Advertisement

ರೌಡಿಶೀಟರ್‌ಗೆ ಬಲಗಾಲಿಗೆ ಗುಂಡೇಟು

01:05 AM May 19, 2019 | Lakshmi GovindaRaj |

ಬೆಂಗಳೂರು: ದರೋಡೆ, ಡಕಾಯಿತಿ, ಕೊಲೆ ಯತ್ನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ರೌಡಿಶೀಟರ್‌ಗೆ ಅಶೋಕನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ. ವಿವೇಕನಗರ ನಿವಾಸಿ ವಿನೋದ್‌ ಅಲಿಯಾಸ್‌ ಪಚ್ಚಿ (24) ಗುಂಡೇಟು ತಿಂದ ರೌಡಿಶೀಟರ್‌.

Advertisement

ಆರೋಪಿಯಿಂದ ಹಲ್ಲೆಗೊಳಗಾದ ಪೊಲೀಸ್‌ ಸಿಬ್ಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಆರೋಪಿಯ ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಅಪರಾಧ ಜಗತ್ತಿಗೆ ಕಾಲಿಟ್ಟಿದ್ದ ವಿನೋದ್‌, ಬೈಕ್‌ ಕಳ್ಳತನ ಮಾಡಿದ್ದ ಆರೋಪದ ಮೇಲೆ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದಿದ್ದ ಆರೋಪಿ, ಮತ್ತೆ ಬೈಕ್‌ ಕಳವು ಮತ್ತು ಸುಲಿಗೆ ಮಾಡಲು ಆರಂಭಿಸಿದ್ದ.

ಆತನ ವಿರುದ್ಧ ಭಾರತೀನಗರ, ಕೋರಮಂಗಲ, ಅಶೋಕನಗರ ಸೇರಿ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಕೊಲೆ ಯತ್ನ, ದ್ವಿಚಕ್ರ ವಾಹನ ಕಳವು, ದರೋಡೆ, ಡಕಾಯಿತಿ, ಸುಲಿಗೆ ಪ್ರಕರಣಗಳು ದಾಖಲಾಗಿದ್ದು,

ರಸ್ತೆಯಲ್ಲಿ ಒಂಟಿಯಾಗಿ ಓಡಾಡುತ್ತಿದ್ದ ಸಾರ್ವಜನಿಕರನ್ನು ಅಡ್ಡಹಾಕಿ, ಬೆದರಿಸಿ, ಮೊಬೈಲ್‌ ಹಾಗೂ ನಗದು ಸುಲಿಗೆ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ. ಆತನ ವಿರುದ್ಧ ರೌಡಿಪಟ್ಟಿ ಕೂಡ ತೆರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಬಲಗಾಲಿಗೆ ಗುಂಡೇಟು: ಮೇ 14ರಂದು ಬೆಳಗ್ಗೆ 9 ಗಂಟೆಗೆ ಪೇಟಿಂಗ್‌ ಕೆಲಸ ಮಾಡುತ್ತಿದ್ದ ಎನ್‌.ಚಾರ್ಲೆ ಎಂಬುವರು ಆನೇಪಾಳ್ಯ ನಿವಾಸಿ ಪಿಂಟೋ ಎಂಬುವರ ಮನೆ ಬಳಿ ನಿಂತಿದ್ದರು. ಅದೇ ವೇಳೆ ಅಲ್ಲೇ ಇದ್ದ ಆರೋಪಿ ಹಾಗೂ ಆತನ ಸಹಚರ ನಂದಾ ಚಾರ್ಲೆ ಅವರನ್ನು ಗುರಾಯಿಸುತ್ತಿದ್ದರು. ಅದನ್ನು ಚಾರ್ಲೆ ಪ್ರಶ್ನಿಸಿದ್ದಾರೆ.

ಅಷ್ಟಕ್ಕೆ ಕುಪಿತಗೊಂಡ ಆರೋಪಿಗಳು ಹಲ್ಲೆಗೆ ಮುಂದಾಗಿದ್ದು, ಜೀವ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ರಕ್ಷಣೆ ಬಂದ ಸ್ಥಳೀಯರ ಮೇಲೆ ಬಿಯರ್‌ ಬಾಟಲಿ ಹಾಗೂ ರಾಡ್‌ನಿಂದ ಹೊಡೆದಿದ್ದರು. ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮೇ 18ರಂದು ಮುಂಜಾನೆ ಆರು ಗಂಟೆ ಸುಮಾರಿಗೆ ಬನ್ನೇರುಘಟ್ಟ ರಸ್ತೆಯ ಕ್ರೈಸ್ತರ ಸ್ಮಶಾನದಲ್ಲಿ ರೌಡಿ ವಿನೋದ್‌ ತಲೆಮರೆಸಿಕೊಂಡಿದ್ದ. ಈ ಮಾಹಿತಿ ಪಡೆದು ಸ್ಥಳಕ್ಕೆ ಹೋಗಿದ್ದ ಅಶೋಕನಗರ ಠಾಣೆ ಇನ್‌ಸ್ಪೆಕ್ಟರ್‌ ಶಶಿಧರ್‌ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದಾರೆ.

ಅದಕ್ಕೆ ಒಪ್ಪದ ಆರೋಪಿ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಆ ವೇಳೆ ಇನ್‌ಸ್ಪೆಕ್ಟರ್‌ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next