ಕುಂದಾಪುರ: ಉಳ್ಳೂರು-74 ಗ್ರಾಮದ ಕಳಿನ ಜಡ್ಡು ಹದನಗದ್ದೆ ಎಂಬಲ್ಲಿ ಅರ್ಧ ಶತಮಾನಕ್ಕೂ ಹಿಂದಿನ ಕಿರು ಸೇತುವೆಯೊಂದು ಶಿಥಿಲಗೊಂಡಿದ್ದು ಧರೆಶಾಯಿಯಾಗಲು ದಿನಗಳನ್ನು ಎಣಿಕೆ ಹಾಕುತ್ತಿದೆ. ಅಂದು ಒಂದು ಎತ್ತಿನಗಾಡಿ ಹೋಗಲು ಬೇಕಾದ ಕೇವಲ ಹತ್ತು ಅಡಿ ಅಗಲದಲ್ಲಿ ನಿರ್ಮಾಣವಾಗಿದ್ದ ಈ ಕಿರು ಸೇತುವೆ ಇಂದು ಉಳ್ಳೂರು-74ನೇ ಗ್ರಾಮಕ್ಕೆ ಬರುವ ಲಾರಿಗಳು, ಬಸ್ಸುಗಳು, ಕಂಟೆ„ನರ್‌ಗಳು, ಶಾಲಾ ವಾಹನ, ದ್ವಿಚಕ್ರ-ತ್ರಿಚಕ್ರ ವಾಹನಗಳ ಸತತ ಓಡಾಟದಿಂದ ನಲುಗಿ ಹೋಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಇಲಾಖೆಗಳ ಬೇಜವಾಬ್ದಾರಿ: ಅಗಲ ಕಿರಿದಾಗಿರುವ ಹದನಗದ್ದೆ ಕಿರು ಸೇತುವೆಯ ಎರಡೂ ಪಾರ್ಶ್ವಗಳಲ್ಲಿ ರಸ್ತೆಯ ಆಂಚು ಕಾಣಿಸದಂತೆ ಹಸಿರು ಪೊದೆಗಳು ಬೆಳೆದಿದ್ದು, ಯಾವುದೇ ರಕ್ಷಣಾ ತಡೆಗೋಡೆಯ ನಿರ್ಮಾಣವಾಗದೇ ಪ್ರತಿ ದಿನ ಅಪಾಯವನ್ನು ಎದುರಿಸುತ್ತಿದೆ. ಇಲ್ಲಿ ಹಲವಾರು ವಾಹನಗಳು ದಿನನಿತ್ಯ ಸಂಚರಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಈ ತನಕ ಯಾವುದೇ ಕ್ರಮ ತೆಗೆದುಕೊಳ್ಳದ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಾರಾಹಿ ಕಾಲುವೆ ಎಸ್ಕೇಪ್ ಗೇಟಿನಿಂದ ನಿರಂತರ ನೀರು: ಈ ಕಿರು ಸೇತುವೆಯಡಿ ಹರಿಯುತ್ತಿರುವ ತೊರೆಗೆ ಜಾಂಗೂರು, ಸುರ್ಗಿಜೆಡ್ಡು, ಹೊಸಗದ್ದೆ, ಗುಡಿಕೇರಿ ಹಾಗೂ ವಾರಾಹಿ ಕಾಲುವೆಯ ಮಳೆಗಾಲದ ಹೆಚ್ಚುವರಿ ನೀರು ನೂಜಿನಬೈಲಿನಿಂದ ವಾರಾಹಿ ಎಸ್ಕೇಪ್ ಗೇಟ್ ಮೂಲಕ ನಿರಂತರ ಹರಿಯುತ್ತಿದ್ದು, ಯಾರಾದರೂ ಆಯತಪ್ಪಿ 20 ಅಡಿ ಆಳದ ತೊರೆಗೆ ಬಿದ್ದರೆ, ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ.
ಈ ಸೇತುವೆ ಅಗಲ ಕಿರಿದಾಗಿದ್ದು ಹಾಗೂ ಶಿಥಿಲವಾಗಿದ್ದು ಹಾಗೂ ಅಂಚಿನಲ್ಲಿ ಯಾವುದೇ ತಡೆಬೇಲಿ ಹಾಕದೇ ಇರುವುದರಿಂದ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಆದ್ದರಿಂದ ಇಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡಬೇಕು ಇಲಾಖೆಯನ್ನು ಒತ್ತಾಯಿಸಲಾಗುವುದು.
ಚಿಟ್ಟೆ ರಾಜಗೋಪಾಲ ಹೆಗ್ಡೆ, ಪಶ್ಚಿಮ ವಾಹಿನಿ ನೀರಾವರಿ ಅಚ್ಚುಕಟ್ಟು ಅಭಿವೃದ್ಧಿ ಸಮಿತಿ
ಈ ಕಿರು ಸೇತುವೆಯ ಪಕ್ಕದಲ್ಲಿ ನಮ್ಮ ಮನೆಯಿದೆ. ಸೇತುವೆಯ ಎರಡು ಕಡೆಯಲ್ಲೂ ಪೊದೆ ಬೆಳೆದಿದೆ. ಸೇತುವೆ ಪಕ್ಕದಲ್ಲಿ ರಕ್ಷಣಾ ಗೋಡೆ ಇಲ್ಲ. ಚಲಿಸುವ ವಾಹನಗಳಿಗೆ ಸೇತುವೆಯ ಅಂಚು ಅರಿವಿಗೆ ಬರುವುದಿಲ್ಲ. ಆದ್ದರಿಂದ ಶೀಘ್ರ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎನ್ನುವುದು ನಮ್ಮೆಲ್ಲರ ಆಗ್ರಹ
ರವೀಂದ್ರನಾಥ ಶೆಟ್ಟಿ, ಬಂಟಕೋಡು, ಸ್ಥಳೀಯ ನಿವಾಸಿ