ವಿಧಾನಸಭೆ: ಸದನಕ್ಕೆ ಬಾರದ ಸಚಿವರಿಗೆ ಚಳಿ ಬಿಡಿಸಿ ಎಂದು ಸ್ಪೀಕರ್‌ಗೆ ವಿಪಕ್ಷ ಬಿಜೆಪಿ ಸದಸ್ಯರು ಆಗ್ರಹಿಸಿದ ಪ್ರಸಂಗ ನಡೆಯಿತು.
ಸೋಮವಾರ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ವಿಧಾನಸಭೆ ಕಲಾಪವು ಶಾಸಕರಿದ್ದರೂ ಸಚಿವರಿಲ್ಲದ ಕಾರಣಕ್ಕೆ 11.15 ಕ್ಕೆ ಆರಂಭವಾಯಿತು. ಶುರುವಿನಲ್ಲಿ ಸಚಿವರ ಗೈರುಹಾಜರಿ ಬಗ್ಗೆ ಪ್ರಶ್ನಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಆಡಳಿತ ಪಕ್ಷದ ಮೊದಲ ಮೂರು ಸಾಲು ಖಾಲಿ ಇದೆ.
ಮಂತ್ರಿಗಳು ಬಂದಿಲ್ಲ. ಸದನ ಏಕೆ ನಡೆಸಬೇಕು ಎಂದು ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಬಿಜೆಪಿಯ ಆರ್.ಅಶೋಕ, ಮಂತ್ರಿಗಳೇ ಬಾರದಿದ್ದರೆ ನಮ್ಮ ಗೋಳು ಯಾರಿಗೆ ಹೇಳುವುದು? ಕಲಾಪ ಮುಂದೂಡಿ ಎಂದು ಆಗ್ರಹಿಸಿದರು.
ಸದನವನ್ನು ಮುಂದೂಡುವುದು ಎಲ್ಲದಕ್ಕೂ ಪರಿಹಾರವಲ್ಲ ಎಂದ ಸ್ಪೀಕರ್ ಖಾದರ್, ಸಭೆ ನಡೆಯುತ್ತಿರುವುದರಿಂದ ಸಚಿವರು ಬರುವುದು ತಡವಾಗಿದೆ. ಬರುತ್ತಾರೆ. ನೀವು ಮುಂದುವರಿಸಿ ಎನ್ನುತ್ತಿದ್ದಂತೆ, ಬೊಮ್ಮಾಯಿ ಮಧ್ಯಪ್ರವೇಶಿಸಿ, ಹಾಗಿದ್ದರೆ ಖಾಲಿ ಕುರ್ಚಿಗಳಿಗೆ ಭಾಷಣ ಮಾಡಬೇಕೇ? ಸದನ ಮುಂದೂಡುವುದು ಪರಿಹಾರವಲ್ಲ ಎನ್ನುವುದಾದರೆ, ಈ ಸಮಸ್ಯೆಗೆ ಪರಿಹಾರವೇನು? ಕಾಟಾಚಾರಕ್ಕೆ ಸದನ ನಡೆಸುವುದು ಬೇಡ. ಸ್ಪೀಕರ್ ಸ್ಥಾನಕ್ಕೂ ಅಗೌರವ ತೋರಿದಂತಾಗುತ್ತದೆ ಎಂದರು.
ಆರ್.ಅಶೋಕ ಮಾತನಾಡಿ, ರಮೇಶ್ ಕುಮಾರ್ ಸ್ಪೀಕರ್ ಇದ್ದಾಗ ಹೀಗೇ ಒಮ್ಮೆ ಆಗಿತ್ತು. ನಾನಾಗ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿದ್ದೆ. ಸಚಿವರಿಲ್ಲದ್ದಕ್ಕೆ ಆಕ್ಷೇಪ ವ್ಯಕ್ತವಾಯಿತು ಎಂಬ ಕಾರಣಕ್ಕೆ ಸದನದಿಂದ ಅವರು ಎದ್ದೇ ಹೋಗಿದ್ದರು. ಅವರನ್ನು ಸಮಧಾನಪಡಿಸಿ ಕರೆತರುವ ವೇಳೆಗೆ 2 ಗಂಟೆ ಬೇಕಾಯಿತು. ಸರ್ಕಾರ ಸರಿ ದಾರಿಗೆ ಬಂದಿತ್ತು. ನೀವೂ ಹಾಗೆ ಸರ್ಕಾರಕ್ಕೆ ಚಳಿ ಬಿಡಿಸಬೇಕು. ಪಕ್ಷಾತೀತವಾಗಿರುವ ನಿಮಗೇ ಸರ್ಕಾರ ಬೆಲೆ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಆ ವೇಳೆಗಾಗಲೇ ಸದನಕ್ಕೆ ಬಂದಿದ್ದ ಸಚಿವ ಚಲುವರಾಯಸ್ವಾಮಿ, ಸ್ಪೀಕರ್ ಅವರನ್ನು ಹೊಗಳಿ ನಿಮ್ಮ ಕಡೆಗೆ ಎಳೆದುಕೊಳ್ಳಬೇಕು ಎಂದುಕೊಂಡಿದ್ದೀಯಾ ಹೇಗೆ ಎಂದು ಹಾಸ್ಯ ಮಾಡಿದರು.
ಸ್ಪೀಕರ್ ಮಾತನಾಡುತ್ತಾ, ನಾನು ಪ್ರತಿಪಕ್ಷದ ಮಿತ್ರ. ಹೊಸ ಶಾಸಕರು ಸರಿಯಾದ ಸಮಯಕ್ಕೆ ಬರುತ್ತಿದ್ದಾರೆ. ಸಚಿವರೂ ಬರಬೇಕು. ಎದ್ದು ಹೋಗುವುದು ಪರಿಹಾರವಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನಾನು ಸಮಸ್ಯೆಗಿಂತ ಪರಿಹಾರಕ್ಕೆ ಮಹತ್ವ ಕೊಡುವವನು. ಬೇಗ ಸಚಿವರನ್ನು ಕರೆಯಿಸಿ ಎಂದು ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಅವರಿಗೆ ಸೂಚಿಸಿ ಕಲಾಪ ಮುಂದುವರಿಸಿದರು.
ಮೊದಲು ಬಂದವರಿಗೆ ಬಹುಮಾನ
ಸೋಮವಾರ ಕಲಾಪಕ್ಕೆ ಮೊದಲು ಬಂದ ಶಾಸಕರ ಹೆಸರನ್ನು ಸ್ಪೀಕರ್ ಪ್ರಕಟಿಸಿದರು. ಲಕ್ಷ್ಮಣ ಸವದಿ ಎದ್ದು ನಿಂತು, ಏನಿದು ಅಧ್ಯಕ್ಷರೇ, ಬೇಗ ಬಂದರೆ ಬಹುಮಾನ ಏನಾದರೂ ಕೊಡುತ್ತೀರಾ? ಎನ್ನುತ್ತಿದ್ದಂತೆ, ಸದನಕ್ಕೆ ಬೇಗ ಬಂದರೆ ಎಲ್ಲವೂ ಗೊತ್ತಾಗುತ್ತದೆ. ಬಹುಮಾನ ಕೊಡುವುದನ್ನು ಹಿಂದೆಯೇ ಹೇಳಲಾಗಿತ್ತಲ್ಲವೇ ಎಂದು ಸ್ಪೀಕರ್ ಪ್ರಶ್ನಿಸಿದರು. ಏನದು ಬಹುಮಾನ ಎಂದು ಸವದಿ ಕೇಳುತ್ತಿದ್ದಂತೆ, ಅದು ರಹಸ್ಯ, ಈಗಲೇ ಹೇಳುವುದಿಲ್ಲ ಎಂದು ಸ್ಪೀಕರ್ ಹೇಳಿದರು.