು ಗುಂಡಿನ ದಾಳಿಯ ಕಳವಳಕಾರಿ ಘಟನೆ ನಡೆದಿದೆ.