Advertisement

ಮೋದಿ ವಿರುದ್ಧ ರಾಹುಲ್‌ ಅಮೆರಿಕದ ಆನ್‌ಲೈನ್‌ ಬ್ರಹ್ಮಾಸ್ತ್ರ

06:00 AM Oct 10, 2017 | Team Udayavani |

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆ ಕೇವಲ ಮಾತಿನ ಸಮರವಷ್ಟೇ ಆಗಿರುವುದಿಲ್ಲ. ದತ್ತಾಂಶ ಯುದ್ಧಕ್ಕೂ ಕಾರಣವಾಗಲಿದೆ.  ಆಗಲಿದೆ.

Advertisement

ಹೌದು, 2014ರ ಚುನಾವಣೆಯಲ್ಲಿ ಸಾಮಾಜಿಕ ಅಂತರ್ಜಾಲ ತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ಗಳನ್ನು ಬಳಸಿಕೊಂಡು ಜನರನ್ನು ಮೋಡಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಲು ಈ ಬಾರಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅಂತಾರಾಷ್ಟ್ರೀಯ ಸಂಸ್ಥೆ ಕೇಂಬ್ರಿಡ್ಜ್ ಅನಾಲಿಟಿಕಾ ಮೊರೆ ಹೋಗಲಿದ್ದಾರೆಂದು ಹೇಳಲಾಗಿದೆ. ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ಗೆ ಚುನಾವಣಾ ರಣನೀತಿ ಸಿದ್ಧಪಡಿಸಿದ್ದೂ ಇದೇ ಕಂಪನಿ. ಅಷ್ಟೇ ಅಲ್ಲ. ಬ್ರಿಟನ್‌ನಲ್ಲಿ ಬ್ರೆಕ್ಸಿಟ್‌ ಕ್ಯಾಂಪೇನನ್ನೂ ಇದೇ ಸಂಸ್ಥೆ ನಿರ್ವಹಿಸಿತ್ತು. ಹೀಗಾಗಿ ಕೇಂಬ್ರಿಜ್‌ ಅನಾಲಿಟಿಕಾ ಸಂಸ್ಥೆ ರಾಹುಲ್‌ ಭವಿಷ್ಯವನ್ನೂ ಬದಲಿಸಬಹುದು ಎಂಬ ನಿರೀಕ್ಷೆ ಮೂಡಿದೆ.

ಮೂಲಗಳ ಪ್ರಕಾರ ಕೇಂಬ್ರಿಡ್ಜ್ ಅನಾಲಿಟಿಕಾ ಸಿಇಒ ಅಲೆಕ್ಸಾಂಡರ್‌ ನಿಕ್ಸ್‌ ಕಾಂಗ್ರೆಸ್‌ ಮುಖಂಡರ ಜತೆ ಮಾತುಕತೆ ನಡೆಸಿದ್ದು, ಚುನಾವಣಾ ರಣತಂತ್ರದ ಬಗ್ಗೆ ವಿವರಣೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಮೋದಿ ಅಂತರ್ಜಾಲವನ್ನು ಬಳಸಿಕೊಂಡು ಜಯಿಸಿದ ನಂತರದಲ್ಲಿ, ಇತರ ಪಕ್ಷಗಳೂ ಆನ್‌ಲೈನ್‌ ಕ್ಯಾಂಪೇನ್‌ ನಡೆಸಿವೆ. ಜತೆಗೆ, ಪ್ರಚಾರಕ್ಕೆ ಸಾಮಾಜಿಕ ಜಾಲತಾಣವನ್ನು ಪ್ರಮುಖವಾಗಿ ಬಳಸಿಕೊಳ್ಳುತ್ತಿವೆ. ಈ ಪ್ರಕ್ರಿಯೆ ಲೋಕಸಭೆ ಚುನಾವಣೆಯಲ್ಲಿ ಮಹತ್ವದ ತಿರುವು ಪಡೆದುಕೊಳ್ಳುವ ಸಾಧ್ಯತೆಯಿದೆ.

ಹೇಗೆ ನಡೆಯುತ್ತದೆ ವಿಶ್ಲೇಷಣೆ?: ಸಾಮಾಜಿಕ ಜಾಲತಾಣ ಹಾಗೂ ಇತರ ಅಂತರ್ಜಾಲ ತಾಣಗಳಲ್ಲಿ ಜನ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಈ ಸಂಸ್ಥೆ ವಿಶ್ಲೇಷಿಸುತ್ತದೆ. ಸರ್ಚ್‌ ಇಂಜಿನ್‌ಗಳು, ಇಮೇಲ್‌ ಮತ್ತು ಶಾಪಿಂಗ್‌ ವೆಬ್‌ಸೈಟ್‌ಗಳ ದತ್ತಾಂಶ ಪಡೆದು, ಅದರಲ್ಲಿ ಅಭಿಪ್ರಾಯ ವಿಶ್ಲೇಷಿಸಿ, ಒಂದು ಕ್ಷೇತ್ರದಲ್ಲಿನ ಜನರ ಅಗತ್ಯ ಹಾಗೂ ನಿರೀಕ್ಷೆಗಳನ್ನು ಒಗ್ಗೂಡಿಸುತ್ತದೆ. ಅದಕ್ಕೆ ತಕ್ಕಂತೆ ಚುನಾವಣಾ ಅಭ್ಯರ್ಥಿಗೆ ಅಜೆಂಡಾ ರೂಪಿಸಲು ನೆರವಾಗುತ್ತದೆ.

ಭಾರತೀಯರ ಮನವೊಲಿಸಲು ಸೂಚಿಸಿತ್ತು: ಹೊರಗುತ್ತಿಗೆ ವಿಚಾರದಲ್ಲಿ ಟ್ರಂಪ್‌ ಕಠಿಣ ನೀತಿ ಅನುಸರಿಸಿದ್ದರೂ, ಹಿಂದೂಗಳನ್ನು ಓಲೈಸಿದ್ದು ಹಲವು ಕ್ಷೇತ್ರಗಳಲ್ಲಿ ಗೆಲುವಿಗೆ ಕಾರಣವಾಗಿದೆ ಎನ್ನಲಾಗಿದೆ. ಚುನಾವಣೆ ವೇಳೆ ಟ್ರಂಪ್‌ ಹಿಂದಿಯಲ್ಲಿ ಪ್ರಣಾಳಿಕೆ ಮುದ್ರಿಸಿದ್ದರು. ಅಲ್ಲದೆ ಟ್ರಂಪ್‌ ಸೊಸೆ ಲಾರಾ ಯುನಸ್ಕಾ ವರ್ಜೀನಿಯಾದ ಹಿಂದೂ ದೇಗುಲದಲ್ಲಿ ದೀಪಾವಳಿ ಆಚರಣೆಯಲ್ಲಿ 
ಭಾಗಿಯಾಗಿದ್ದರು. ಚುನಾವಣಾ ಪ್ರಚಾರದ ವೇಳೆ “ಭಾರತೀಯರು, ಹಿಂದೂ ಸಮುದಾಯ ಹಾಗೂ ಶ್ವೇತಭವನದ ಜತೆ ಉತ್ತಮ ಸಂಬಂಧ ನಿರ್ಮಾಣವಾಗಲಿದೆ’ ಎಂದು ಟ್ರಂಪ್‌ ಹೇಳಿದ್ದರು. ಇವೆಲ್ಲವೂ ಟ್ರಂಪ್‌ಗೆ ವರವಾಗಿ ಪರಿಣಮಿಸಿತ್ತು. ಟ್ರಂಪ್‌ ಕ್ಯಾಂಪೇನ್‌ಗಾಗಿ ಅನಾಲಿಟಿಕಾ ಸಂಸ್ಥೆಯಲ್ಲಿ ಜೆಡಿಯು ಮುಖಂಡ ಕೆ.ಸಿ ತ್ಯಾಗಿ ಪುತ್ರ ಅಮರೀಶ್‌ ತ್ಯಾಗಿ ಕೆಲಸ ಮಾಡಿದ್ದರು.

Advertisement

ಪ್ರಶಾಂತ್‌ ಕಿಶೋರ್‌ ಕೇಳ್ಳೋರೇ ಇಲ್ಲ!:
2014ರ ಲೋಕಸಭೆ ಚುನಾವಣೆಯಲ್ಲಿ ರಣತಂತ್ರ ಹೆಣೆದಿದ್ದ ಪ್ರಶಾಂತ್‌ ಕಿಶೋರ್‌, ಎಲ್ಲ ಪಕ್ಷಗಳ ಬೇಡಿಕೆಯ ಕ್ಯಾಂಪೇನರ್‌ ಆಗಿದ್ದರು. ಆದರೆ ಉತ್ತರ ಪ್ರದೇಶ, ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಯುಗೆ ರಣತಂತ್ರ ರೂಪಿಸಿದ್ದರಾದರೂ, ನಿರೀಕ್ಷಿಸಿದ ಯಶಸ್ಸು ಲಭಿಸಿರಲಿಲ್ಲ. ಹೀಗಾಗಿ ಈಗ ಅವರ ಬದಲಿಗೆ ಕಾಂಗ್ರೆಸ್‌ ಅಂತಾರಾಷ್ಟ್ರೀಯ ಸಂಸ್ಥೆಯ ಮೊರೆ ಹೋಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next