Advertisement

ಸೇಲ್ಸ್‌ಮನ್‌ ಸೋಗಿನ ಶೋಕೀಲಾಲನ ಸೆರೆ

11:51 AM Jan 13, 2018 | Team Udayavani |

ಬೆಂಗಳೂರು: ಅವನೊಬ್ಬ ಕಳ್ಳ. ಯಾರೂ ಇಲ್ಲದ ಮನೆಗೆ ನುಗ್ಗಿ ಆಭರಣ ಸೇರಿ ಇದ್ದಬದ್ದುದನ್ನು ಕದ್ದೊಯ್ಯುವುದೇ ಆವನ ಕಸುಬು. ಹೀಗೆ ಕದ್ದ ಆಭರಣ, ಮಾಲುಗಳನ್ನು ಮಾರಿ ಬಂದ ಹಣದಲ್ಲಿ ಅಯ್ನಾಶಿ ಜೀವನ ನಡೆಸುತ್ತಿದ್ದ. ಸೂಟು, ಬೂಟು ಧರಿಸಿ ಊರೂರು ಸುತ್ತುತ್ತಿದ್ದ.

Advertisement

ವೇಶ್ಯೆಯರ ಸಂಗವನ್ನೂ ಮಾಡುತ್ತಿದ್ದ. ಸೇಲ್ಸ್‌ಮನ್‌ ಸೋಗಿನಲ್ಲಿ ಮನೆಗಳವು ಮಾಡುತ್ತಿದ್ದ ಈ ಶೋಕೀಲಾಲ ಈಗ ಬಸವನಗುಡಿ ಪೊಲೀಸರ ಅತಿಥಿಯಾಗಿದ್ದಾನೆ. ತುಮಕೂರು ಮೂಲದ ಸೈಯದ್‌ ಅಹ್ಮದ್‌ (32) ಬಂಧಿತ. ಈತನ ಬಂಧನದಿಂದ ಆರು ಪ್ರಕರಣಗಳು ಪತ್ತೆಯಾಗಿದ್ದು, 24 ಲಕ್ಷ ಮೌಲ್ಯದ 800 ಗ್ರಾಂ ಚಿನ್ನಾಭರಣ, ಒಂದು ಪಲ್ಸರ್‌ ಬೈಕ್‌ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು ಗ್ರಾಮಾಂತರ, ನಗರ, ತುಮಕೂರಿನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸೇಲ್ಸ್‌ಮನ್‌ ವೇಷದಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ. ಈ ಕಳವು ವಸ್ತುಗಳನ್ನು ಅಪರಿಚಿತ ಮಹಿಳೆಯರ ಮೂಲಕ ಗಿರಿವಿ ಅಂಗಡಿಯಲ್ಲಿ ಮಾರಾಟ ಮಾಡಿ, ಮೋಜಿನ ಜೀವನ ನಡೆಸುತ್ತಿದ್ದ. ಅಲ್ಲದೇ, ಗೋವಾ, ಮುಂಬೈ, ಚೆನ್ನೈ ಸೇರಿದಂತೆ ದೇಶದ ವಿವಿಧ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಯುವತಿಯರನ್ನು ಕರೆದೊಯ್ದು ಮೋಜು ಮಾಡುತ್ತಿದ್ದ ಎಂದು ಡಿಸಿಪಿ ಡಾ ಶರಣಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದಕ್ಷಿಣ ವಿಭಾಗದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ದರೋಡೆ, ಕಳವು ಪ್ರಕರಣಗಳ ಸಂಬಂಧ ವಿಶೇಷ ತಂಡ ರಚಿಸಲಾಗಿತ್ತು. ಈ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಅವರು ವಿವರಿಸಿದರು.

ಯಾರಿಗೂ ಬೇಡವಾದವನು: ತುಮಕೂರು ಮೂಲದ ಸೈಯದ್‌ ಅಹ್ಮದ್‌ ಜಯನಗರ ಠಾಣೆ ವ್ಯಾಪ್ತಿಯಲ್ಲಿ ಪೋಷಕರೊಂದಿಗೆ ನೆಲೆಸಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರಿಂದ ಪೋಷಕರು ಮನೆಯಿಂದ ಹೊರ ಹಾಕಿದ್ದರು. ಕೆಲ ವರ್ಷಗಳ ಹಿಂದೆ ಆರೋಪಿ ವಿವಾಹವಾಗಿದ್ದು, ಈತನ ವರ್ತನೆಯಿಂದ ಬೇಸತ್ತ  ಪತ್ನಿ ಸೈಯದ್‌ನಿಂದ ದೂರವಾಗಿ, ಮತ್ತೂಂದು ಮದುವೆಯಾಗಿದ್ದಾರೆ. ಹೀಗಾಗಿ ಸ್ನೇಹಿತರು ಹಾಗೂ ಹೋಟೆಲ್‌ಗ‌ಳಲ್ಲಿ ತಂಗುತ್ತಿದ್ದ.

Advertisement

ಸೇಲ್ಸ್‌ಮನ್‌ ವೇಷ!: ಸೇಲ್ಸ್‌ಮೆನ್‌ ರೀತಿ ಹೆಗಲ ಮೇಲೊಂದು ಬ್ಯಾಗ್‌ ಹಾಕಿಕೊಂಡು ಈ ವೇಳೆ ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿನ ಮನೆಗಳಿಗೆ ಹೋಗಿ ಕಾಲಿಂಗ್‌ ಬೆಲ್‌ ಮಾಡುತ್ತಿದ್ದ. ಮನೆಯೊಳಗಿಂದ ಯಾರಾದರು ಬಂದರೆ, ವಿಳಾಸ ಕೇಳುವ ನೆಪದಲ್ಲಿ ಅವರನ್ನು ಮಾತನಾಡಿಸಿ ಸ್ಥಳದಿಂದ ಕಾಲ್ಕಿಳುತ್ತಿದ್ದ.

ಒಂದು ವೇಳೆ ಮೂರ್ನಾಲ್ಕು ಬಾರಿ ಕಾಲಿಂಗ್‌ ಬೆಲ್‌ ಮಾಡಿದಾಗ ಯಾರೂ ಪ್ರತಿಕ್ರಿಯಿಸದಿದ್ದರೆ ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಖಚಿತ ಪಡಿಸಿಕೊಂಡು ರಾಡ್‌ನಿಂದ ಬಾಗಿಲ ಚಿಲಕ ಒಡೆದು ಒಳ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವು ಮಾಡುತ್ತಿದ್ದ. ಬಳಿಕ ಯಾರಿಗೂ ತಿಳಿಯದಂತೆ ಮನೆಯ ಬಾಗಿಲ ಚಿಲಕ ಸರಿಪಡಿಸಿ ಸ್ಥಳದಿಂದ ಪರಾರಿಯಾಗುತ್ತಿದ್ದ. 

ಸೈಯದ್‌ ಅಹ್ಮದ್‌ ಈ ಮೊದಲು ಗಿರಿನಗರ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ. ನಂತರವೂ ಕಳವನ್ನೇ ವೃತ್ತಿಯಾಗಿಸಿಕೊಂಡಿದ್ದು, ಇದುವರೆಗೂ ಈತನ ವಿರುದ್ಧ ನಾಲ್ಕೈದು ಜಿಲ್ಲೆಗಳಲ್ಲಿ 80ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

ವೇಶ್ಯೆಯರ ಮೂಲಕ ಚಿನ್ನ ಮಾರಾಟ: ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಆ ಕ್ಷಣದಲ್ಲಿ ಸಿಗುವ ವೇಶ್ಯೆಯರನ್ನು ಪರಿಚಯಿಸಿಕೊಂಡು ಬುರ್ಖಾ ಧರಿಸಿ ಗಿರಿವಿ ಅಂಗಡಿಗಳಿಗೆ ಕರೆದೊಯ್ಯುತ್ತಿದ್ದ. ನಂತರ ಪತ್ನಿ, ಅಕ್ಕ, ತಂಗಿ, ದೊಡ್ಡಮ್ಮ ಎಂದು ಅಂಗಡಿಯವರಿಗೆ ಪರಿಚಯಿಸಿ, ಮನೆಯಲ್ಲಿ ಸಮಸ್ಯೆಯಿದೆ ಎಂದು ಹೇಳಿ ಚಿನ್ನಾಭರಣ ಮಾರಾಟ ಮಾಡುತ್ತಿದ್ದ.

ಒಮ್ಮೆ ಕರೆದೊಯ್ದ ಮಹಿಳೆಯನ್ನು ಮತ್ತೂಮ್ಮೆ ಕರೆದೊಯ್ಯುತ್ತಿರಲಿಲ್ಲ. ಅಲ್ಲದೆ ಒಮ್ಮೆ ಹೋದ ಗಿರವಿ ಅಂಗಡಿಗೆ ಮತಯೊ¤ಮ್ಮೆ ಹೋಗುತ್ತಿರಲಿಲ್ಲ. ಆ ಮಹಿಳೆಯರು ಸಂಪರ್ಕ ಸಂಖ್ಯೆ ಕೇಳಿದರೂ ಕೊಡುತ್ತಿರಲಿಲ್ಲ. ಒಂದಿಷ್ಟು (3-5 ಸಾವಿರ) ಹಣ ಕೊಟ್ಟು ನಾಪತ್ತೆಯಾಗುತ್ತಿದ್ದ ಎಂದು ಅಧಿಕಾರಿ ಹೇಳಿದರು.

ಸೂಟು-ಬೂಟು ಶೋಕಿಲಾಲ: ದ್ವಿತೀಯ ಪಿಯುಸಿ ಓದಿರುವ ಸೈಯದ್‌ ಅಹ್ಮದ್‌, ಸಾಮಾನ್ಯ ವೇಷದಲ್ಲಿ ಗಿರವಿ ಅಂಗಡಿಗೆ ಹೋದರೆ ಅನುಮಾನ ಬರುತ್ತದೆ ಎಂದು ಭಾವಿಸಿದ್ದ. ಹೀಗಾಗಿ ಕದ್ದ ಆಭರಣಗಳನ್ನು ಮಾರಾಟ ಮಾಡಲು ಒಂದೆರಡು ಜೊತೆ ದುಬಾರಿ ಸೂಟು ಹಾಗೂ ಬೂಟುಗಳನ್ನು ಖರೀದಿಸಿದ್ದ.

ಚಿನ್ನಾಭರಣ ಮಾರಾಟ ಮಾಡುವಾಗ ಈ ಸೂಟುಬೂಟು ಧರಿಸಿ, ಬಾಡಿಗೆ ಕಾರುಗಳಲ್ಲಿ ಗಿರವಿ ಹಾಗೂ ಜ್ಯುವೆಲ್ಲರಿ ಶಾಪ್‌ಗ್ಳಿಗೆ ಹೋಗುತ್ತಿದ್ದ. ಅದೇ ಕಾರುಗಳಲ್ಲೇ ಅಪರಿಚಿತ ಮಹಿಳೆಯರನ್ನೂ ಕರೆದೊಯ್ಯುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಪೊಲೀಸ್‌ ಕ್ವಾಟ್ರರ್ಸ್‌ನಲ್ಲೂ ಕಳವು!: ಬಸವನಗುಡಿ ಠಾಣೆ ಮುಖ್ಯ ಪೇದೆ ಸಿದ್ದರಾಮ ಅವರು ಕೆಂಗೇರಿ ಪೊಲೀಸ್‌ ಕ್ವಾಟ್ರರ್ಸ್‌ನಲ್ಲಿ ನೆಲೆಸಿದ್ದು, ಕೆಲ ದಿನಗಳ ಹಿಂದೆ ಕಾರ್ಯನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದರು.

ಈ ವೇಳೆ ಆರೋಪಿ ಮನೆಗೆ ನುಗ್ಗಿ, ಸೂðಡ್ರೈವರ್‌ ಬಳಸಿ ಬೀರುವಿನ ಬಾಗಿಲು ತೆಗೆದು 89 ಗ್ರಾಂ. ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿದ್ದ. ಈ ಪೊಲೀಸ್‌ ಕ್ವಾಟ್ರರ್ಸ್‌ನಲ್ಲಿ ಹೆಚ್ಚು ಮನೆಗಳು ಇಲ್ಲದಿರುವುದರಿಂದ ಆರೋಪಿ ಸುಲಭವಾಗಿ ಕೃತ್ಯ ಎಸಗಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next