Advertisement
ನಿರ್ದೇಶಕರ ಕಥೆಯಲ್ಲಿ ಗಟ್ಟಿತನವಿಲ್ಲ. ಚಿತ್ರಕಥೆಯಲ್ಲಿ ಯಾವುದೇ ಚುರುಕುತನವೂ ಇಲ್ಲ. ಅಷ್ಟೇ ಅಲ್ಲ, ಒಂದೊಳ್ಳೆಯ ಕಥೆ ಕಟ್ಟಿಕೊಡುವ ಸಾಧ್ಯತೆ ಕೈ ಚೆಲ್ಲುವ ಮೂಲಕ ಹುಡುಗರು ರಂಗಾಗುವುದನ್ನು ತಪ್ಪಿಸಿದ್ದಾರೆ. ಸಿನಿಮಾ ಅಂದರೆ, ಕಚಗುಳಿ ಇಡುವಂತಹ ಮಾತುಗಳಿರಬೇಕು ನಿಜ. ಆದರೆ, ಇಲ್ಲಿ ಡಬ್ಬಲ್ ಮೀನಿಂಗ್ ಮಾತುಗಳಿಗೇ ಹೆಚ್ಚು ಆದ್ಯತೆ ಕೊಡಲಾಗಿದೆ. ಅಂತಹ ಮಾತುಗಳು ನಾಯಕರಷ್ಟೇ ಅಲ್ಲ, ನಾಯಕಿಯರಿಂದಲೂ ಹೇಳಿಸಿರುವುದು ನಿರ್ದೇಶಕರ ಸಾಧನೆ ಎನ್ನಬಹುದು.
Related Articles
Advertisement
ವಿನಾಕಾರಣ ಹಾಸ್ಯ ತುರುಕಿರುವುದು ಸ್ಪಷ್ಟವಾಗಿ ಕಾಣುತ್ತದೆ. ಇನ್ನು, ಅದೆಷ್ಟೋ ಚಿತ್ರಗಳಲ್ಲಿ ಬಂದುಹೋಗಿರುವ ದೃಶ್ಯಗಳು ಇಲ್ಲಿ ನೆನಪಾದರೆ ಅಚ್ಚರಿಯೂ ಇಲ್ಲ. ಒಂದು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಎಷ್ಟು ಮುಖ್ಯವೋ, ಅದಕ್ಕೆ ಪೂರಕವಾಗಿರುವಂತಹ ಹಿನ್ನೆಲೆ ಸಂಗೀತವೂ ಅಷ್ಟೇ ಮುಖ್ಯವಾಗುತ್ತೆ. ಆದರೆ, ಇಲ್ಲಿ ಅದನ್ನು ನಿರೀಕ್ಷಿಸುವಂತಿಲ್ಲ. ಕಥೆ ಬಗ್ಗೆ ಹೇಳುವುದಾದರೆ, ಎಂಜಿನಿಯರಿಂಗ್ ಓದಿರುವ ಮೂವರು ಹುಡುಗರು ಲೈಫಲ್ಲಿ ಎಂಜಾಯ್ ಮಾಡಿದ ಬಳಿಕ ಒಂದೊಳ್ಳೆಯ ಕೆಲಸ ಹಿಡಿಯಬೇಕು ಅನ್ನೋ ಜಾಯಮಾನದವರು.
ಅವರ ಲೈಫಲ್ಲಿ ಆಕಸ್ಮಿಕವಾಗಿ ಹುಡುಗಿಯರು ಎಂಟ್ರಿಯಾಗುತ್ತಾರೆ. ಕ್ಷುಲ್ಲಕ ಕಾರಣವೊಂದು ಅವರ ನಡುವೆ ಜಗಳ ಉಂಟಾಗಿ, ಅದು ಪ್ರೀತಿಗೂ ತಿರುಗುತ್ತದೆ. ಆ ಹುಡುಗರು ತಮಗೇ ಗೊತ್ತಿಲ್ಲದಂತೆ ಟೆರರಿಸ್ಟ್‌ಗೆ ಸಹಾಯ ಮಾಡುವ ಮೂಲಕ, ಮುಗ್ಧ ಮಕ್ಕಳ ಸಾವಿಗೆ ಕಾರಣರಾಗುತ್ತಾರೆ. ತಮ್ಮ ತಪ್ಪಿನ ಅರಿವಾಗಿ, ಟೆರರಿಸ್ಟ್ ವಿರುದ್ಧ ಹೋರಾಡಲು ಟೊಂಕ ಕಟ್ಟಿ ನಿಲ್ಲುತ್ತಾರೆ. ಮುಂದೆ ಏನಾಗುತ್ತೆ ಅನ್ನೋದು ಕಥೆ.
ಇಲ್ಲಿ ಹೊಸ ಪ್ರತಿಭೆಗಳೇ ಕಾಣಿಸಿಕೊಂಡಿವೆ. ಸಾಗರ್, ಪ್ರಖ್ಯಾತ್, ಶ್ಯಾಮ್ ಪೊನ್ನಪ್ಪ ಡ್ಯಾನ್ಸ್, ಫೈಟ್‌ನಲ್ಲಿ ಗಮನಸೆಳೆಯುತ್ತಾರೆ. ನಟನೆಯಲ್ಲಿ ಇನ್ನಷ್ಟು ಪಳಗಬೇಕಿದೆ. ಅಮಿತ, ಸಹನಾ ಅವರು ನಿರ್ದೇಶಕರು ಹೇಳಿದ್ದನ್ನಷ್ಟೇ ಮಾಡಿದ್ದಾರೆ. ಶೋಭರಾಜ್, ಗಿರಿ ಮತ್ತಿತರರು ಸಿಕ್ಕ ಪಾತ್ರವನ್ನು ತೂಗಿಸಿಕೊಂಡು ಹೋಗಿದ್ದಾರೆ. ಸೇನಾಪತಿ ಸಂಗೀತದಲ್ಲಿ ಯಾವ ಹಾಡು ನೆನಪಲ್ಲುಳಿಯಲ್ಲ. ಸಿನಿಟೆಕ್ ಸೂರಿ ಛಾಯಾಗ್ರಹಣ ರಂಗಾಗಿದೆ.
ಚಿತ್ರ: ರಂಗಾದ ಹುಡುಗರುನಿರ್ಮಾಣ: ಸುಮಾ ಬಸವರಾಜ್, ಬಸವರಾಜ್ ಟಿ.ಎಂ.
ನಿರ್ದೇಶನ: ತೇಜೇಶ್‌ಕುಮಾರ್
ತಾರಾಗಣ: ಸಾಗರ್, ಪ್ರಖ್ಯಾತ್, ಶ್ಯಾಮ್ ಪೊನ್ನಪ್ಪ, ಅಮಿತ, ಸಹನಾ ಪೊನ್ನಮ್ಮ, ಜ್ಯೋತಿ, ಮನುಹೆಗಡೆ, ಶೋಭರಾಜ್, ಭರತ್, ಗಿರಿ ಇತರರು. * ವಿಜಯ್ ಭರಮಸಾಗರ