ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ (ಜೂ. 21) ನಿಧಾನವಾಗಿ ಅನ್‌ಲಾಕ್ ಪ್ರಕ್ರಿಯೆಗೆ ಚಾಲನೆ ಸಿಗುತ್ತಿದ್ದು, ಅದರ ಮೊದಲ ಹಂತದಲ್ಲಿ ಸರ್ಕಾರ ಸಿನಿಮಾ ಮತ್ತು ಕಿರುತೆರೆ (ಧಾರಾವಾಹಿ, ರಿಯಾಲಿಟಿ ಶೋಗಳ) ಹೊರಾಂಗಣ ಚಿತ್ರೀಕರಣಕ್ಕೆ ಅನುಮತಿ ನೀಡಿದೆ. ಹೀಗಾಗಿ ಕಳೆದ ಎರಡೂವರೆ ತಿಂಗಳಿನಿಂದ ಚಿತ್ರೀಕರಣವಿಲ್ಲದೆ ಕಂಗೆಟ್ಟು ಕುಳಿತಿದ್ದ ಸಿನಿಮಾ ಕಾರ್ಮಿಕರು, ತಂತ್ರಜ್ಞರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಇನ್ನು ಸರ್ಕಾರ ಚಿತ್ರೀಕರಣಕ್ಕೆ ಅವಕಾಶ ನೀಡಿರುವುದನ್ನು ಚಿತ್ರರಂಗದ ಕಲಾವಿದರು, ತಂತ್ರಜ್ಞರು, ನಿರ್ಮಾಪಕರು ಮತ್ತು ಕಾರ್ಮಿಕರು ಸ್ವಾಗತಿಸಿದ್ದು, ಆದಷ್ಟು ಬೇಗ ಮತ್ತೆ ಚಿತ್ರೀಕರಣ ಆರಂಭವಾಗುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಹೊರ ರಾಜ್ಯದಲ್ಲಿ ಚಿತ್ರೀಕರಣ ನಡೆಸುತ್ತಿರುವ ಕೆಲವು ಧಾರಾವಾಹಿಗಳು ಮತ್ತು ತಮ್ಮ ಚಿತ್ರೀಕರಣವನ್ನು ರಾಜ್ಯದಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಇನ್ನು ಲಾಕ್ ಡೌನ್‌ನಿಂದ ಅರ್ಧಕ್ಕೆ ನಿಂತಿದ್ದ ಸಿನಿಮಾಗಳ ಚಿತ್ರೀಕರಣವನ್ನು ಕೂಡ ಮತ್ತೆ ಶುರು ಮಾಡಲು ಚಿತ್ರತಂಡಗಳು ಪ್ಲಾನ್ ಮಾಡಿಕೊಳ್ಳುತ್ತಿವೆ. ಒಟ್ಟಾರೆ ಇದೇ ಮಾರ್ಚ್ ತಿಂಗಳಿನಿಂದ ಕೋವಿಡ್ ಎರಡನೇ ಅಲೆಯ ಆತಂಕ ಜೋರಾಗಿದ್ದರಿಂದ, ಅನೇಕ ಸಿನಿಮಾಗಳು ಮುಹೂರ್ತವನ್ನು ಆಚರಿಸಿಕೊಂಡಿದ್ದರೂ, ಶೂಟಿಂಗ್‌ಗೆ ಹೊರಡುವ ಮನಸ್ಸು ಮಾಡಿರಲಿಲ್ಲ.
ಅದರಲ್ಲೂ ಬಿಗ್ ಬಜೆಟ್ ಮತ್ತು ಬಿಗ್ ಸ್ಟಾರ್ ಸಿನಿಮಾಗಳಂತೂ ಕಾದು ನೋಡುವ ತಂತ್ರ ಅನುಸರಿಸಲು ಮುಂದಾಗಿದ್ದವು. ಇನ್ನುಕೆಲವು ಸಿನಿಮಾಗಳು ಮಾರ್ಚ್ ತಿಂಗಳ ಕೊನೆಯವರೆಗೂ ಆತಂಕದಿಂದಲೇ ಒಂದಷ್ಟು ಚಿತ್ರೀಕರಣ ನಡೆಸಿ, ಕೊನೆಗೆ ಪ್ಯಾಕ್ ಅಪ್ ಮಾಡಿದ್ದವು.
ಮಾರ್ಚ್ ಕೊನೆಗೆ ಲಾಕ್‌ಡೌನ್ ಆತಂಕ ಜೋರಾಗುತ್ತಿದ್ದಂತೆ, ಸಂಪೂರ್ಣ ಎಲ್ಲ ಸಿನಿಮಾ ತಂಡಗಳು ಕೂಡ ತಮ್ಮ ಸಿನಿಮಾದ ಶೂಟಿಂಗ್ ಅನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದ್ದವು. ಈಗ ಮತ್ತೆ ಚಿತ್ರೀಕರಣಕ್ಕೆ ಚಾಲನೆ ಸಿಗುತ್ತಿದ್ದು, ಸಿನಿಮಾ ತಂಡಗಳು ಸದ್ಯ ತಮ್ಮಕಲಾವಿದರು ಮತ್ತು ತಂತ್ರಜ್ಞರ ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು,ಮತ್ತೆ ಶೂಟಿಂಗ್‌ಗೆ ಹೊರಡಲು ಅಣಿಯಾಗುತ್ತಿವೆ.
ಈಗಾಗಲೇ ನಮ್ಮ ಸಿನಿಮಾದ ಮುಕ್ಕಾಲು ಬಾಗ ಶೂಟಿಂಗ್ ಮುಗಿದಿದೆ. ಇನ್ನೇನು ಬಾಕಿಯಿರುವ ಶೂಟಿಂಗ್ ಮಾಡಬೇಕು ಅಂದುಕೊಂಡು ಪ್ಲಾನಿಂಗ್ ಮಾಡುವಷ್ಟರಲ್ಲಿ ಲಾಕ್ ಡೌನ್ ಅನೌನ್ಸ್ ಆಯ್ತು. ಸದ್ಯ ಶೂಟಿಂಗ್‌ಗೆ ಪರ್ಮಿಷನ್ ಕೊಟ್ಟಿರುವುದರಿಂದ, ಈಗ ಮತ್ತೆ ಶೂಟಿಂಗ್ ಪ್ಲಾನ್ ಮಾಡಿಕೊಳ್ಳಬೇಕಾಗಿದೆ. ಈ ಬಗ್ಗೆ ನಮ್ಮ ತಂಡದ ಜೊತೆ ಚರ್ಚಿಸುತ್ತಿದ್ದೇವೆ.
- ಯೋಗರಾಜ್ ಭಟ್, “ಗಾಳಿಪಟ-2′ ಚಿತ್ರದ ನಿರ್ದೇಶಕ
ನಮ್ಮ “ಕಬ್ಜ’ ಸಿನಿಮಾದ ಬಹುಭಾಗ ಸೆಟ್‌ನಲ್ಲೇ ನಡೆಯುವುದರಿಂದ, ಅಗತ್ಯ ಸೆಟ್‌ಗಳನ್ನು ಮೊದಲು ನಿರ್ಮಾಣ ಮಾಡಿಕೊಳ್ಳಬೇಕು. ಹಾಗಾಗಿ ಇಂದಿನಿಂದಲೇ ಸಿನಿಮಾ ಸೆಟ್ ಕೆಲಸ ಶುರುವಾಗಲಿದೆ. ಸೆಟ್ ಕೆಲಸ ಮುಗಿಯುತ್ತಿದ್ದಂತೆ, ಮತ್ತೆ ಶೂಟಿಂಗ್ ಶುರುಮಾಡಲು ಪ್ಲಾನ್ ಹಾಕಿಕೊಂಡಿದ್ದೇವೆ.ಈಗಾಗಲೆ ನಮ್ಮ ತಂಡಕ್ಕೆ ಮಾಹಿತಿ ನೀಡುತ್ತಿದ್ದೇವೆ. ಮುಂದಿನ ವಾರದ ವೇಳೆ ಶೂಟಿಂಗ್ ಶುರುಮಾಡುವಯೋಜನೆಯಲ್ಲಿದ್ದೇವೆ.
- ಆರ್. ಚಂದ್ರು, “ಕಬ್ಜ’ ನಿರ್ದೇಶಕ ಮತ್ತು ನಿರ್ಮಾಪಕ
ಈಗಾಗಲೇ ನಮ್ಮ ಸಿನಿಮಾದ 80%ರಷ್ಟು ಶೂಟಿಂಗ್ ಮುಗಿಸಿದ್ದೇವೆ.ಕೊನೆಹಂತದ ಶೂಟಿಂಗ್ ಮಾಡಬೇಕು ಅಂದುಕೊಳ್ಳುವಷ್ಟರಲ್ಲಿ ಲಾಕ್ ಡೌನ್ ಅನೌನ್ಸ್ ಆಯ್ತು.ಈಗ ಮತ್ತೆ ಪರ್ಮಿಷನ್ ಸಿಕ್ಕಿರುವುದರಿಂದ, ಮುಂದಿನ ವಾರದಿಂದ ಶೂಟಿಂಗ್ ಶುರುಮಾಡುತ್ತಿದ್ದೇವೆ.ಈಗಾಗಲೇ ಆರ್ಟಿಸ್ಟ್,ಟೆಕ್ನಿಷಿಯನ್ಸ್ ಸಂಪರ್ಕಿಸುತ್ತಿದ್ದೇವೆ. ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ.
- ಹರಿ ಸಂತೋಷ್, “ಬೈಟು ಲವ್’ ಚಿತ್ರದ ನಿರ್ದೇಶಕ