ಬೆಂಗಳೂರು: ವಿದ್ಯುತ್ ಕೇಬಲ್‌ಗಳನ್ನು ಕಳವು ಮಾಡುತ್ತಿದ್ದ ಎಂಬ ಆರೋಪದ ಮೇಲೆ ಪಶಿrಮ ಬಂಗಾಳ ಮೂಲದ ಕಾರ್ಮಿಕನೊಬ್ಬನನ್ನು ಕರೆಂಟ್ ಶಾಕ್ ಕೊಟ್ಟು ಚಿತ್ರ ಹಿಂಸೆ ನೀಡಿ ಹತ್ಯೆಗೈದಿರುವ ದುಷ್ಕರ್ಮಿಗಳು, ಮತ್ತಿಬ್ಬರನ್ನೂ ಕೊಲೆಗೈಯಲು ಯತ್ನಿಸಿರುವ ಘಟನೆ ಮಾರತ್‌ಹಳ್ಳಿಯ ಕುಂದಲಹಳ್ಳಿಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಪಶ್ಚಿಮ ಬಂಗಾಳದ ಬಶೀರ್(20)ಕೊಲೆಯಾದವ. ಈತನ ಸ್ನೇಹಿತರಾದ ಹಫೀಸುಲ್ಲಾ(23) ಹಾಗೂ ಅಜೆಲ್(26) ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸುರೆಡ್ಡಿ, ಮಿಥುನ್ ಹಾಗೂ ಮೈದುಲ್ ಎಂಬುವವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಮತ್ತು ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಅವರ ಬಂಧನಕ್ಕಾಗಿ ಹುಡುಕಾಟ ನಡೆಯುತ್ತಿದೆ ಎಂದು ಮಾರತ್‌ಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಮೂವರು ಯುವಕರು ಕೆಲಸ ಹುಡುಕಿಕೊಂಡು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಆರಂಭದಲ್ಲಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು, ನಂತರ ಟ್ಯಾಂಕರ್ ನೀರು ಸರಬರಾಜು ಮಾಡುವ ಬಸುರೆಡ್ಡಿ ಎಂಬಾತನ ಬಳಿ ಕೆಲಸಕ್ಕೆ ಸೇರಿಕೊಂಡಿದ್ದರು. ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಎಂಬ ಕಾರಣಕ್ಕೆ ಮೂವರಿಗೂ ಬಸುರೆಡ್ಡಿ ಕುಂದಲಹಳ್ಳಿಯಲ್ಲಿರುವ ತಮ್ಮ ಜಮೀನಿನಲ್ಲಿ ಗುಡಿಸಲು ನಿರ್ಮಿಸಿದ್ದರು.
ಈ ಮಧ್ಯೆ ನಾಲ್ಕು ದಿನಗಳ ಹಿಂದೆ ಜಮೀನಿನಲ್ಲಿ ವಿದ್ಯುತ್ ಕೇಬಲ್‌ಗಳು ಕಳುವಾಗಿದ್ದವು. ಇದಾದ ಮರು ದಿನ ಮೂವರು ಕೆಲಸಕ್ಕೆ ಬಂದಿರಲಿಲ್ಲ. ಅಲ್ಲದೇ ಕಳುವಾಗಿದ್ದ ದಿನ ಮೂವರು ಬಾರ್‌ವೊಂದರಲ್ಲಿ ಮದ್ಯ ಸೇವಿಸುತ್ತಿದ್ದರು ಎಂಬ ಆ ಮಾಹಿತಿಯನ್ನು ಬಸುರೆಡ್ಡಿ ಪಡೆದುಕೊಂಡಿದ್ದರು. ಅಲ್ಲದೆ, ಕೇಬಲ್ ಕಳವು ಮಾಡಿರುವ ಹಣದಿಂದಲೇ ಮದ್ಯ ಸೇವಿಸಿದ್ದಾರೆ ಎಂದು ಆರೋಪಿ ಬಾರ್‌ನಿಂದಲೇ ಮೂವರನ್ನು ಎಳೆದು ತಂದು ಗೋಡೌನ್‌ವೊಂದರಲ್ಲಿ ಕೂಡಿ ಹಾಕಿದ್ದಾರೆ.
ಬಳಿಕ ಬಸುರೆಡ್ಡಿ ಸೇರಿದಂತೆ ಮೂವರು ಆರೋಪಿಗಳು ಕಾರ್ಮಿಕರಿಗೆ ವಿದ್ಯುತ್ ಶಾಕ್ ನೀಡಿ ಚಿತ್ರ ಹಿಂಸೆ ನೀಡಿದ್ದಾರೆ ಎಂದು ಮಾರತ್‌ಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ. ವಿದ್ಯುತ್ ಶಾಕ್‌ನ ತೀವ್ರತೆಗೆ ಬಶೀರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನುಳಿದ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದರು. ವಿಷಯ ತಿಳಿದ ಸ್ಥಳೀಯರು ಬಸುರೆಡ್ಡಿ ಜಮೀನಿನ ಬಳಿ ಬರುತ್ತಿದ್ದಂತೆ ಎಲ್ಲರೂ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಮಾರತ್‌ಹಳ್ಳಿ ಠಾಣೆಯಲ್ಲಿ ದಾಖಲಾಗಿದೆ.