ಬಸವಕಲ್ಯಾಣ: ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ವಚನ ರಥೋತ್ಸವವನ್ನು ಹುಲಸೂರು ಶ್ರೀಗಳ ನೇತೃತ್ವದಲ್ಲಿ ಹಮ್ಮಿಕೊಂಡಿರುವುದು ಶ್ವಾಘನೀಯ ಕಾರ್ಯವಾಗಿದೆ ಎಂದು ಬಸವಕಲ್ಯಾಣದ ಮಹಾಮನೆ ಅಧ್ಯಕ್ಷ ಶ್ರೀ ಸಿದ್ಧರಾಮ ಬೆಲ್ದಾಳ ಶರಣರು ಹೇಳಿದರು.
ಜಗದ್ಗುರು ಅಲ್ಲಮ ಪ್ರಭುದೇವರ ಶೂನ್ಯ ಪೀಠ ಅನುಭವ ಮಂಟಪದಲ್ಲಿ ಹುಲಸೂರಿನ ಬಸವ ಕೇಂದ್ರ, ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದಿಂದ ಹಮ್ಮಿಕೊಂಡ ಶರಣ ಸಂಸ್ಕೃತಿ ಹಾಗೂ ವಚನ ರಥೋತ್ಸವ ಅಂಗವಾಗಿ ನಡೆದ “ಅಭಿವ್ಯಕ್ತಿ ಹಾಗೂ ಸತ್ಯ ಶೋಧನೆಯ ಸವಾಲುಗಳು’ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿನ ಹಾಳು ಬಿದ್ದ ಅಲ್ಲಮ ಪ್ರಭು ಶೂನ್ಯ ಪೀಠವನ್ನು ಹುಲಸೂರು ಶ್ರೀಗಳು ಅಭಿವೃದ್ಧಿಗೊಳಿಸಿ, ಶರಣ ಅಭಿಮಾನಿಗಳು ಇಲ್ಲಿಗೆ ಬಂದು ಹೋಗುವಂತೆ ಮಾಡಿರುವುದು ಸಂತೋಷದ ಸಂಗತಿಯಾಗಿದೆ. ಜೊತೆಗೆ ಶರಣ-ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಮಾಡುತ್ತಿರುವ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದು, ಸ್ವತಂತ್ರ ಲಿಂಗಾಯತ ಧರ್ಮದ ಹೋರಾಟಕ್ಕೆ ಬೆಂಬಲಿಸಿದ ಸೂಚಿಸಿದರು.
ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಬಸವರಾಜ ಧನ್ನೂರ ಮಾತನಾಡಿ, ಶರಣ ಸಂಸ್ಕೃತಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಅದನ್ನು ನಡೆಸಿಕೊಂಡು ಹೋಗಲು ಹುಲಸೂರು ಶ್ರೀಗಳು ಅನೇಕ ವರ್ಷಗಳಿಂದ ಶ್ರಮಿಸುತ್ತಿದ್ದಾರೆ.
ಏಕೆಂದರೆ ಅನೇಕರಿಗೆ ನಾವು ಯಾವ ಸಂಸ್ಕೃತಿ ವಾರಸುದಾರರು ಎಂಬುದೇ ಗೊತ್ತಿಲ್ಲ. ಆದರೆ ಶ್ರೀಗಳು ಶರಣ-ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ಮಾತ್ರ ಮರೆಯುವಂತಿಲ್ಲ ಎಂದು ಹೇಳಿದರು. ಒಂದು ವೇಳೆ ಪ್ರತಿ ಹಳ್ಳಿಯಲ್ಲಿ ಇಂತಹ ಶ್ರೀಗಳು ಇದ್ದಿದ್ದರೆ, ನಾವು ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುವ ಅಗತ್ಯ ಬರುತ್ತಿರಲಿಲ್ಲ ಎಂದರು.
ಧಾರವಾಡದ ಹಿರಿಯ ಸಾಹಿತಿ ವೀರಣ್ಣ ರಾಜೂರ ಗುರುಬಸವ ಕಲ್ಯಾಣಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದ ಡಾ| ಶಿವಾನಂದ ಸ್ವಾಮೀಜಿ, ಜಿಲ್ಲಾ ಲಿಂಗಾಯತ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಸ್ವಾಮಿ, ಕ.ರಾ.ನೌ. ಸಂಘದ ಜಿಲ್ಲಾದ್ಯಕ್ಷ ರಾಜೇಂದ್ರಕುಮಾರ ಗಂದಗೆ, ತಾಲೂಕು ಅಧ್ಯಕ್ಷ ಶರಣಬಸಪ್ಪಾ ಬಿರಾದಾರ್, ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚೆನ್ನಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಂಜು ಕಾಂಗೆ, ಹಾಸ್ಯ ಕಲಾವಿದ ವೈಜನಾಥ ಸಜ್ಜನಶೆಟ್ಟಿ ಮತ್ತಿತರರು ಇದ್ದರು.