Advertisement
– ಮನೋಜ್ ಕಡಬ
Related Articles
Advertisement
ಇದೇ ಊರಿನ ಇನ್ನೊಂದು ಬದಿಯಲ್ಲಿದ್ದ ರೈತನೊಬ್ಬನ ಗದ್ದೆಯ ಪಕ್ಕದಲ್ಲಿ ಅದೊಂದು ದಿನ ಬೇಟೆಗಾರರ ಗುಂಪೊಂದು ಬಂದು ಬೀಡು ಬಿಟ್ಟಿತು. ಮತ್ತು ಕಾಳುಗಳನ್ನು ಹೆಕ್ಕಲು ಬರುವ ಹಕ್ಕಿಗಳನ್ನು ಬಲೆ ಬೀಸಿ ಹಿಡಿದು ಈ ಬೇಟೆಗಾರರ ಗುಂಪು ತಿನ್ನಲಾರಂಭಿಸಿತು. ಹೀಗಿರುವಾಗ ಅದೊಂದು ದಿನ ಮೈನಾ ಹಕ್ಕಿ ಆ ರೈತನ ಹೊಲದ ಕಡೆ ಹೋಗಿದ್ದಾಗ ಈ ಬೇಟೆಗಾರರ ಗುಂಪನ್ನು ಕಂಡಿತು ಮತ್ತು ಬೇಟೆಗಾರರು ಅಲ್ಲಿಗೆ ಬರುವ ಹಕ್ಕಿಗಳನ್ನೆಲ್ಲಾ ಹಿಡಿದು ತಿನ್ನುವ ವಿಚಾರ ತಿಳಿದು ಬಹಳ ಹೆದರಿತು.
ಮುಂದೆ ನಾವು ಕಾಳ ಸಂಗ್ರಹಿಸುವ ಗದ್ದೆಯ ಜಾಗಕ್ಕೂ ಇದೇ ಗುಂಪು ಬಂದರೆ ಅವರಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಚಿಂತೆಯಲ್ಲೇ ಮೈನಾ ಹಕ್ಕಿ ಅಲ್ಲೇ ಇದ್ದ ಹಿರಿಯ ಹಂಸದೊಡನೆ ಪರಿಹಾರ ಕೇಳಿತು. ಅದಕ್ಕೆ ಹಂಸವು ಹೇಳಿತು ;ಆ ಬೇಟೆಗಾರರ ಗುಂಪು ನೆಲದಲ್ಲಿ ಕಾಳು ಹೆಕ್ಕಲು ಬರುವ ಹಕ್ಕಿಗಳನ್ನು ಮಾತ್ರ ಹಿಡಿಯುತ್ತದೆ. ನೀವು ಯಾರೂ ಸ್ವಲ್ಪ ದಿನ ನಿಮ್ಮ ನಿಮ್ಮ ಮನೆಯಿಂದ ಹೊರಗೆ ಬರಬೇಡಿರಿ. ಯಾರೂ ಬರದಿದ್ದರೆ ಅವರಿಗೆ ಹಕ್ಕಿಗಳು ಸಿಗದೆ ವಾಪಸ್ಸು ಹೋಗುತ್ತಾರೆ. ಆ ಬಳಿಕ ಮತ್ತೆ ಆರಾಮವಾಗಿ ಹೊರಗೆ ಬರಬಹುದು.” ಎಂದು ಬುದ್ದಿವಂತ ಸಲಹೆಯನ್ನು ಹಂಸ ನೀಡಿತು.
ವಿಷಯ ತಿಳಿದ ಮೈನಾ ಹಕ್ಕಿ ತಕ್ಷಣ ತನ್ನ ಗೂಡಿಗೆ ಹಾರಿತು. ತನ್ನ ಮರದಲ್ಲಿದ್ದ ಗುಬ್ಬಚ್ಚಿ, ಗಿಳಿ, ಪಕ್ಕದ ಮರದಲ್ಲಿದ್ದ ಮರಕುಟಿಗ, ಕೊಕ್ಕರೆ, ಬುಲ್ ಬುಲ್ ಹೀಗೆ ಎಲ್ಲ ಹಕ್ಕಿಗಳನ್ನೂ ಕರೆದು ಈ ವಿಚಾರವನ್ನು ಹೇಳಿ ಇನ್ನೆರಡು ದಿನದೊಳಗೆ ಬೇಡರು ನಮ್ಮ ಹೊಲಕ್ಕೆ ಬರುವರೆಂದೂ ಹಾಗಾಗಿ ಯಾರೂ ಹೊಲದ ಬಳಿ ಹೋಗಬಾರದೆಂದೂ ಸೂಚನೆ ನೀಡಿತು.
ಕೆಲವೊಂದು ಹಕ್ಕಿಗಳು ಮೈನಾ ಹಕ್ಕಿಯ ಈ ಮಾತನ್ನು ಒಪ್ಪಿದವು. ಕೆಲವೊಂದು ಮೈನಾ ಹಕ್ಕಿಗೆ ತಮಾಷೆ ಮಾಡಿದವು. “ನಿನಗೆಲ್ಲೋ ತಲೆ ಕೆಟ್ಟಿದೆ, ಆ ಬೇಡರು ನಮ್ಮಲ್ಲಿಗೆ ಬರುವುದುಂಟೇ? ಒಂದು ವೇಳೆ ಬಂದರೂ ನಮ್ಮನ್ನು ರಕ್ಷಿಸಿಕೊಳ್ಳಲು ನಮಗೆ ಗೊತ್ತು. ನೀನೇನೂ ಹೇಳಬೇಕಿಲ್ಲ” ಎಂದು ಕೊಂಕು ಮಾತನಾಡಿದವು.
ಇತ್ತ ಗುಬ್ಬಚ್ಚಿ ಬಹಳವಾಗಿ ಯೋಚಿಸಿತು. ಮೈನಾ ಹೇಳಿದ್ದು ನಿಜವಿರಲೂಬಹುದು, ಇಲ್ಲದೆಯೂ ಇರಬಹುದು. ಏನೇ ಆಗಲಿ, ನನಗೆ ಮತ್ತು ಕುಟುಂಬಕ್ಕೆ ಒಂದೆರಡು ತಿಂಗಳಿಗೆ ಬೇಕಾದಷ್ಟು ಆಹಾರವನ್ನು ಇವತ್ತೇ ಸಂಗ್ರಹಿಸುತ್ತೇನೆ. ಯಾವ ಕಾರಣಕ್ಕೂ ನಾನು ಮನೆಬಿಟ್ಟು ಹೊರಗೆ ಹೋಗುವುದಿಲ್ಲ. ಎಂದು ನಿರ್ಧರಿಸಿದ್ದು ಮಾತ್ರವಲ್ಲದೆ ತನ್ನ ಕುಟುಂಬ ಸದಸ್ಯರಿಗೆ ಯಾರೂ ಹೊರಗೆ ಹೋಗದಂತೆ ಕಟ್ಟಪ್ಪಣೆಯನ್ನೂ ವಿಧಿಸಿತು.
ಆದರೆ ನಮ್ಮ ಸುಂದರಾಂಗ ಗಿಳಿ ಮಾತ್ರ ತನ್ನ ಎಂದಿನ ಜಂಭವನ್ನು ಬಿಡಲೇ ಇಲ್ಲ. “ಬೇಡರು ಬಂದರೆ ಏನಂತೆ? ನಾನು ನೋಡ್ಕೊಳ್ತೇನೆ. ನಾನಿಷ್ಟು ಚಂದವಿದ್ದೇನೆ, ನನ್ನನ್ನು ನೋಡಿಯೇ ಬೇಡರು ಬೆರಗಾಗಬೇಕು. ಅಂತದ್ದರಲ್ಲಿ ನಾನೇಕೆ ಹೆದರಲಿ? ಮತ್ತೆ ನನ್ನ ತಂಟೆಗೇನಾದರೂ ಬಂದರೆ ನನ್ನ ಹರಿತವಾದ ಕೊಕ್ಕಿನಿಂದ ಅವನನ್ನು ಕೊಕ್ಕಿ ಕೊಕ್ಕಿ ಸಾಯಿಸುತ್ತೇನೆ. ಆ ಬೇಟೆಗಾರನೇನು ಮಹಾ? ನಾನು ಮೊನ್ನೆ ಜೀವಸಹಿತ ನುಂಗಿದ ಹಾವಿಗಿಂತಲೂ ದೊಡ್ಡವನೇನು? ಬರ್ಲಿ.. ನೋಡ್ಕೊಳ್ತೇನೆ” ಎಂದುಕೊಂಡು ಮೊದಲಿಗಿಂತ ಜಾಸ್ತಿ ತಿರುಗಾಡಲು ಪ್ರಾರಂಭ ಮಾಡಿತು. ಒಂದು ವೇಳೆ ಚಂದದ ಹೆಣ್ಣು ಎಲ್ಲಿಯಾದರೂ ನನ್ನ ಶೌರ್ಯ ನೋಡಿ ಮೆಚ್ಚಿದ್ರೆ ಮದುವೆಯನ್ನೂ ಮಾಡಿಕೊಂಡು ಬಿಡುತ್ತೇನೆ ಎಂದು ಸಹ ಅಂದುಕೊಂಡು ಹೊಲದಲ್ಲಿ ಎಲ್ಲೆಂದರಲ್ಲಿ ತಿರುಗಾಡಲಾರಂಭಿಸಿತು.
ಆ ದಿನ ಬಂದೇ ಬಿಟ್ಟಿತು. ಮೊದಲಿಗೆ ಒಬ್ಬ ಬೇಟೆಗಾರ ಬಂದ. ಹಕ್ಕಿಯೊಂದನ್ನು ಹಿಡಿದು ತಿಂದ. ಆಚೀಚೆ ನೋಡಿದಾಗ ಸಾವಿರಾರು ಹಕ್ಕಿಗಳನ್ನು ಕಂಡ. ಹೋಗಿ ತನ್ನ ಪರಿವಾರದವರನ್ನು ಒಬ್ಬೊಬ್ಬರಾಗಿ ಕರೆತಂದ. ಇಡೀ ಹೊಲವೇ ಬೇಟೆಗಾರರಿಂದ ತುಂಬಿತು. ಹಲವಾರು ಹಕ್ಕಿಗಳು ಅವರಿಗೆ ಆಹಾರವಾದವು. ಗಿಳಿ ರಾಜಾರೋಷವಾಗಿ ಹೊಲದಲ್ಲಿ ತಿರುಗಾಡುತ್ತಿತ್ತು. ಒಂದೆರಡು ಬಾರಿ ಗಿಳಿಯನ್ನು ಹಿಡಿಯಲು ಪ್ರಯತ್ನಿಸಿದರೂ ಪ್ರಯೋಜನ ಕಾಣದ ಬೇಟೆಗಾರರು ಒಂದು ದೊಡ್ಡ ಬಲೆಯನ್ನು ಹೆಣೆದರು. ಕಡೆಗೆ ಗಿಳಿ ಆ ಬಲೆಯಲ್ಲಿ ಬಿದ್ದು ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿತು. ಅದರ ಬಣ್ಣ, ಭಂಡ ಧೈರ್ಯ, ಹುಚ್ಚುತನ, ಅಹಂಕಾರ ಎಲ್ಲವೂ ಅದರೊಂದಿಗೆ ನಶಿಸಿ ಹೋಯ್ತು.
ಇದೆಲ್ಲವನ್ನೂ ನೋಡುತ್ತ ಮರದ ರೆಂಬೆಯಲ್ಲಿದ್ದ ಗುಬ್ಬಚ್ಚಿ ಸಂಸಾರ ಕಂಬನಿಗರೆಯಿತು. ಮೈನಾ ಹಕ್ಕಿಯ ಮಾತನ್ನು ಕೇಳದ ಹಕ್ಕಿಗಳಿಗಾದ ಪರಿಸ್ಥಿತಿಯನ್ನು ನೋಡಿ ಮರುಗಿತು. ಮೈನಾ ಹಕ್ಕಿಯಂತೂ ಇದರಿಂದ ತುಂಬಾ ನೊಂದಿತು. ಆದರೆ ತಾನೇನಾದರೂ ಮಾಡಲೇಬೇಕೆಂಬ ಧೃಢ ನಿರ್ಧಾರ ತೆಗೆದುಕೊಂಡು ಬೇಡರಿಂದ ಅನಾಥವಾದ ಹಕ್ಕಿಗಳ ಮರಿಗಳಿಗೆ ತಾನು ಸಂಗ್ರಹಿಸಿದ ಧಾನ್ಯದಿಂದ ಆಹಾರ ಒದಗಿಸುವುದರಲ್ಲಿ ಮತ್ತು ಇತರ ಹಕ್ಕಿಗಳಿಗೆ ಹೊಲದ ಕಡೆ ಹೋಗಬಾರದೆಂಬ ಸೂಚನೆ ಕೊಡುವಲ್ಲಿ ಶ್ರಮ ಪಡುತ್ತಾ ಇನ್ನೊಬ್ಬರ ಜೀವದ ಉಳಿವಿಗಾಗಿ ಹಗಲಿರುಳು ದುಡಿಯುತ್ತಿತ್ತು.
ಮಿತ್ರರೇ, ಇದು ಕೋವಿಡ್ 19 ಸೋಂಕಿನ ಮಹಾಮಾರಿಯ ಕಾಲ. ಪಕ್ಕದ ದೇಶದಲ್ಲಿದ್ದ ಈ ಸೋಂಕು ಇಂದು ನಮ್ಮ ದೇಶಕ್ಕೆ, ನಮ್ಮ ರಾಜ್ಯಕ್ಕೆ ಅಷ್ಟೇ ಏಕೆ ನಮ್ಮ ಮನೆ ಬಾಗಿಲವರೆಗೆ ಬಂದೇ ಬಿಟ್ಟಿದೆ. ಮೈನಾ ಹಕ್ಕಿಯಂತೆ ಸರಕಾರ, ಸ್ವಯಂ ಸೇವಕರು, ಜಿಲ್ಲಾಧಿಕಾರಿ, ಪೊಲೀಸರು, ಆರೋಗ್ಯ ಇಲಾಖೆಯವರು ಹೀಗೆ ಎಲ್ಲರೂ ಪದೇ ಪದೇ ವಿನಂತಿಸಿಕೊಳ್ಳುತ್ತಿದ್ದಾರೆ, ತಮ್ಮ ಜೀವವನ್ನು ಪಣಕ್ಕಿಟ್ಟು ನಮ್ಮ ಒಳಿತಿಗಾಗಿ ದುಡಿಯುತ್ತಿದ್ದಾರೆ. ಮನೆ ಬಿಟ್ಟು ಹೊರಬರಬೇಡಿ ಎಂದು ಎಷ್ಟು ಮನವರಿಕೆ ಮಾಡಿದರೂ ಕೇಳದ ಅದೆಷ್ಟೋ ಧೂರ್ತರು ನಮ್ಮೊಳಗಿದ್ದಾರೆ.
ಅಗತ್ಯವಿಲ್ಲದಿದ್ದರೂ ರಸ್ತೆಯಲ್ಲಿ ಶೋಕಿ ಮಾಡುವವರ ಸಂಖ್ಯೆಯೂ ಬಹಳಷ್ಟಿದೆ. ಈ ಸೋಂಕಿನ ಕಾರಣದಿಂದ ಇತರ ದೇಶಗಳಲ್ಲಿ ಸಾವಿಗೀಡಾದವರ ಫೋಟೋಗಳನ್ನು, ವಿಡಿಯೋಗಳನ್ನು ಸಾಕಷ್ಟು ನೋಡ್ತಾ ಇದ್ದೇವೆ. ನಮಗೆ ಇನ್ನೂ ಬುದ್ಧಿ ಯಾವಾಗ ಬರುತ್ತದೆ? ದೇವರಿದ್ದಾನೆ ಎಂಬ ಭಂಡ ಧೈರ್ಯವೋ, ನನಗೇನೂ ಆಗಲ್ಲ ಎಂಬ ಅಹಂಕಾರವೋ ಯಾವುದೂ ಈಗ ನಡೆಯಲ್ಲ. ಕೋವಿಡ್ 19 ಎಂಬ ಕ್ರೂರ ವಿಧಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಉಳಿಯುವುದೇ ಬಿಟ್ಟು ಅನ್ಯ ದಾರಿಯಿಲ್ಲ.
ಈ ಸಂದರ್ಭದಲ್ಲಿ ಸರಕಾರದ ಸೂಚನೆಗಳನ್ನು ಪಾಲಿಸೋಣ. ನಮ್ಮ ನಮ್ಮ ಮನೆಗಳಲ್ಲೇ ಉಳಿಯೋಣ. ನಮ್ಮ ಜೀವ, ನಮ್ಮ ಕುಟುಂಬದ ಜೀವ ಉಳಿಸೋಣ.
ನಮ್ಮ ಸುಭದ್ರ ನಾಳೆಗಾಗಿ ಇಂದು ನಾವು ಬದುಕುಳಿಯುವುದು ಅತ್ಯವಶ್ಯಕ.