Advertisement

ಸದ್ಯದಲ್ಲೇ ಪಾಣೆಮಂಗಳೂರು ಉಕ್ಕಿನ ಸೇತುವೆ ಸಾಮರ್ಥ್ಯ ತಪಾಸಣೆ

11:13 AM Aug 20, 2018 | Team Udayavani |

ಬಂಟ್ವಾಳ : ಜಿಲ್ಲೆಯನ್ನು ತಲ್ಲಣಗೊಳಿಸಿದ್ದ ಸತತ ಮಳೆ, ನೆರೆ ಹಾವಳಿಯ ಸಂದರ್ಭ ಪಾಣೆಮಂಗಳೂರು ಶತಾಯುಷಿ ಸೇತುವೆಯಲ್ಲಿ (ಬ್ರಿಟಿಷ್‌ ಕಾಲದ ಉಕ್ಕಿನ ಸೇತುವೆ) ಬಿರುಕು ಉಂಟಾಗಿದೆ ಎಂದು ಯಾರೋ ಹಾಕಿದ ವಾಟ್ಸ್ಯಾಪ್‌ ಸಂದೇಶ ಆತಂಕ ಸೃಷ್ಟಿಸಿತ್ತು. ಇದೀಗ ಸೇತುವೆಯ ಸಾಮರ್ಥ್ಯ ತಪಾಸಣೆಗೆ ಸಂಬಂಧಪಟ್ಟ ಇಲಾಖೆ ಸಜ್ಜಾಗಿದೆ.

Advertisement

ಮೂಲರಪಟ್ಣ ಸೇತುವೆ ಕುಸಿದ ಘಟನೆ ನಮ್ಮ ಕಣ್ಣೆದುರು ಇರುವ ಹಿನ್ನೆಲೆಯಲ್ಲಿ ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಬಿರುಕು ಮೂಡಿದೆ ಎಂಬ ವಾಟ್ಸ್ಯಾಪ್‌ ಸುದ್ದಿ ತುಣುಕಿಗೆ ಮಹತ್ವ ಬಂದಿದೆ. ಸೇತುವೆಯಲ್ಲಿ ಬಿರುಕು ಇಲ್ಲ ಎಂಬುದು ಪ್ರಾಥಮಿಕ ತನಿಖೆಗಳಲ್ಲಿ ಸ್ಪಷ್ಟವಾಗಿದೆ ಎಂದು ಇಲಾಖೆಯ ಮೂಲಗಳು ಹೇಳುತ್ತವೆ. ಆದರೆ ಉನ್ನತ ಪರಿಶೀಲನೆ ಆಗಬೇಕು ಎಂಬುದು ಸಾರ್ವಜನಿಕರ ಆಶಯ. 

10.6 ಮೀಟರ್‌ ನೀರು
1974ರಲ್ಲಿ ನೇತ್ರಾವತಿ ನದಿಯಲ್ಲಿ 15 ಮೀಟರ್‌ ಮಟ್ಟಕ್ಕೆ ಬಂದ ನೆರೆ ನೀರಿನ ಬಳಿಕ ಎರಡನೇ ಬಾರಿಗೆ ಗುರುವಾರ ರಾತ್ರಿ 10.6 ಮೀಟರ್‌ ದಾಖಲಾಗಿ ಸುತ್ತಮುತ್ತಲ ಪ್ರದೇಶ ಪ್ರವಾಹ ಪೀಡಿತವಾಗಿತ್ತು. ಈ ಸಂದರ್ಭ ಶತಾಯುಷಿ ಹಳೆ ಸೇತುವೆಯಲ್ಲಿ ಬಿರುಕು ಸಂದೇಶ ಹರಿದಾಡಿತ್ತು. ಗುರುವಾರ ರಾತ್ರಿ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ನಗರ ಠಾಣೆ ಮತ್ತು ಸಂಚಾರ ಠಾಣೆ ಪೊಲೀಸರು ಧಾವಿಸಿ ತಡರಾತ್ರಿ ಸೇತುವೆಯ ಎರಡೂ ಬದಿ ಬ್ಯಾರಿಕೇಡ್‌ ಅಳವಡಿಸಿ ಮುಂಜಾಗ್ರತ ಕ್ರಮವಾಗಿ ಎಲ್ಲ ವಾಹನ ಸಂಚಾರ ಸ್ಥಗಿತಗೊಳಿಸಿದ್ದರು. 

ಆರೋಪ
ಇಲ್ಲಿನ ರಾ.ಹೆ. ವಿಸ್ತರಣೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಎಲ್‌ ಆ್ಯಂಡ್‌ ಟಿ. ಕಂಪೆನಿಯು ಹೊಸ ಸೇತುವೆಯನ್ನು ಷಟ್ಪಥ ಮಾಡಲು ನದಿಯಲ್ಲಿ ಕಾಮಗಾರಿ ಆರಂಭಿಸಿದ ಪರಿಣಾಮ ಉಕ್ಕಿನ ಸೇತುವೆಯ ಆಧಾರ ಸ್ತಂಭಗಳಿಗೆ ನೀರಿನ ಸೆಳೆತಕ್ಕೆ ಭಾರೀ ಒತ್ತಡ ಬೀಳುತ್ತಿದೆ ಎಂಬ ಆರೋಪ ಸ್ಥಳೀಯರದ್ದು.

2001-02ನೇ ಸಾಲಿನಲ್ಲಿ ವ್ಯಾಪಕವಾಗಿ ನಡೆದ ಅದಿರು ಸಾಗಾಟದಿಂದ ಸೇತುವೆಯ ಎರಡು ಆಧಾರ ಸ್ತಂಭಗಳಿಗೆ ಹಾನಿಯಾಗಿದೆ. ಇದರಿಂದಾಗಿ ಅಂದಿನ ಜಿಲ್ಲಾಧಿಕಾರಿ ಚಿನ್ನಪ್ಪ ಗೌಡರು ಘನ ವಾಹನ ಸಂಚಾರ ನಿಷೇಧಿಸಿ ಆದೇಶ ಹೊರಡಿಸಿ ಸೇತುವೆ ನಿರ್ವಹಣೆ ಜವಾಬ್ದಾರಿಯನ್ನು ಜಿಲ್ಲಾಡಳಿತದಿಂದ ಇಲ್ಲಿನ ಪುರಸಭೆಗೆ ಹಸ್ತಾಂತರಿಸಿದ್ದರು. ಈ ಸೇತುವೆ ದುರ್ಬಲವಾಗಿದ್ದು, ಘನ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ನಾಮಫಲಕವನ್ನೂ ಹಾಕಲಾಗಿದೆ. 

Advertisement

ಘನ ವಾಹನ ನಿಷೇಧ
ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಘನ ವಾಹನ ಸಂಚಾರ ನಡೆಸದಂತೆ ನಾಮಫಲಕ ಅಳವಡಿಸಿದ್ದರೂ ಕದ್ದುಮುಚ್ಚಿ ಸಂಚರಿಸುವ ದುಸ್ಸಾಹದಿಂದ ಉಂಟಾಗುವ ದುರಂತಕ್ಕೆ ಅವರೇ ಹೊಣೆಗಾರರಾಗುತ್ತಾರೆ.
– ರೇಖಾ ಜೆ. ಶೆಟ್ಟಿ
ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next