ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಬುಧವಾರ 35 ವರ್ಷದ ಸಾಮಾಜಿಕ ಮಾಧ್ಯಮ ಪ್ರಭಾವಿ ಮಹಿಳೆಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ. ದಾಳಿಯಲ್ಲಿ ಮಹಿಳೆಯ ಸೋದರಳಿಯ 10 ವರ್ಷದ ಬಾಲಕ ಕೂಡ ಗಾಯಗೊಂಡಿದ್ದಾನೆ.
ಈ ದಾಳಿಯನ್ನು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕರು ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ರಾತ್ರಿ 7.55 ರ ಸುಮಾರಿಗೆ ಭಯೋತ್ಪಾದಕರು ಅಮ್ರೀನ್ ಭಟ್ ಎಂಬ ಮಹಿಳೆಯ ಮನೆಯ ಮೇಲೆ ಗುಂಡು ಹಾರಿಸಿದ್ದಾರೆ. ಗಾಯಗೊಂಡ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು ಆಕೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು” ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಮೃತ ಅಮ್ರೀನ್ ಭಟ್ ಟಿಕ್‌ಟಾಕ್ ಕಲಾವಿದೆ ಮತ್ತು ಟಿವಿ ತಾರೆ. ಘಟನೆಯಲ್ಲಿ ಮಹಿಳೆಯ ಸೋದರಳಿಯ ಫರ್ಹಾನ್ ಜುಬೈರ್ ಕೂಡ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ವಿಜಯೇಂದ್ರ ಮುಂದೇನು? ಶುರುವಾಗಿದೆ ಲೆಕ್ಕಾಚಾರ ,ಸಿಗಲಿದೆಯೇ ಪ್ರ.ಕಾರ್ಯದರ್ಶಿ ಹುದ್ದೆ ?
ಈ ಪ್ರದೇಶವನ್ನು ಸುತ್ತುವರಿದಿದ್ದು, ದಾಳಿಕೋರರನ್ನು ಹಿಡಿಯಲು ಶೋಧ ಕಾರ್ಯ ಆರಂಭಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಇದು ಎರಡನೇ ಉದ್ದೇಶಿತ ದಾಳಿಯಾಗಿದೆ. ಶ್ರೀನಗರದಲ್ಲಿ ಪೊಲೀಸರೊಬ್ಬರ ಮನೆಯ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದರು. ಪೊಲೀಸ್ ಸಾವನ್ನಪ್ಪಿದ್ದು, ಆತನನ್ನು ರಕ್ಷಿಸಲು ಧಾವಿಸಿದ ಏಳು ವರ್ಷದ ಮಗಳು ದಾಳಿಯಲ್ಲಿ ಗಾಯಗೊಂಡಿದ್ದಾಳೆ.