Advertisement
ಹಬ್ಬವೆಂದರೆ ಎಲ್ಲರಿಗೂ ಸಂಭ್ರಮ. ನಾವು ಆಚರಿಸುವ ಪ್ರತಿ ಹಬ್ಬಕ್ಕೂ ಸಾಂಪ್ರದಾಯಿಕ ಟಚ್ ಇದ್ದೇ ಇರುತ್ತದೆ. ಹೀಗಾಗಿಯೇ ನಮ್ಮ ಸಂಸ್ಕೃತಿಗೆ ಒಪ್ಪುವಂತಹ ದಿರಿಸು ತೊಟ್ಟು ಹಬ್ಬ ಆಚರಿಸುವುದು ತಲೆ ತಲಾಂತರದಿಂದ ನಡೆದುಕೊಂಡು ಬಂದಿದೆ. ಇನ್ನೈದು ದಿನಗಳಲ್ಲಿ ನವರಾತ್ರಿ ಹಬ್ಬದ ಸಡಗರ. ಈ ಹೊತ್ತಿನಲ್ಲಿ ಬಟ್ಟೆ ಬರೆ, ಜುವೆಲರಿ ಸಹಿತ ಹಬ್ಬಕ್ಕೆಂದೇ ಇತರ ವಸ್ತುಗಳ ಶಾಪಿಂಗ್ ಬಹಳ ಜೋರಾಗಿಯೇ ಇದೆ.
ಅದೆಷ್ಟೋ ಹೊಸ ರೀತಿಯ ಫ್ಯಾಶನೆಬಲ್ ದಿರಿಸುಗಳು ಮಾರುಕಟ್ಟೆ ಪ್ರವೇಶಿಸಿದರೂ, ಸೀರೆಯ ಮೇಲಿರುವ ಮೋಹ ಹೆಣ್ಣು ಮಕ್ಕಳಿಗಿನ್ನೂ ಕಡಿಮೆಯಾಗಿಲ್ಲ. ಯಾವುದೇ ಶುಭ ಸಮಾರಂಭಗಳಿಗೆ ಹೊಸ ಹೊಸ ಮಾದರಿಯ ಬಟ್ಟೆ ತೊಟ್ಟು ಮಿಂಚಿದರೂ, ಹಬ್ಬ ಎಂದಾಕ್ಷಣ ಹೆಂಗಳೆಯರಿಗೆ ನೆನಪಾಗುವುದೇ ಸೀರೆ. ಹಬ್ಬಕ್ಕೆಂದೇ ಹೊಸ ಸೀರೆ ಉಟ್ಟು ಕಂಗೊಳಿಸಬೇಕೆಂಬುದು ಪ್ರತಿ ಹೆಣ್ಣು ಮಕ್ಕಳ ಮನದಾಸೆ. ನವರಾತ್ರಿ ಹಬ್ಬಕ್ಕೂ ರಂಗು ರಂಗಿನ ಸೀರೆ ಹೆಣ್ಣು ಮಕ್ಕಳ ಚಿತ್ತಾಕರ್ಷಿಸುತ್ತಿದೆ.
Related Articles
Advertisement
ಪಂಚೆಯಲ್ಲಿ ಸಾಂಪ್ರದಾಯಿಕ ಲುಕ್ಹೆಣ್ಣು ಮಕ್ಕಳಿಗೆ ಸೀರೆಯ ಖರೀದಿಯ ಸಡಗರವಾದರೆ, ಪುರುಷರು ಪಂಚೆ, ಶರ್ಟ್ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಬ್ಬಕ್ಕೂ ಜೀನ್ಸ್ ತೊಡುವ ಕಾಲವಾದರೂ, ಪಂಚೆ ಉಡುವ ಪದ್ಧತಿ ಇನ್ನೂ ಮರೆಯಾಗಿಲ್ಲ. ಮನೆಯಲ್ಲಿ ನವರಾತ್ರಿ ಹಬ್ಬವನ್ನು ಆಚರಿಸುವವರಿಗೆ ಪಂಚೆಯೇ ಭೂಷಣ. ಹಬ್ಬದ ಪ್ರಮುಖ ದಿನದಂದು ಪಂಚೆ ಮತ್ತು ಬಿಳಿ ಶರ್ಟ್ ತೊಟ್ಟು ಪೂಜೆಯಲ್ಲಿ ಪಾಲ್ಗೊಳ್ಳುವುದು ಹಿಂದಿನಿಂದಲೇ ಬಂದ ಪದ್ಧತಿಯೂ ಆಗಿದೆ. ವಿಶೇಷವಾಗಿ ಆಯುಧ ಪೂಜೆಯಂದು ಪಂಚೆ ತೊಟ್ಟು ದೇವಸ್ಥಾನಕ್ಕೆ ತೆರಳಿ ತಮ್ಮ ವಾಹನಾದಿಗಳಿಗೆ ಪೂಜೆ ಮಾಡಿಸಿಕೊಂಡು ಬರುವುದು ಈಗಲೂ ನಡೆದಿದೆ. ಪಂಚೆ ಉಡುವುದು ಸದ್ಯಕ್ಕೆ ಟ್ರೆಂಡ್ ಆಗಿಯೂ ಪ್ರಸಿದ್ಧಿಗೊಳ್ಳುತ್ತಿದೆ. ಕುಟುಂಬದ ಸರ್ವರೂ ಒಂದೆಡೆ ಸೇರಿ ಹಬ್ಬ ಆಚರಿಸುವಾಗ ಪಂಚೆ ಉಟ್ಟು ಎಲ್ಲರೂ ಫೋಟೋ ಹೊಡೆಸಿಕೊಳ್ಳುವುದು ಈಗೀಗ ಟ್ರೆಂಡ್ ಎನ್ನಬಹುದು. ಜುವೆಲರಿಗೂ ಬೇಡಿಕೆ
ಹಬ್ಬದ ಸಂದರ್ಭದಲ್ಲಿ ಜುವೆಲರಿ ಕೊಳ್ಳುವುದು ಶುಭ ಸೂಚಕವೆಂದೋ, ರಿಯಾಯಿತಿ ಇರುತ್ತವೆಂದೋ ಚಿನ್ನ ಖರೀದಿಸುವುದು ಸಾಮಾನ್ಯ. ಹಾಗಾಗಿ ಈ ನವರಾತ್ರಿಗೂ ಚಿನ್ನ ಖರೀದಿ ಭರಾಟೆ ಜೋರಾಗಿದೆ. ಚಿನ್ನ, ಬೆಳ್ಳಿಯ ಆಭರಣಕ್ಕೆ ಜುವೆಲರಿ ಶಾಪ್ ಗಳು ವಿವಿಧ ಆಫರ್, ಕೊಡುಗೆಗಳನ್ನೂ ಪ್ರಕಟಿಸುತ್ತಿರುವುದರಿಂದ ಚಿನ್ನ ಖರೀದಿಗೂ ಹಬ್ಬದ ರಂಗು ಬಂದಿದೆ. ಕೇವಲ ಚಿನ್ನ, ಬೆಳ್ಳಿಯ ಆಭರಣಗಳಲ್ಲದೆ, ಫ್ಯಾನ್ಸಿ ಜುವೆಲರಿಗಳ ಖರೀದಿಯೂ ಬಿರುಸಾಗಿದೆ. ಇನ್ನು ಹೆಂಗಳೆಯರು ಸೀರೆಗೆ ಮ್ಯಾಚಿಂಗ್ ಇರಲೆಂದು ಕಿವಿಯೋಲೆ, ಕೈಬಳೆ, ನೆಕ್ಲೆಸ್‌ಗಳನ್ನು ತೊಡುವುದಕ್ಕೆಂದೇ ವೀಕೆಂಡ್ ಶಾಪಿಂಗ್ ನಡೆಸುತ್ತಿದ್ದಾರೆ. ಇವುಗಳೊಂದಿಗೆ ಮನೆಗೆ ಬೇಕಾದ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆಯೂ ಡಿಸ್ಕೌಂಟ್, ಎಕ್ಸ್ ಚೇಂಜ್ ಸಹಿತ ಇತರ ವಿಶೇಷ ಆಫರ್ ಗಳಿರುವುದರಿಂದ ಇವುಗಳಿಗೂ ಬೇಡಿಕೆ ಹೆಚ್ಚಾಗಿವೆ. ಒಟ್ಟಿನಲ್ಲಿ ನಗರಾದಾದ್ಯಂತ ಈಗಲೇ ಹಬ್ಬದ ಸಂಭ್ರಮ ನೆಲೆಯಾಗಿದೆ. ಮಕ್ಕಳಿಗೂ ಪಂಚೆ
ಮಕ್ಕಳ ಪ್ರಪಂಚಕ್ಕೂ ಸೀರೆ, ಪಂಚೆ ಲಗ್ಗೆ ಇಟ್ಟಿರುವುದರಿಂದ ಹಬ್ಬದ ಈ ಸಂದರ್ಭದಲ್ಲಿ
ಬೇಡಿಕೆಯೂ ಹೆಚ್ಚಾಗಿದೆ. ಬಿಳಿ ಬಣ್ಣದ ಶರ್ಟ್ ಮತ್ತು ಶಾಲ್ ಜತೆಗೆ ಈ ಪಂಚೆ ಮಾದರಿಯ ಕಚ್ಚೆ ಹಾಕುವುದು ಮಕ್ಕಳಲ್ಲಿ ಫ್ಯಾಶನ್ ಆಗಿದೆ. ಈ ನವರಾತ್ರಿಗೂ ಮಕ್ಕಳ ಪಂಚೆ ಮಾರುಕಟ್ಟೆಯಲ್ಲಿದ್ದು, ಹೆತ್ತವರು ಹಬ್ಬಕ್ಕೆಂದೇ ಹೆಚ್ಚಾಗಿ ಇದನ್ನು ಖರೀದಿಸುತ್ತಿದ್ದಾರೆ. ಧನ್ಯಾ ಬಾಳೆಕಜೆ