ಬಾಕು (ಅಜರ್‌ಬೈಜಾನ್): ಐಎಸ್‌ಎಸ್‌ಎಫ್ ವಿಶ್ವ ಚಾಂಪಿಯನ್‌ಶಿಪ್ ಶೂಟಿಂಗ್‌ನಲ್ಲಿ ಭಾರತ ಬಂಗಾರಕ್ಕೆ ಗುರಿ ಇರಿಸಿದೆ. 10 ಮೀ. ಏರ್ ಪಿಸ್ತೂಲ್ ಮಿಶ್ರ ಸ್ಪರ್ಧೆಯಲ್ಲಿ ಇಶಾ ಸಿಂಗ್-ಶಿವ ನರ್ವಾಲ್ ಸೇರಿಕೊಂಡು ಈ ಪದಕ ತಂದಿತ್ತರು.
ಶುಕ್ರವಾರದ ಫೈನಲ್‌ನಲ್ಲಿ ಇಶಾ ಸಿಂಗ್-ಶಿವ ನರ್ವಾಲ್ ಟರ್ಕಿಯ ಇಲಾಯ್ದಾ ಟೆರ್ಹಾನ್-ಯೂಸುಫ್ ಡಿಕೆಕ್ ವಿರುದ್ಧ 16-10 ಅಂಕಗಳ ಗೆಲುವು ಒಲಿಸಿಕೊಂಡರು. ಇದು ಭಾರತಕ್ಕೆ ಒಲಿದ ಮೊದಲ ಬಂಗಾರ.
ಪದಕಪಟ್ಟಿಯಲ್ಲಿ ಭಾರತವೀಗ 2ನೇ ಸ್ಥಾನದಲ್ಲಿದೆ. ಒಂದು ಚಿನ್ನ ಮತ್ತು ಒಂದು ಕಂಚು ಭಾರತದ ಸಾಧನೆಯಾಗಿದೆ. 5 ಚಿನ್ನ, 2 ಕಂಚಿನ ಪದಕ ಗೆದ್ದಿರುವ ಚೀನ ಅಗ್ರಸ್ಥಾನ ಅಲಂಕರಿಸಿದೆ.
ಅರ್ಹತಾ ಸುತ್ತಿನಲ್ಲಿ ಭಾರತೀಯರ ಸಾಧನೆ ಉನ್ನತ ಮಟ್ಟದಲ್ಲಿತ್ತು. ಇಶಾ 290 ಹಾಗೂ ನರ್ವಾಲ್ 293 ಅಂಕಗಳೊಂದಿಗೆ (ಒಟ್ಟು 583 ಅಂಕ) ಅಗ್ರಸ್ಥಾನ ಪಡೆದರು. ಆಗ ಟರ್ಕಿಯ ಸ್ಪರ್ಧಿಗಳು ದ್ವಿತೀಯ ಸ್ಥಾನಿಯಾಗಿದ್ದರು (581 ಅಂಕ). ಆದರೆ ಭಾರತದ ಮತ್ತೆರಡು ಜೋಡಿ ಫೈನಲ್ ತಲುಪಲು ವಿಫಲವಾಯಿತು. ಮಿಶ್ರ ರೈಫಲ್ ಅರ್ಹತಾ ಸುತ್ತಿನಲ್ಲಿ ಮೆಹುಲಿ ಘೋಷ್-ಐಶ್ವರಿ ಪ್ರತಾಪ್ ಸಿಂಗ್ ತೋಮರ್ 9ನೇ, ರಮಿತಾ-ದಿವ್ಯಾಂಶ್ ಸಿಂಗ್ ಪನ್ವಾರ್ 17ನೇ ಸ್ಥಾನಕ್ಕೆ ಕುಸಿದರು. ಒಟ್ಟು 77 ಜೋಡಿ ಕಣದಲ್ಲಿತ್ತು. ಅಗ್ರ 4 ಜೋಡಿಗಳಿಗಷ್ಟೇ ಫೈನಲ್ ಅವಕಾಶವಿತ್ತು.
ವನಿತಾ ಸ್ಕೀಟ್ ವಿಭಾಗದಲ್ಲಿ ಭಾರತದ ಪರಿನಾಜ್ ಧಾಲೀವಾಲ್, ಗನೇಮತ್ ಶೆಕೋನ್ ಮತ್ತು ದಶಾì ರಾಠೊಡ್ ಅವರನ್ನೊಳಗೊಂಡ ತಂಡ 4ನೇ ಸ್ಥಾನಕ್ಕೆ ಕುಸಿದು ಕಂಚಿನ ಪದಕದಿಂದ ವಂಚಿತವಾಯಿತು.