ಬೆಂಗಳೂರು: “ಜೆಡಿಎಸ್ ಕಾರ್ಯಕರ್ತನ ಹತ್ಯೆ ಮಾಡಿದವರನ್ನು ಶೂಟೌಟ್ ಮಾಡಿಯಾದರೂ ಮಟ್ಟ ಹಾಕಿ’ ಎಂದು ಖುದ್ದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ವಿವಾದದ ಸ್ವರೂಪ ಪಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಧ್ಯೆ, ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾರ್ಯಕರ್ತರನ್ನು ಹತ್ಯೆ ಮಾಡಿದವರ ವಿರುದ್ಧ
ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡುವುದು ಸರಿ. ಆದರೆ ಶೂಟೌಟ್ ಮಾಡಿ ಎಂದು ಆದೇಶಿ ಸುವುದು ಸೂಕ್ತವಲ್ಲ ಎಂದು ಬಿಜೆಪಿ ನಾಯಕರು ಟ್ವೀಟ್‌ನಲ್ಲಿ ಖಂಡಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪೊಲೀಸರಿಗೆ ಶೂಟೌಟ್ ಮಾಡಿ ಎಂದು ಆದೇಶ ನೀಡಿರುವುದು ತಪ್ಪು. ಕೂಡಲೇ ಅವರು ರಾಜ್ಯದ ಜನರ ಕ್ಷಮೆ ಯಾಚಿಸಬೇಕೆಂದು ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು ಮಂಡ್ಯದ ತೊಪ್ಪನಹಳ್ಳಿಯಲ್ಲಿ ಜೆಡಿಎಸ್ ಕಾರ್ಯಕರ್ತನ ಹತ್ಯೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳೇ ಶೂಟೌಟ್ ಮಾಡುವಂತೆ ಆದೇಶ ನೀಡಿರುವುದು ಸರಿಯಲ್ಲ. ಇದರಿಂದ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಿದಂತಾಗುತ್ತದೆ. ಬಳಿಕ ಮುಖ್ಯಮಂತ್ರಿಗಳು ತಾವು ಆವೇಶದಲ್ಲಿ ಆ ರೀತಿ ಹೇಳಿದ್ದು, ಮುಖ್ಯಮಂತ್ರಿಯಾಗಿ ಹೇಳಿಲ್ಲ ಎಂದಿದ್ದಾರೆ. ಹಾಗಾದರೆ ಅವರು ಈಗ ಮುಖ್ಯಮಂತ್ರಿಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಟ್ವೀಟ್ ಟೀಕೆ: ರೈತರ ಸಾವಿಗೆ ಭಾವನೆಗಳಿಲ್ಲ. ಅಧಿಕಾರಿಗಳ ಕೊಲೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಎಂದರೂ ನಡೆಯಲಿ, ಅಭಿವೃದ್ಧಿ ಕಾರ್ಯಗಳಿಲ್ಲ ಎಂದರೆ ನಾನು ನೋಟು ಪ್ರಿಂಟ್ ಮಾಡುವುದಿಲ್ಲ ಅಂತಾರೆ. ದಲಿತರನ್ನು ಜೀತಕ್ಕೆ ನೂಕಲಾಗುತ್ತಿದೆ ಎಂದರೆ ಮೌನ. ಜೆಡಿಎಸ್ ಕಾರ್ಯಕರ್ತ ಹತ್ಯೆಯಾದರೆ ಮಾತ್ರ ಕೂಡಲೇ ಶೂಟ್ ಮಾಡುವಂತೆ ಪೊಲೀಸರಿಗೆ ಆದೇಶ. ಕುಮಾರಸ್ವಾಮಿ ಯವರಿಗೆ ಜೆಡಿಎಸ್ 2ಮಾತ್ರ ಮುಖ್ಯ ಎಂದು ಯಡಿಯೂರಪ್ಪ ಟ್ವೀಟ್‌ನಲ್ಲಿ ಕಾಲೆಳೆದಿದ್ದಾರೆ.
“ರಾಜಕೀಯ ಪಕ್ಷದ ಕಾರ್ಯಕರ್ತರ ಕೊಲೆಗಳು ಪ್ರಜಾಪ್ರಭುತ್ವಕ್ಕೆ ಮಾರಕ. ಇಂದು ಅಂತಹ ಘಟನೆ ಮದ್ದೂರಿನಲ್ಲಿ ನಡೆದಿದೆ. ಖಂಡನೀಯ. ಮಾನ್ಯ ಮುಖ್ಯಮಂತ್ರಿಗಳೇ, ಅದೇ ರೀತಿ ನಾವು ಕಳೆದುಕೊಂಡ ನಮ್ಮ ಪಕ್ಷದ ಕಾರ್ಯಕರ್ತರ ಜೀವ, ಕುಟುಂಬಸ್ಥರ ಕಣ್ಣೀರು ಅಷ್ಟೇ ಅಮೂಲ್ಯದ್ದು. ಸ್ವಲ್ಪ ಗಮನಿಸಿ’ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಟ್ವೀಟ್ ಮಾಡಿದ್ದಾರೆ.
“ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆಯೇ ಶೂಟೌಟ್‌ಗೆ ಆದೇಶ ನೀಡುವ ಮೂಲಕ ಅರಾಜಕತೆ ಹಾಗೂ ಕಾನೂನು ಭಂಗಕ್ಕೆ ಸೂಚನೆ ನೀಡಿದಂತಿದೆ. ಪ್ರಚೋದನೆ ಮತ್ತು ವ್ಯವಸ್ಥೆ ಹದಗೆಡಲು ಇದು ಸ್ಪಷ್ಟ ನಿದರ್ಶ ನದಂತಿದೆ. ಕರ್ನಾಟಕದಲ್ಲಿ ಸಂಪೂರ್ಣ ಗೊಂದಲಮಯ ಹಾಗೂ ಸರ್ವಾಧಿಕಾರಿ ಆಡಳಿತವಿದ್ದು, ಈ ಬೆಳವಣಿಗೆಯನ್ನು ತೀವ್ರವಾಗಿ ಖಂಡಿಸುತ್ತೇನೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್‌ನಲ್ಲಿ ಖಂಡಿಸಿದ್ದಾರೆ.