ಕನ್ನಡ ಸಿನಿಮಾವೊಂದರ ಚಿತ್ರೀಕರಣ ನೂರು ದಿನ ದಾಟಿದರೆ ಅನೇಕರು ಹುಬ್ಬೇರಿಸುವ ಸಮಯವೊಂದಿತ್ತು. ಆದರೆ, ಈಗ ನೂರು ದಿನ ದಾಟುವುದು ಸಹಜವಾಗಿದೆ. ಅದೆಷ್ಟೋ ಸಿನಿಮಾಗಳು 130, 160 ದಿನಗಳ ಚಿತ್ರೀಕರಣ ಮಾಡಿವೆ. ಆದರೆ, ಈಗ ಕನ್ನಡ ಚಿತ್ರವೊಂದು ಬರೋಬ್ಬರಿ 200 ದಿನಗಳ ಚಿತ್ರೀಕರಣದತ್ತ ದಾಪುಗಾಲು ಇಡುತ್ತಿದೆ. ಅದು ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರ.
ಸದ್ಯ ಬಹುನಿರೀಕ್ಷೆ ಹುಟ್ಟಿಸಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರೀಕರಣ ನಡೆಯುತ್ತಿದ್ದು, ಈಗಾಗಲೇ 160 ದಿನಗಳ ಕಾಲ ಚಿತ್ರೀಕರಣ ನಡೆದುಹೋಗಿದೆ. ಹಾಗಂತ ಅಷ್ಟಕ್ಕೇ ಚಿತ್ರೀಕರಣ ಮುಗಿದಿದೆ ಎಂದು ನೀವು ಭಾವಿಸುವಂತಿಲ್ಲ. ಇನ್ನೂ 40 ದಿನಗಳ ಕಾಲ ಚಿತ್ರೀಕರಣ ಬಾಕಿ ಇದೆ. ಅಲ್ಲಿಗೆ “ಶ್ರೀಮನ್ನಾರಾಯಣ’ನಿಗೆ 200 ದಿನ ಚಿತ್ರೀಕರಣ ಮಾಡಿದಂತಾಗುತ್ತದೆ. ಎಲ್ಲಾ ಓಕೆ, 200 ದಿನ ಚಿತ್ರೀಕರಣ ಮಾಡುವಂಥದ್ದೇನಿದೆ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
ಇದಕ್ಕೆ ನಿರ್ಮಾಪಕರಾದ ಪುಷ್ಕರ್ ಉತ್ತರಿಸುತ್ತಾರೆ. “ಆರಂಭದಲ್ಲಿ ನಾವು ಈ ಸಿನಿಮಾವನ್ನು 100 ದಿನಗಳಲ್ಲಿ ಮುಗಿಸಬೇಕೆಂದುಕೊಂಡಿದ್ದೆವು. ಆದರೆ, ಐದು ಭಾಷೆಗಳಲ್ಲಿ ಈ ಸಿನಿಮಾವನ್ನು ಮಾಡಲು ನಿರ್ಧರಿಸಿದ ನಂತರ ಹೆಚ್ಚು ಡೀಟೇಲ್ ಆಗಿ ಕೆಲಸ ಮಾಡಲು ಆರಂಭಿಸಿದೆವು. ಸಾಮಾನ್ಯವಾಗಿ ಹಾಡು, ಫೈಟ್ ಅಥವಾ ಕೆಲವು ದೃಶ್ಯಗಳಲ್ಲಿ ಅದ್ಧೂರಿತನವಿರುತ್ತದೆ. ಆದರೆ, ಈ ಸಿನಿಮಾದಲ್ಲಿ ಆರಂಭದಿಂದ ಕೊನೆವರೆಗೂ ಒಂದೇ ತೆರನಾದ ಅದ್ಧೂರಿತನವನ್ನು ಕಾಯ್ದುಕೊಂಡಿದ್ದೇವೆ. ಗುಣಮಟ್ಟಕ್ಕೆ ಹೆಚ್ಚು ಒತ್ತುಕೊಟ್ಟು ಚಿತ್ರ ಮಾಡುತ್ತಿರುವುದರಿಂದ ಚಿತ್ರೀಕರಣದ ದಿನಗಳು ಕೂಡಾ ಹೆಚ್ಚಾಗುತ್ತಿದೆ.
ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲಿ ನಡೆದಿದೆ. ನಾಲ್ಕು ಹಾಡು ಹಾಗೂ ಫೈಟ್ಸ್ ಚಿತ್ರೀಕರಣಕ್ಕೆ 70 ರಿಂದ 80 ದಿನ ಬೇಕಾಯಿತು. ಈಗಾಗಲೇ 160 ದಿನಗಳ ಚಿತ್ರೀಕರಣವಾಗಿದ್ದು, ಇನ್ನೂ 40 ದಿನ ಬಾಕಿ ಇದೆ. ಬಹುಶಃ 200 ದಿನ ಚಿತ್ರೀಕರಣ ಮಾಡಿದ ಮೊದಲ ಕನ್ನಡ ಸಿನಿಮಾ ನಮ್ಮದೇ ಇರಬೇಕು’ ಎಂದು ವಿವರ ಕೊಡುತ್ತಾರೆ ಪುಷ್ಕರ್. ಮಾರ್ಚ್ ಕೊನೆಯ ವೇಳೆಗೆ ಚಿತ್ರೀಕರಣ ಮುಗಿಯಲಿದ್ದು, ಜುಲೈನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. “ಅವನೇ ಶ್ರೀಮನ್ನಾರಾಯಣ’ ಚಿತ್ರ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.