Advertisement

ಸುಳ್ಯ: ಶೂಟೌಟ್‌ ಪ್ರಕರಣ; ಮೂವರ ಬಂಧನ

07:43 PM Jun 09, 2022 | Team Udayavani |

ಸುಳ್ಯ: ಸುಳ್ಯದ ಜ್ಯೋತಿ ಸರ್ಕಲ್‌ ಬಳಿಯ ವೆಂಕಟರಮಣ ಸೊಸೈಟಿ ಬಳಿ ಜೂ. 5ರ ರಾತ್ರಿ ನಡೆದ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಡಗು ಜಿಲ್ಲೆಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಕೃತ್ಯಕ್ಕೆ ಬಳಸಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಕೊಡಗು ಜಿಲ್ಲೆ ಕುಶಾಲನಗರ ತಾಲೂಕಿನ ಬೊಳ್ಳೂರು ಗ್ರಾಮದ ಕೆ. ಜಯನ್‌ (38), ಮಡಿಕೇರಿ ತಾಲೂಕಿನ 14ನೇ ಮುಳಿಯ ಲೇ ಔಟ್‌ ಎಫ್ಎಂಸಿ ಕಾಲೇಜು ಬಳಿಯ ವಿನೋದ್‌ ಆರ್‌. (34), ಮಡಿಕೇರಿ ತಾಲೂಕಿನ ಸಿಎಂಸಿ ಕ್ವಾಟ್ರಸ್‌ ರಾಣಿಬೆಟ್ಟುವಿನ ಎಚ್‌.ಎಸ್‌. ಮನೋಜ್‌ (25) ಬಂಧಿತರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ನಾಡ ಪಿಸ್ತೂಲು, ಎರಡು ಸಜೀವ ತೋಟೆಗಳು, ಸ್ಕಾರ್ಪಿಯೊ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಗುರುವಾರ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪ್ರಕರಣ ವಿವರ :

ಸುಳ್ಯದ ಜಯನಗರದ ಮಹಮ್ಮದ್‌ ಸಾಯಿ (39) ಅವರು ಜೂ. 5ರಂದು ರಾತ್ರಿ 10.30ರ ವೇಳೆಗೆ ಸುಳ್ಯದ ಜ್ಯೋತಿ ಸರ್ಕಲ್‌ ಬಳಿಯ ವೆಂಕಟರಮಣ ಸೊಸೈಟಿ ಹತ್ತಿರದಲ್ಲಿ ತಮ್ಮ ಕಾರಿನ ಬಳಿ ಬಂದು ಡೋರ್‌ ತೆಗೆಯುವ ವೇಳೆ ಸ್ಕಾರ್ಪಿಯೊ ವಾಹನದಲ್ಲಿ ಬಂದ ನಾಲ್ಕು ಜನ ಅಪರಿಚಿತರ ತಂಡ ಗುಂಡು ಹಾರಿಸಿದ್ದು, ಅದು ಸಾಯಿ ಅವರ ಬೆನ್ನಿನ ಎಡ ಬದಿಗೆ ತಾಗಿ ಕಾರಿಗೆ ತಾಗಿತ್ತು. ಘಟನೆಯಲ್ಲಿ ಸಾಯಿ ಕೂದಲೆಳೆ ಅಂತರದಿಂದ ಪಾರಾಗಿದ್ದರು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳೂರು, ಹಾಸನ, ಮಡಿಕೇರಿ, ಕುಶಾಲನಗರ ಕಡೆಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದ್ದರು. ದ.ಕ. ಜಿಲ್ಲಾ ಪೊಲೀಸ್‌ ಅಧೀಕ್ಷಕ ಋಷಿಕೇಷ್‌ ಭಗವಾನ್‌ ಸೋನಾವಣೆ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ, ಪುತ್ತೂರು ಡಿವೈಎಸ್‌ಪಿ ಡಾ| ಗಾನಾ ಪಿ. ಕುಮಾರ್‌, ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಮಾರ್ಗದರ್ಶನದಲ್ಲಿ ಸುಳ್ಯ ಪೊಲೀಸ್‌ ಠಾಣಾ ಎಸ್ಸೆ„ ದಿಲೀಪ್‌ ಜಿ.ಆರ್‌., ತನಿಖಾ ವಿಭಾಗದ ಎಸ್ಸೆ„ ರತ್ನಕುಮಾರ್‌, ಪ್ರೊಬೆಷನರಿ ಎಸೈ ಸರಸ್ವತಿ ಬಿ.ಟಿ., ಎಎಸ್ಸೆ„ ರವೀಂದ್ರ, ಶಿವರಾಮ, ಎಚ್‌ಸಿ ಧನೇಶ್‌, ಉದಯ ಗೌಡ, ಸನಿಲ್‌, ಪಿಸಿ ಅನುಕುಮಾರ್‌, ಹೈದರಾಲಿ, ಸುನಿಲ್‌ ತಿವಾರಿ, ನಾಗರಾಜ್‌ ಮತ್ತು ಇತರ ಸಿಬಂದಿ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

Advertisement

ವೈಷಮ್ಯದಿಂದ ನಡೆಯಿತಾ ಕೃತ್ಯ? :

ಮಹಮ್ಮದ್‌ ಶಾಯಿ ಹಾಗೂ ಜಯನ್‌ ಸ್ನೇಹಿತರಾಗಿದ್ದರು ಎನ್ನಲಾಗಿದ್ದು, ಅವರ ಮಧ್ಯೆ ಕೆಲವೊಂದು ವಿಚಾರದಲ್ಲಿ ಉಂಟಾದ ವೈಷಮ್ಯದಿಂದ ದೂರವಾಗಿದ್ದರು. ಇದೇ ವೈಷಮ್ಯದಿಂದ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಹೆಚ್ಚಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.

ಕಳಗಿ ಕೊಲೆ ಆರೋಪಿ ಜಯನ್‌ :

ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳಲ್ಲಿ ಪ್ರಮುಖ ಆರೋಪಿ ಜಯನ್‌, ಕೊಡಗಿನ ಬಿಜೆಪಿ ಮುಖಂಡ ಸಂಪಾಜೆಯ ಬಾಲಚಂದ್ರ ಕಳಗಿ ಕೊಲೆ ಪ್ರಕರಣದ ಆರೋಪಿ. ಕೊಡಗು ಸಂಪಾಜೆ ಪರಿಸರದಲ್ಲಿ ಸಂಪತ್‌ ಕುಮಾರ್‌ ಹಾಗೂ ಇನ್ನಿತರರು ತೆರೆಯಲು ಉದ್ದೇಶಿಸಿದ್ದ ರಿಕ್ರಿಯೇಶನ್‌ ಕ್ಲಬ್‌ಗ ಅನುಮತಿ ನೀಡಿಲ್ಲ ಎನ್ನುವ ದ್ವೇಷದಿಂದ ಸಂಪತ್‌ ಕುಮಾರ್‌, ಹರಿಪ್ರಸಾದ್‌, ಜಯನ್‌ ತಂಡ ಸಂಚು ರೂಪಿಸಿ 2019ರ ಮಾರ್ಚ್‌ 19ರಂದು ಮಡಿಕೇರಿಯ ಗೌರಿಶಂಕರ ನರ್ಸರಿ ಬಳಿ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರ ಕಳಗಿ ಅವರು ಚಲಾಯಿಸುತ್ತಿದ್ದ ಮಾರುತಿ ಆಮ್ನಿ ಕಾರಿಗೆ ಲಾರಿಯಿಂದ ಢಿಕ್ಕಿ ಹೊಡೆಸಿ ಕೊಲೆ ಮಾಡಿದ್ದರು. ಪ್ರಕರಣದ ಪ್ರಮುಖ ಆರೋಪಿ ಸಂಪತ್‌ ಕುಮಾರ್‌ನನ್ನು 2020ರ ಅಕ್ಟೋಬರ್‌ 8ರಂದು ಸುಳ್ಯದ ಶಾಂತಿನಗರದಲ್ಲಿ ಕೊಲೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next