ಬೆಂಗಳೂರು: ಸಹಜ ದೇಹದಾರ್ಢ್ಯ ಅಥವಾ ನ್ಯಾಚುರಲ್ ಬಾಡಿ ಬಿಲ್ಡಿಂಗ್… ಈ ಪದ ಕೇಳಿದಾಗ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಹೀಗೊಂದು ಪ್ರಕೃತಿ ಸಹಜ ದೇಹದಾರ್ಢ್ಯ ಸ್ಪರ್ಧೆಗಳಲ್ಲಿ ವಿಶ್ವಮಟ್ಟದ ಪ್ರಶಸ್ತಿಗಳನ್ನು ಗೆದ್ದು ಖ್ಯಾತರಾಗಿದ್ದಾರೆ ಬೆಂಗಳೂರಿನ ಶೋಧನ್ ರೈ. ಅವರ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ ಏಕಲವ್ಯ ಪುರಸ್ಕಾರ ನೀಡಿ ಗೌರವಿಸಿದೆ.
ಮೂಲತಃ ಶೋಧನ್ ತಂದೆ ತಾಯಿ ದಕ್ಷಿಣ ಕನ್ನಡ ಜಿಲ್ಲೆಯವರು. ಶೋಧನ್ ಮಾತ್ರ ಬೆಂಗಳೂರಿನಲ್ಲಿ ಹುಟ್ಟಿ, ದಾಸರಹಳ್ಳಿಯಲ್ಲಿ ಬಾಲ್ಯದ ವಿದ್ಯಾಭ್ಯಾಸ ಮಾಡಿದರು.
ರಾಜಾಜಿನಗರದ ಕೆಎಲ್‌ಇ ಕಾಲೇಜಿನಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಸದಾಶಿವನಗರದ ಕ್ಲಾಸಿಕ್ ಜಿಮ್‌ನಲ್ಲಿ ಇವರಿಗೆ ದೇಹದಾರ್ಢ್ಯ ದ ಮೇಲೆ ಆಸಕ್ತಿ ಬೆಳೆಯಿತು. ತಂದೆ ಜೆ.ಎನ್.ರೈ ಅವರ ಪ್ರೋತ್ಸಾಹದೊಂದಿಗೆ ಉದ್ದೀಪನಮುಕ್ತರಾಗಿ ದೇಹವನ್ನು ಬೆಳೆಸಿದರು. ಅನಂತರ ಹಲವು ವಿಶ್ವಮಟ್ಟದ ಸ್ಪರ್ಧೆಗಳಲ್ಲಿ ತೊಡಗಿಕೊಂಡರು. ಹಲವು ಪ್ರಶಸ್ತಿಗಳನ್ನೂ ಗೆದ್ದರು.
ಶೋಧನ್ ಗೆದ್ದ ಪ್ರಶಸ್ತಿಗಳು
2022ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಐಎನ್‌ಬಿಎ ವಿಶ್ವಕಪ್ ಸ್ಪರ್ಧೆಯ 35+ ವಯೋಮಿತಿ ವಿಭಾಗದಲ್ಲಿ ಸ್ಪರ್ಧಿಸಿದ ಶೋಧನ್ ಚಿನ್ನ ಗೆದ್ದರು. ಲಾಸ್ ವೆಗಾಸ್‌ನಲ್ಲಿ 2022ರಲ್ಲೇ ಐಎನ್‌ಬಿಎ ನ್ಯಾಚುರಲ್ ಒಲಿಂಪಿಯ ನಡೆಯಿತು. ಇಲ್ಲಿ 35+ ವಯೋಮಿತಿಯಲ್ಲಿ ಸ್ಪರ್ಧಿಸಿದ ಶೋಧನ್ 7ನೇ ಸ್ಥಾನ ಪಡೆದರು. ಇಲ್ಲಿ ಒಟ್ಟು 500 ಸ್ಪರ್ಧಿಗಳು ವಿಶ್ವಾದ್ಯಂತ ಪಾಲ್ಗೊಂಡಿದ್ದರು.
Related Articles
2017ರಲ್ಲಿ ಅಮೆರಿಕದಲ್ಲಿ ನಡೆದ ವಿಶ್ವಕಪ್ ಹಾಗೂ ಆಕ್ಲೆಂಡ್‌ನಲ್ಲಿ ನಡೆದ ನ್ಯಾಚುರಲ್ ಯುನಿವರ್ಸ್ ಸ್ಪರ್ಧೆಯಲ್ಲೂ ಚಿನ್ನ ಜಯಿಸಿದ್ದಾರೆ. ಇದೇ ಕೂಟ 2018ರಲ್ಲಿ ಆಸ್ಟ್ರೇಲಿಯದ ಬ್ರಿಸ್ಬೇನ್‌ನಲ್ಲಿ ನಡೆದಾಗ ಬೆಳ್ಳಿ ಪದಕ ಗೆದ್ದರು. 2019ರಲ್ಲಿ ಅಮೆರಿಕದಲ್ಲಿ ನಡೆದ ಕೂಟದಲ್ಲೂ ಬೆಳ್ಳಿ ಜಯಿಸಿದರು.
ಏನಿದು ಸಹಜ ದೇಹದಾರ್ಢ್ಯ?
ದೇಹದಾರ್ಢ್ಯ ಕ್ಕೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಇನ್ನೂ ಕ್ರೀಡಾ ಮಾನ್ಯತೆಯನ್ನು ನೀಡಿಲ್ಲ. ಅದನ್ನು ಪಡೆದುಕೊಳ್ಳಲು ಐಎನ್‌ಬಿಎ (ಇಂಟರ್ ನ್ಯಾಶನಲ್ ನ್ಯಾಚುರಲ್ ಬಾಡಿಬಿಲ್ಡಿಂಗ್ ಅಸೋಸಿಯೇಶನ್) ಶ್ರಮ ಹಾಕಿದೆ.
ಪ್ರಸ್ತುತ ದೇಹದಾರ್ಢ್ಯ ಎನ್ನುವುದು ದೇಹವನ್ನು ಬೆಳೆಸುವ ವ್ಯಾಯಾಮಕ್ರಿಯೆ ಎನ್ನುವುದು ಎಲ್ಲರ ಸಹಜ ಅಭಿಪ್ರಾಯ. ಈ ರೀತಿ ದೇಹದಾರ್ಢ್ಯ ಸ್ಪರ್ಧೆಗಳನ್ನು ಆಯೋಜಿಸುವ ಹಲವು ಸಂಸ್ಥೆಗಳು ವಿಶ್ವದಲ್ಲಿವೆ, ಭಾರತದಲ್ಲೂ ಇವೆ.
ಬಹುತೇಕ ಸಂಸ್ಥೆಗಳು ವಾಡಾದಿಂದ ನಿಷೇಧಿಸ ಲ್ಪಟ್ಟಿರುವ ಉದ್ದೀಪನ ದ್ರವ್ಯಗಳನ್ನು ಸೇವಿಸುವ ಸ್ಪರ್ಧಿಗಳಿಗೆ ಅವಕಾಶ ನೀಡುತ್ತವೆ. ಅವು ವಾಡಾ ನಿಯಮ ಗಳನ್ನು ಪಾಲಿಸುವುದಿಲ್ಲ. ಆದರೆ ಇಂತಹ ಯಾವುದೇ ಉದ್ದೀಪನಗಳನ್ನು ಸೇವಿಸದೆ, ಸಹಜವಾಗಿ ಪೌಷ್ಟಿಕ ಆಹಾರ ಬಳಸಿಯೇ ದೇಹ ಬೆಳೆಸುವ ಕ್ರಮವೊಂದಿದೆ. ಇದೇ ನ್ಯಾಚುರಲ್ ಬಾಡಿ ಬಿಲ್ಡಿಂಗ್ ಅಥವಾ ಪ್ರಕೃತಿಸಹಜ ದೇಹದಾರ್ಢ್ಯ ಕ್ರಮ. ಈ ಸಹಜ ದೇಹದಾರ್ಢ್ಯಪಟುಗಳನ್ನು ಬೆಂಬಲಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಐಎನ್‌ಬಿಎ ಮಾಡುತ್ತಿದೆ.