Advertisement
ತಾಲೂಕು ಕೃಷ್ಣಾ ನದಿ ದಂಡೆಗೆ ಹೊಂದಿಕೊಂಡಿದ್ದರೂ ಬೇಸಿಗೆಯಲ್ಲಿ ಜನ-ಜಾನುವಾರು ಜಲದಾಹಕ್ಕೆ ಪರಿಹಾರ ಸಿಕ್ಕಿಲ್ಲ. ನಾರಾಯಣಪುರ ಬಲದಂಡೆ ನಾಲೆ ವರ್ಷದ 8 ತಿಂಗಳು ಹರಿದರೂ ಬೇಸಿಗೆ ಬಂದರೆ ಸಾಕು 40 ಕ್ಕೂ ಹೆಚ್ಚು ಹಳ್ಳಿ, ಎನ್‌ಆರ್‌ಬಿ ನಾಲೆ ಕೊನೇ ಭಾಗ, ಗುಡ್ಡಗಾಡು ಪ್ರದೇಶ, ರಸ್ತೆ ಸಂಚಾರವಿಲ್ಲದ ತಾಂಡಾ, ದೊಡ್ಡಿಗಳಲ್ಲಿ ನೀರಿನ ಅಭಾವ ದಿನೇದಿನೆ ಹೆಚ್ಚಾಗುತ್ತದೆ.
Related Articles
Advertisement
ವಿಷವಾಗುತ್ತಿದೆ ಬೋರ್‌ವೆಲ್ ನೀರು
ಪರಿಸರ ಅಸಮತೋಲನದಿಂದ ದಿನೇದಿನೆ ಬೋರ್‌ವೆಲ್ ನೀರು ವಿಷವಾಗುತ್ತಿದೆ. ವಂದಲಿ, ಊಟಿ, ಸುಣ್ಣದಕಲ್, ಬಿ.ಗಣೇಕಲ್, ಸೋಮನಮರಡಿ, ಎಚ್.ಸಿದ್ದಾಪುರ ಸೇರಿ 20ಕ್ಕೂ ಹೆಚ್ಚು ಗ್ರಾಮಗಳ ಬೋರ್‌ವೆಲ್‌ನಲ್ಲಿ ಆರ್ಶೇನಿಕ್ ಹಾಗೂ ಫ್ಲೋರೈಡ್ ನೀರಿನ ಅಂಶ ಹೆಚ್ಚುತ್ತಿದೆ. ಈ ಬಗ್ಗೆ ಅಧಿಕಾರಿಗಳೇ ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಇದರ ನಿರ್ವಹಣೆಗೆ ಶುದ್ಧ ಕುಡಿವ ನೀರಿನ ಯೋಜನೆ ಜಾರಿಗೊಳಿಸಲಾಗಿದೆ. ಹಲವು ಕಡೆ ಯೋಜನೆ ನನೆಗುದಿಗೆ ಬಿದ್ದಿದ್ದರೆ, ಕೆಲವು ಕಡೆ ನಿರ್ವಹಣೆ ಕೊರತೆಯಿಂದ ಮೂಲೆ ಸೇರಿವೆ. ಬೆರಳೆಣಿಕೆಯಷ್ಟು ಪ್ಲಾಂಟ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಜನರು ಅನಿವಾರ್ಯವಾಗಿ ಅರ್ಶೇನಿಕ ಹಾಗೂ ಫ್ಲೋರೈಡ್ ಅಂಶವಿರುವ ನೀರು ಕುಡಿಯುತ್ತಿದ್ದಾರೆ. ಇದರಿಂದ ಮೊಣಕಾಲು ನೋವು, ಕೀಲು ಬೇನೆ, ಕಂದು ಹಲ್ಲಿನ ಸಮಸ್ಯೆ ಸೇರಿ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ.
13 ಘಟಕಗಳು ನಿರ್ವಹಣೆ ಇಲ್ಲದೇ ಬಂದ್
ಕುಡಿವ ನೀರಿನ ಬವಣೆ ನೀಗಿಸಲು ತಾಲೂಕಿನಲ್ಲಿ 30ಜಲ ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 17 ಪ್ಲಾಂಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, 13 ಘಟಕಗಳು ನಿರ್ವಹಣೆ ಕೊರತೆಯಿಂದ ನಿರುಪಯುಕ್ತವಾಗಿವೆ. ಸುಮಾರು 20ಕ್ಕೂ ಹೆಚ್ಚು ಪ್ಲಾಂಟ್‌ಗಳು ಅರೆಬರೆಯಾಗಿವೆ. ಹೊಸ ಪ್ಲಾಂಟ್‌ಗಳಿಗಾಗಿ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರೂ ಸಂಬಂಸಿದ ಇಲಾಖೆಯಿಂದ ಅನುಮೋದನೆ ದೊರತಿಲ್ಲ. ಆಲ್ಕೋಡ್, ಭೂಮನಗುಂಡ, ಕುರ್ಕಿಹಳ್ಳಿ, ಮಾನಸಗಲ್, ನೀಲವಂಜಿ, ಸೂಗರಾಳ, ಗಣಜಲಿ ಗ್ರಾಮಗಳಲ್ಲಿ ಆರ್‌ಒ ಪ್ಲಾಂಟ್ ನಿರುಪಯುಕ್ತವಾಗಿವೆ.
3-4 ಗ್ರಾಪಂ ವ್ಯಾಪ್ತಿಯ 10-15 ಹಳ್ಳಿಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ಕುಡಿವ ನೀರಿನ ಸಮಸ್ಯೆ ಎದುರಾಗುತ್ತದೆ. ಖಾಸಗಿ ಬೋರ್‌ವೆಲ್ ನೀರು ಪಡೆದು ಜನರಿಗೆ ಪೂರೈಸಲಾಗುತ್ತಿದೆ. ಗುಡ್ಡಗಾಡು, ಎನ್‌ಆರ್‌ಬಿ ನಾಲೆ ಕೊನೇ ಭಾಗದ ಹಳ್ಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ. -ವೆಂಕಟೇಶ ಗಲಗ, ಜಿಪಂ ಎಇಇ
ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿವ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಗತ್ಯ ಬಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಲಾಗುತ್ತದೆ. -ಪಂಪಾಪತಿ ಹಿರೇಮಠ, ತಾಪಂ ಇಒ
-ನಾಗರಾಜ ತೇಲ್ಕರ್