Advertisement

ದೃಶ್ಯಂ ಸಿನೆಮಾ ನೋಡಿ ಪತಿಯನ್ನೇ ಕೊಂದ ಮಹಿಳೆ

11:33 PM Sep 29, 2022 | Team Udayavani |

ಬೆಳಗಾವಿ: ಹೆಂಡತಿ ಮತ್ತು ಮಗಳ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಮಗಳ ಪ್ರಿಯಕರನೊಂದಿಗೆ ಸೇರಿ ಕನ್ನಡದ  “ದೃಶ್ಯಂ’ ಸಿನೆಮಾ ಮಾದರಿಯಲ್ಲಿ ಗಂಡನನ್ನು ಕೊಚ್ಚಿ ಕೊಲೆ ಮಾಡಿದ   ಘಟನೆ ಬೆಳಕಿಗೆ ಬಂದಿದೆ.

Advertisement

ನಗರದ ಕ್ಯಾಂಪ್‌ ಪ್ರದೇಶದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಸು ಧೀರ್‌ ಭಗವಾನದಾಸ್‌ ಕಾಂಬಳೆ (57) ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಪತ್ನಿ ರೋಹಿಣಿ ಸು ಧೀರ್‌ ಕಾಂಬಳೆ, ಪುತ್ರಿ ಸ್ನೇಹಾ ಹಾಗೂ ಈಕೆಯ ಪ್ರಿಯಕರ ಮಹಾರಾಷ್ಟ್ರದ ಪುಣೆಯ ಪಿಂಪ್ರಿ ನಿವಾಸಿ ಆಕಾಶ ಮಹಾದೇವ ವಿಠಕರ  ಅವರನ್ನು ಬಂಧಿಸಲಾಗಿದೆ.

ಸುಧೀರ್‌ ಕಾಂಬಳೆ ಅವರನ್ನು ಸೆ.17ರಂದು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಪತ್ನಿ, ಮಕ್ಕಳು ಪಕ್ಕದಲ್ಲಿ ಮಲಗಿದ್ದರೂ ಕೊಲೆ ನಡೆದಿರುವ ಬಗ್ಗೆ  “ನಮಗೆ ಗೊತ್ತೇ ಇಲ್ಲ’ ಎಂಬಂತೆ ನಾಟಕವಾಡಿದ್ದರು. ಪೊಲೀಸರು ತೀವ್ರ ತನಿಖೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.

ಪ್ರಕರಣದ ವಿವರ :

ಸುಧೀರ್‌ ಕಾಂಬಳೆ ದುಬಾೖಯಲ್ಲಿ ವಾಸವಾಗಿದ್ದರು. ಕೋವಿಡ್‌ ಹಿನ್ನೆಲೆಯಲ್ಲಿ ಎರಡು ವರ್ಷಗಳ ಹಿಂದೆ ಊರಿಗೆ ಮರಳಿದ್ದು, ಅವರಲ್ಲಿ ಸುಮಾರು 40-50 ಲ.ರೂ.  ಇತ್ತು. ಇವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ  ಪುತ್ರನಿದ್ದಾನೆ. ಹಿರಿಯ ಪುತ್ರಿ ಸ್ನೇಹಾ ಹೊಟೇಲ್‌ ಮ್ಯಾನೇಜ್‌ಮೆಂಟ್‌ ಮಾಡಿಕೊಂಡು ಪುಣೆಯಲ್ಲಿ ಉದ್ಯೋಗದಲ್ಲಿದ್ದಾರೆ. ಇನ್ನೊಬ್ಬ  ಪುತ್ರಿ 12ನೇ ತರಗತಿ ಹಾಗೂ ಪುತ್ರ 8ನೇ ತರಗತಿ ಓದುತ್ತಿದ್ದಾರೆ.  ಪತ್ನಿ ರೋಹಿಣಿಗೆ ಅನೈತಿಕ ಸಂಬಂಧ ಇತ್ತು. ಜತೆಗೆ ಮಗಳೂ ಪುಣೆಯಲ್ಲಿ ಓರ್ವನನ್ನು ಪ್ರೀತಿಸುತ್ತಿದ್ದಳು. ಪತ್ನಿ ಹಾಗೂ ಪುತ್ರಿಯ ಅಕ್ರಮ ಸಂಬಂಧವನ್ನು  ಸುಧೀರ್‌ ಆಕ್ಷೇಪಿಸಿದ್ದ.  ಹೀಗಾಗಿ  ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು.

Advertisement

ಪತ್ನಿ ಮತ್ತು ಪುತ್ರಿಯ ವರ್ತನೆಯಿಂದ ಬೇಸತ್ತು ತನ್ನಲ್ಲಿದ್ದ ಹಣವನ್ನು ಸು ಧೀರ್‌  ಸಂಬಂಧಿ ಕರ ಹಾಗೂ ಆಪ್ತರಿಗೆ ಬಡ್ಡಿಗೆ ಕೊಟ್ಟಿದ್ದರು. ಇದು  ರೋಹಿಣಿ ಹಾಗೂ ಪುತ್ರಿ ಸ್ನೇಹಾಳನ್ನು ಮತ್ತಷ್ಟು  ಕೆರಳಿಸಿತ್ತು.   ಎಲ್ಲ ವಿಷಯವನ್ನು ಸ್ನೇಹಾ ತನ್ನ ಪ್ರಿಯಕರ ಆಕಾಶನಿಗೆ  ತಿಳಿಸಿದ್ದಾಳೆ. ಕೊಲೆ ಮಾಡಿದ ಬಳಿಕ  ಅಕಾಶನಿಗೆ 5 ಲಕ್ಷ ರೂ. ನೀಡುವ ಬಗ್ಗೆಯೂ ಮಾತುಕತೆ ಆಗಿತ್ತು ಎಂದು ತಿಳಿದು ಬಂದಿದೆ. ಯೋಜಿತ ರೀತಿಯಲ್ಲಿ ಕೊಲೆ ಮಾಡಿ ಸುಮ್ಮನಿದ್ದರು.

ಮಗನಿಗೆ ನಿದ್ದೆ ಮಾತ್ರೆ  ಕೊಟ್ಟಿದ್ದ ತಾಯಿ :

ಸುಧೀರ್‌ನ ಮನೆಗೆ ಆಕಾಶ ಸೆ.16ರಂದು ರಾತ್ರಿ ಬಂದಿದ್ದ. ಮನೆಯಲ್ಲಿ ರೋಹಿಣಿ ಹಾಗೂ ಮಗ ಇದ್ದರು. ಕೊಲೆ ಮಾಡುವ ವಿಷಯ ಮಗನಿಗೆ ಗೊತ್ತಾಗಬಾರದೆಂದು ನಿದ್ದೆ ಬರುವ ಮಾತ್ರೆ ಕೊಟ್ಟಿದ್ದಳು. ಕೊಲೆ ಮಾಡುವ ಜೋರಾದ ಶಬ್ದ ಬರುತ್ತಿದ್ದಂತೆ ನಾಯಿ ಮೇಲೆ ಬುಟ್ಟಿ ಮುಚ್ಚಿ ವಿಷಯಾಂತರ ಮಾಡುವ ನಾಟಕವಾಡಿದ್ದರು ಎಂದು ತಿಳಿದು ಬಂದಿದೆ.

ಸಾಕ್ಷ್ಯ ನಾಶಕ್ಕೆ  ಸಿನೆಮಾ ನೋಡಿದರು :

“ದೃಶ್ಯಂ’ ಸಿನೆಮಾದಲ್ಲಿ  ಸಾಕ್ಷ್ಯ  ನಾಶ ಮಾಡಿದಂತೆಯೇ  ಸುಧೀರ್‌ ಪ್ರಕರಣದಲ್ಲೂ ಮಾಡಲಾಗಿದೆ. ಆರೋಪಿಗಳು ಕೊಲೆಗೆ ಮೊದಲು ಈ ಸಿನೆಮಾ ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next