ಹಾವೇರಿ: ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ ನಡೆದ ಶೂಟೌಟ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.
ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಶಿವಪುರ ಎಂಬಾತನ ಮೇಲೆ ಮಂಗಳವಾರ ರಾತ್ರಿ ಕೆಜಿಎಫ್ ಚಿತ್ರ ಪ್ರದರ್ಶನದ ವೇಳೆ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಪಿಸ್ತೂಲ್‌ನಿಂದ ಫೈರಿಂಗ್ ಮಾಡಿದ್ದ. ಈ ವೇಳೆ ವಸಂತಕುಮಾರನ ಹೊಟ್ಟೆಯ ಭಾಗಕ್ಕೆ ಎರಡು ಕಡೆ ಗುಂಡೇಟು ತಗುಲಿದ್ದರಿಂದ ಆತನನ್ನು ಹುಬ್ಬಳ್ಳಿ ಕಿಮ್ಸ್‌ಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
ಘಟನೆ ಹಿನ್ನೆಲೆಯಲ್ಲಿ ಬುಧವಾರ ಎಸ್ಪಿ ಹನುಮಂತರಾಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನ ದಳದಿಂದಲೂ ಪರಿಶೀಲನೆ ನಡೆಸಲಾಯಿತು. ಆರೋಪಿ ಇದುವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡು ಹಾರಿಸಿ ನಾಪತ್ತೆಯಾಗಿರುವ ಆರೋಪಿ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಘಟನೆ ಹಿನ್ನೆಲೆ: ಸಿನಿಮಾ ನೋಡುವ ಸಂದರ್ಭ ಮುಂದಿನ ಕುರ್ಚಿಯ ಮೇಲೆ ವಸಂತಕುಮಾರ ಕಾಲಿಟ್ಟಿದ್ದ. ಮುಂದಿನ ಕುರ್ಚಿಯಲ್ಲಿದ್ದ ಆರೋಪಿ ಕಾಲು ತೆಗೆಯುವಂತೆ ಹೇಳಿದ್ದಾನೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿ ಜಗಳ ನಡೆದಿದೆ. ನಂತರ ಆರೋಪಿ ಹೊರಗಡೆ ಹೋಗಿ ಹತ್ತು ನಿಮಿಷದ ನಂತರ ಮತ್ತೆ ಚಿತ್ರಮಂದಿರದ ಒಳಗೆ ಬಂದು, ವಸಂತಕುಮಾರನ ಮೇಲೆ ಪಿಸ್ತೂಲಿನಿಂದ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಎರಡು ಗುಂಡು ಹೊಟ್ಟೆ ಭಾಗಕ್ಕೆ ತಗಲಿದೆ. ಮತ್ತೂಂದು ಮಿಸ್‌ಫೈರ್ ಆಗಿದೆ. ಗುಂಡು ಹಾರಿಸಿದ ಘಟನೆಯಿಂದ ಚಿತ್ರಮಂದಿರದ ಪ್ರೇಕ್ಷಕರು ಗಾಬರಿಗೊಂಡು ಹೊರಗಡೆ ಓಡಿ ಹೋಗಿದ್ದಾರೆ.
ಈ ಘಟನೆಯಿಂದ ಇಡೀ ಪಟ್ಟಣ ಬೆಚ್ಚಿ ಬೀಳುವಂತಾಗಿದೆ. ಸದ್ಯ ಚಿತ್ರಮಂದಿರ ಬಂದ್ ಮಾಡಲಾಗಿದ್ದು, ಸ್ಥಳದಲ್ಲೇ ಬೀಡು ಬಿಟ್ಟಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಈ ಕುರಿತು ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಗ್ಗಾವಿಯ ರಾಜಶ್ರೀ ಚಿತ್ರಮಂದಿರದಲ್ಲಿ ಗುಂಡು ಹಾರಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಹಾಗೂ ತಜ್ಞರ ತಂಡ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದೇವೆ. ಆರೋಪಿ ಬಂಧನಕ್ಕೆ ಎರಡು ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುತ್ತೇವೆ. ಪಿಸ್ತೂಲು ಆತನ ಬಳಿ ಹೇಗೆ ಬಂತು, ಏಕಾಏಕಿ ಏಕೆ ಗುಂಡಿನ ದಾಳಿ ನಡೆಸಿದ್ದಾರೆ ಎಂಬುದರ ಕುರಿತು ಸಮಗ್ರ ತನಿಖೆ ಬಳಿಕ ಗೊತ್ತಾಗಲಿದೆ. –
ಹನುಮಂತರಾಯ, ಎಸ್ಪಿ, ಹಾವೇರಿ