ಬೆಂಗಳೂರು: ವ್ಯಕ್ತಿಯೊಬ್ಬ ತನ್ನೊಂದಿಗೆ ಮಾತಿನ ಚಕಮಕಿ ನಡೆಸಿದ ಯುವಕರನ್ನು ಬೆದರಿಸಲು ತನ್ನ ಬಳಿಯಿದ್ದ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ರಾಜಾಜಿನಗರದ ಮೂರನೇ ಬ್ಲಾಕ್‌ನಲ್ಲಿ ಭಾನುವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ಅಚಾನಕ್ ಆಗಿ ಮೊಳಗಿದ ಗುಂಡಿನ ಸದ್ದು ಕೇಳಿ ಸ್ಥಳೀಯರು ಬೆಚ್ಚಿಬಿದ್ದು, ಕೆಲಕಾಲ ಆತಂಕ ಪರಿಸ್ಥಿತಿ ಸೃಷ್ಟಿಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ರಾಜಾಜಿನಗರ ಠಾಣೆ ಪೊಲೀಸರು ಅನಗತ್ಯವಾಗಿ ಗಾಳಿಯಲ್ಲಿ ಗುಂಡುಹಾರಿಸಿದ ಗುತ್ತಿಗೆದಾರ ಮನೋಜ್ ಕುಮಾರ್ ಎಂಬಾತನನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಆರೋಪಿ ಮನೋಜ್‌ಕುಮಾರ್‌ನ ಸಹೋದರ ಜಯಂತ್ ಹಾಗೂ ಆದರ್ಶ್ ನಡುವೆ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಬಾಷ್ಯಂ ಸರ್ಕಲ್ ಸಮೀಪದ ಬಾರೊಂದರಲ್ಲಿ ಘರ್ಷಣೆ ಉಂಟಾಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಕುರಿತು ಜಯಂತ್, ಪೊಲೀಸರಿಗೆ ದೂರು ನೀಡಿದ್ದ.
ಇದಾದ ಬಳಿಕ ಪಾನಮತ್ತ ಆಗಿದ್ದ ಎನ್ನಲಾದ ಆದರ್ಶ್ ಮತ್ತು ಆತನ ಸ್ನೇಹಿತ ಅರವಿಂದ್, ಜಗಳದ ವಿಚಾರವನ್ನು ಜಯಂತ್ ಸಹೋದರ ಮನೋಜ್ ಕುಮಾರ್‌ಗೆ ತಿಳಿಸಲು ಹೋಗಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಅವರ ನಿವಾಸದ ಬಳಿ ಎಲ್ಲರೂ ಸೇರಿ ರಸ್ತೆ ಪಕ್ಕದಲ್ಲಿ ಮಾತನಾಡುತ್ತಿದ್ದಾಗಲೇ, ಮಾತಿಗೆ ಮಾತು ಬೆಳೆದು ಮನೋಜ್ ತನ್ನ ಬಳಿಯಿದ್ದ ಪರವಾನಗಿ ಹೊಂದಿದ ಪಿಸ್ತೂಲ್‌ನಲ್ಲಿ ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ.
ಗುಂಡು ಹಾರುತ್ತಿದ್ದಂತೆ ಆದರ್ಶ್ ಹಾಗೂ ಆತನ ಸ್ನೇಹಿತರು ಸ್ಥಳದಿಂದ ಪರಾರಿಯಾಗಿದ್ದಾರೆ. ಗುಂಡಿನ ಸದ್ದು ಕೇಳಿ ಸ್ಥಳೀಯರು ಭಯಗೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ರಾಜಾಜಿನಗರ ಪೊಲೀಸರು ಮನೋಜ್‌ನನ್ನು ಬಂಧಿಸಿ ಪಿಸ್ತೂಲ್ ಜಪ್ತಿಪಡಿಸಿಕೊಂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಆದರ್ಶ್ ಹಾಗೂ ಆತನ ಸ್ನೇಹಿತರು ಹಲ್ಲೆ ಮಾಡಲು ಬಂದಿದ್ದಾರೆ ಎಂದು ಭಯಗೊಂಡು ಅನಿವಾರ್ಯವಾಗಿ ಗಾಳಿಯಲ್ಲಿ ಗುಂಡುಹಾರಿಸಿದೆ ಎಂದು ಆರೋಪಿ ಮನೋಜ್ ವಿಚಾರಣೆ ವೇಳೆ ತಿಳಿಸಿದ್ದಾರೆ. ಅನಗತ್ಯವಾಗಿ ಬೆದರಿಕೆ ಹಾಕುವ ಸಲುವಾಗಿ ಪಿಸ್ತೂಲ್ ಬಳಸಿದ್ದಕ್ಕಾಗಿ ಆತನ ವಿರುದ್ಧ ಶಸ್ತ್ರಸ್ತ್ರಾ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜತೆಗೆ, ಆತನ ಪಿಸ್ತೂಲ್ ಪರವಾನಿಗೆ ರದ್ದು ಮಾಡುವಂತೆ ಇಲಾಖೆಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.