Advertisement

Malpe: ದಡ ಸೇರಿದ ದೋಣಿಗಳು; ಮತ್ಸ್ಯ ಕ್ಷಾಮದ ಜತೆಗೆ ಮತ್ತಷ್ಟು ಹೊಡೆತ

04:35 PM Dec 04, 2024 | Team Udayavani |

ಮಲ್ಪೆ: ಮೊದಲೇ ಮತ್ಸ್ಯ ಕ್ಷಾಮದಿಂದ ಕರಾವಳಿಯ ಮೀನುಗಾರಿಕೆ ವಲಯ ತತ್ತರಿಸಿ ಹೋಗಿದೆ. ಇದೀಗ ಕರಾವಳಿಯಲ್ಲಿ ವಕ್ಕರಿಸಿದ ಚಂಡಮಾರುತ ಮೀನುಗಾರರಿಗೆ ಮತ್ತಷ್ಟು ಹೊಡೆತ ನೀಡಿದೆ. ಫೈಂಜಾಲ್‌ ಚಂಡಮಾರುತದಿಂದಾಗಿ ಆರಬ್ಬಿ ಸಮುದ್ರದಲ್ಲಿ ಕಳೆದ ಎರಡು ಮೂರು ದಿನಗಳಿಂದ ಗಾಳಿಯ ಒತ್ತಡ ಮತ್ತು ಅಲೆಗಳ ಅಬ್ಬರ ಜೋರಾಗಿರುವುದರಿಂದ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲಾಗದೆ ಮೀನುಗಾರಿಕೆ ದೋಣಿಗಳು ದಡ ಸೇರಿವೆ.

Advertisement

ಈ ಬಾರಿ ಆರಂಭದ ದಿನದಿಂದಲೂ ಕಡಲಿನಲ್ಲಿ ಮೀನಿನ ಇಳುವರಿ ಸಂಪೂರ್ಣ ಕುಸಿದಿದ್ದು ಆಳಸಮುದ್ರ ಮೀನುಗಾರರು ಸಂಪೂರ್ಣವಾಗಿ ತತ್ತರಿಸಿ ಹೋಗಿದ್ದಾರೆ. ಪ್ರಾಕೃತಿಕ ವೈಪರೀತ್ಯ ಹಾಗೂ ಇನ್ನಿತರ ಕಾರಣದಿಂದಾಗಿ ವರ್ಷದಿಂದ ವರ್ಷಕ್ಕೆ ಮೀನಿನ ಸಂತತಿ ನಾಶವಾಗುತ್ತಿದ್ದು ಇದು ಕರಾವಳಿಯ ಮೀನುಗಾರಿಕೆ ಕ್ಷೇತ್ರಕ್ಕೆ ಭಾರೀ ಹೊಡೆತವನ್ನು ನೀಡುತ್ತಿದೆ.

ಚಂಡಮಾರುತದಿಂದಾಗಿ ಇದೀಗ ಕಳೆದ ಎರಡು ಮೂರು ದಿನಗಳಿಂದ ಎಲ್ಲ ಬೋಟುಗಳು ದಡ ಸೇರಿದ್ದು, ಶೇ. 80ರಷ್ಟು ಬೋಟುಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿವೆ. ಪರ್ಸಿನ್‌, ಸಣ್ಣ ಟ್ರಾಲ್‌ಬೋಟ್‌, ನಾಡದೋಣಿಗಳು ಸಂಪೂರ್ಣ ಸ್ಥಗಿತಗೊಳಿಸಿ ಬಂದರಿನಲ್ಲಿ ಲಂಗರು ಹಾಕಿವೆ. ಸಮುದ್ರದಲ್ಲಿದ್ದ ಆಳಸಮುದ್ರ ಬೋಟುಗಳು ಸಮೀಪದ ಬಂದರು ಪ್ರವೇಶಿಸಿವೆ.

ನೀರಿನ ಒತ್ತಡದಿಂದ ವಾಪಸ್‌
ಸಮುದ್ರದಲ್ಲಿ ಬಲವಾದ ಗಾಳಿ ಬೀಸುತ್ತಿದ್ದು ಸಮುದ್ರದ ನೀರಿನ ಒತ್ತಡದಿಂದಾಗಿ ಮೀನುಗಾರಿಕೆ ನಡೆಸಲಾಗದೆ ಬೋಟ್‌ಗಳು ವಾಪಸಾಗಿವೆ. ಹವಾಮಾನ ಇಲಾಖೆ ಇನ್ನು ಒಂದೆರಡು ದಿನದ ಚಂಡಮಾರುತದ ಇರುವ ಸೂಚನೆಯನ್ನು ನೀಡಿದೆ. ಸಮುದ್ರ ಸಹಜ ಸ್ಥಿತಿಗೆ ಬಂದ ಬಳಿಕ ಬೋಟ್‌ಗಳು ತೆರಳುವ ಸಾಧ್ಯತೆ ಇದೆ. -ದಯಾನಂದ ಕೆ. ಸುವರ್ಣ, ಅಧ್ಯಕ್ಷರು, ಮಲ್ಪೆ ಮೀನುಗಾರರ ಸಂಘ

ಸಮುದ್ರಕ್ಕೆ ತೆರಳದಂತೆ ಸೂಚನೆ
ಫೈಂಜಾಲ್‌ ಚಂಡಮಾರುತದ ಪರಿಣಾಮ ಸಮುದ್ರದಲ್ಲಿ ದೊಡ್ಡ ಗಾತ್ರದ ಆಲೆಗಳು ಏಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಸೂಚನೆಯಂತೆ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಲ್ಲ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಮಲ್ಪೆಯಲ್ಲಿ ಬಹುತೇಕ ಎಲ್ಲ ವರ್ಗದ ಬೋಟುಗಳು ಲಂಗರು ಹಾಕಿವೆ. ಡಿ.5ರವರೆಗೆ ಚಂಡಮಾರುತ ಇರುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
– ವಿವೇಕ್‌ ಆರ್‌., ಜಂಟಿ ನಿರ್ದೇಶಕರು, ಮೀನುಗಾರಿಕೆ ಇಲಾಖೆ

Advertisement
Advertisement

Udayavani is now on Telegram. Click here to join our channel and stay updated with the latest news.

Next