ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಲಾಂಛನದಲ್ಲಿ ಕಮಲ ಬಳಕೆ ಮಾಡಿರುವ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರ ನಡೆದಿದೆ.
ಸರ್ಕಾರದ ನಿರ್ಧಾರ ಟೀಕಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “70 ವರ್ಷಗಳ ಹಿಂದೆ, ಕಾಂಗ್ರೆಸ್ ಧ್ವಜವನ್ನು ರಾಷ್ಟ್ರ ಧ್ವಜವಾಗಿಸುವ ಪ್ರಸ್ತಾಪವನ್ನು ನೆಹರು ತಿರಸ್ಕರಿಸಿದ್ದರು. ಈಗ ಬಿಜೆಪಿಯ ಚುನಾವಣಾ ಚಿಹ್ನೆಯೇ ಭಾರತದ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಲಾಂಛನವಾಗಿದೆ.
ಮೋದಿ ಮತ್ತು ಬಿಜೆಪಿ ನಾಚಿಕೆಯಿಲ್ಲದೇ ತಮ್ಮ ಬಗ್ಗೆ ತಾವು ಪ್ರಚಾರ ಮಾಡಿಕೊಳ್ಳಲು ಇರುವ ಯಾವುದೇ ಅವಕಾಶವನ್ನು ಬಿಡುವುದಿಲ್ಲ ಎಂಬುದು ಅಘಾತಕಾರಿ ವಿಷಯ,’ ಎಂದು ಟ್ವೀಟ್ ಮಾಡಿದ್ದಾರೆ.
ಅದಕ್ಕೆ ತಿರುಗೇಟು ನೀಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, “ಕಮಲವು ನಮ್ಮ ರಾಷ್ಟ್ರ ಪುಷ್ಪ. ಕಮಲವು ಶ್ರೀ ಮಹಾಲಕ್ಷ್ಮೀಯ ವಾಹನವೂ ಕೂಡ ಆಗಿದೆ. ನೀವು ನಮ್ಮ ರಾಷ್ಟ್ರ ಪುಷ್ಪವನ್ನು ವಿರೋಧಿಸುವಿರಾ?. ನೀವು ಕಮಲ್‌ನಾಥ್ ಅವರ ಹೆಸರಿನಿಂದ ಕಮಲವನ್ನು ತೆಗೆದು ಹಾಕುವಿರಾ? ನಿಮಗೆ ಅಲ್ಲಿ ಯಾವುದೇ ಕಾರ್ಯಸೂಚಿ ಕಾಣುವುದಿಲ್ಲ ಎಂದು ಭಾವಿಸುತ್ತೇವೆ,’ ಎಂದು ಟ್ವೀಟ್ ಮಾಡಿದ್ದಾರೆ.
ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆಯ ಅಂಗವಾಗಿ ಮುಂದಿನ ತಿಂಗಳಿಂದ ಒಂದು ವರ್ಷದ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.