ಬೆಂಗಳೂರು: ಎರಡು ವರ್ಷಗಳಿಂದ ಅನಾರೋಗ್ಯಕ್ಕೀಡಾಗಿದ್ದ ಪತ್ನಿಯನ್ನು ಪತಿಯೇ ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಘಟನೆ ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತುರಹಳ್ಳಿಯ ಶಿವಮ್ಮ (50) ಕೊಲೆಯಾದವರು. ಈ ಸಂಬಂಧ ಆಕೆಯ ಪತಿ ಶಂಕರಪ್ಪ (60)ನನ್ನು ವಶಕ್ಕೆ ಪಡೆಯಲಾಗಿದೆ. ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ದುರ್ಘಟನೆ ನಡೆದಿದೆ. ವಿ
ಜಯಪುರ ಮೂಲದ ಆರೋಪಿ ಶಂಕರಪ್ಪ ತುರಹಳ್ಳಿಯು 80 ಅಡಿ ರಸ್ತೆಯಲ್ಲಿ ವಿಶ್ವನಾಥ ಎಂಬುವರಿಗೆ ಸೇರಿದ ನಿರ್ಮಾಣ ಹಂತದ ಕಟ್ಟಡದಲ್ಲಿ ಕಳೆದ ಒಂದು ವರ್ಷದಿಂದ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ. ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅದೇ ಕಟ್ಟಡದಲ್ಲಿ ವಾಸವಾಗಿದ್ದಾನೆ. 2 ವರ್ಷದ ಹಿಂದೆ ಪತ್ನಿ ಶಿವಮ್ಮಗೆ ಲಕ್ವ ಹೊಡೆದು ಎರಡು ಕಾಲುಗಳು ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದರು. ಅದರಿಂದ ಬೇಸರಗೊಂಡಿದ್ದ ಶಂಕರಪ್ಪ, ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಪತ್ನಿ ಶಿವಮ್ಮಳನ್ನು ಏಕಾಏಕಿ ಎತ್ತಿ ನಿರ್ಮಾಣ ಹಂತದ ಕಟ್ಟಡದ ಸೆಲ್ಲಾರ್‌ನಲ್ಲಿ ತುಂಬಿದ್ದ 9 ಅಡಿ ನೀರಿನ ಸಂಪ್‌ಗೆ ಎಸೆದು ಕೊಲೆ ಮಾಡಿದ್ದಾನೆ.
ಇದೇ ಸಮಯಕ್ಕೆ ಬ್ರೆಡ್ ತರಲು ಅಂಗಡಿಗೆ ಹೋಗಿದ್ದ 11 ವರ್ಷದ ಪುತ್ರ ನಿರ್ಮಾಣ ಹಂತದ ಕಟ್ಟಡದತ್ತ ಬಂದಿದ್ದಾನೆ. ಈ ವೇಳೆ ತಾಯಿ ಕೂಗುವುದು ಕೇಳಿಸಿದೆ. ಕೂಡಲೇ ಸೆಲ್ಲಾರ್ ಕಡೆಗೆ ಓಡಿ ನೋಡಿದಾಗ ಅಷ್ಟರಲ್ಲಿ ತಾಯಿ ಮೃತಪಟ್ಟಿದ್ದರು. ಗಾಬರಿಗೊಂಡು ಸಮೀಪದ ಗ್ಯಾರೇಜ್ ಬಳಿ ಓಡಿದ ಪುತ್ರ, ಗ್ಯಾರೇಜ್ ಸಿಬ್ಬಂದಿಗೆ ತಾಯಿಯ ಬಗ್ಗೆ ತಿಳಿಸಿದ್ದಾನೆ. ಕೂಡಲೇ ಗ್ಯಾರೇಜ್‌ನವರು ಓಡಿಬಂದು ನೋಡಿದಾಗ ಶಿವಮ್ಮ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಮೃತದೇಹವನ್ನು ನೀರಿನಿಂದ ಹೊರ ತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ಕಾಲುಗಳು ಸ್ವಾಧೀನ ಇಲ್ಲದ ಮಹಿಳೆ ಹೊರಗಡೆ ಹೇಗೆ ಬಂದದ್ದರು? ಸಂಪ್‌ಗೆ ಹೇಗೆ ಬಿದ್ದರು? ಎಂಬ ತನಿಖೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.