Advertisement

ಅಭಿವೃದ್ಧಿಗೆ ಆಘಾತ : ಮಾಸಿಕ ಐದು ಸಾವಿರ ಕೋಟಿ ರೂ. ಆದಾಯ ಖೋತಾ

01:39 AM Jun 13, 2021 | Team Udayavani |

ಬೆಂಗಳೂರು: ಕೊರೊನಾ ಎರಡನೇ ಅಲೆಯ ಲಾಕ್‌ಡೌನ್‌ ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದ್ದು, ತಿಂಗಳಿಗೆ 5,000 ಕೋಟಿ ರೂ.ಗಳಂತೆ ಒಟ್ಟು 7,500 ಕೋಟಿ ರೂ. ಆದಾಯ ಖೋತಾ ಆಗಿದೆ. ಇದು ಅಭಿವೃದ್ಧಿ ಯೋಜನೆಗಳ ಮೇಲೆ ಪರಿಣಾಮ ಬೀರಲಿದೆ.

Advertisement

ಲಾಕ್‌ಡೌನ್‌ ಘೋಷಣೆಯಾದ್ದರಿಂದ ಮೇ ಪೂರ್ತಿ ಮತ್ತು ಜೂನ್‌ನಲ್ಲೂ ಎರಡು ವಾರ ವಹಿವಾಟು ಸ್ಥಗಿತಗೊಂಡಿತ್ತು. ಇದರಿಂದ ಅಬಕಾರಿ ವಿನಾ ಬೇರೆ ಯಾವುದೇ ಮೂಲದಿಂದ ಆದಾಯ ಬಂದಿಲ್ಲ.

ವಾಣಿಜ್ಯ ತೆರಿಗೆ ಮೂಲದಿಂದ ಮೇ ತಿಂಗಳಲ್ಲಿ 3 ಸಾವಿರ ಕೋಟಿ ರೂ., ಜೂನ್‌ನಲ್ಲಿ 1,500 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ, ಮೋಟಾರು ವಾಹನ ತೆರಿಗೆ ಮೂಲದಿಂದ ಮೇ, ಜೂನ್‌ ತಿಂಗಳುಗಳಲ್ಲಿ 3 ಸಾವಿರ ಕೋಟಿ ರೂ. ಖೋತಾ ಆಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆಯಾಗದಿದ್ದರೆ ಸಾಲಕ್ಕೆ ಮೊರೆ ಹೋಗಬೇಕಾದ ಅನಿವಾರ್ಯ ಎದುರಾಗಬಹುದು ಎಂದು ಹಣಕಾಸು ಇಲಾಖೆ ಮೂಲಗಳು ತಿಳಿಸಿವೆ.

ಈ ವರ್ಷವೂ ಬಜೆಟ್‌ನಲ್ಲಿ ಘೋಷಿಸಿರುವ ಬೃಹತ್‌ ಮೊತ್ತದ ಯೋಜನೆಗಳ ಅನುಷ್ಠಾನ ಅನುಮಾನ. ಬದ್ಧತಾ ವೆಚ್ಚ ಮತ್ತು ಅಗತ್ಯ ಹಾಗೂ ತುರ್ತು, ನೌಕರರ ಸಂಬಳ, ಪಿಂಚಣಿ, ಅಶಕ್ತ ವರ್ಗಗಳಿಗೆ ಮಾಸಾಶನಕ್ಕೆ ಮಾತ್ರ ಸೀಮಿತವಾಗುವ ಲಕ್ಷಣಗಳು ಕಂಡುಬರುತ್ತಿವೆ.

ಎಪ್ರಿಲ್‌ನಲ್ಲಿ ವಾಣಿಜ್ಯ ತೆರಿಗೆ ವಲಯದಿಂದ ಜಿಎಸ್‌ಟಿ 1,544,73 ಕೋಟಿ ರೂ., ಮಾರಾಟ ತೆರಿಗೆ 1,620.63 ಕೋಟಿ ರೂ., ವೃತ್ತಿ ತೆರಿಗೆ 82.75 ಕೋಟಿ ರೂ., ಐಜಿಎಸ್‌ಟಿ 1,056.24 ಕೋಟಿ ರೂ. ಸೇರಿ 4,304.40 ಕೋಟಿ ರೂ. ಆದಾಯ ಬಂದಿದೆ.

Advertisement

ಮೇ ಪೂರ್ತಿ ಲಾಕ್‌ಡೌನ್‌ ಇದ್ದ ಕಾರಣ 3 ಸಾವಿರ ಕೋಟಿ ರೂ., ಜೂನ್‌ನಲ್ಲಿ 1.5 ಸಾವಿರ ಕೋಟಿ ರೂ. ಆದಾಯ ಖೋತಾ ಆಗುವ ಅಂದಾಜು ಮಾಡಲಾಗಿದೆ.

ಅಬಕಾರಿ ಆದಾಯ ಶ್ರೀರಕ್ಷೆ
ಎಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಅಬಕಾರಿ ಆದಾಯ ಮಾತ್ರ ರಾಜ್ಯದ ಬೊಕ್ಕಸಕ್ಕೆ ಬಂದಿದೆ. ಎಪ್ರಿಲ್‌ನಲ್ಲಿ 2,205.66 ಕೋಟಿ ರೂ., ಮೇಯಲ್ಲಿ 1,445.03 ಕೋಟಿ ರೂ. ಸೇರಿ 3,650.69 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ. 160.10 ಏರಿಕೆಯಾಗಿದೆ. 2020-21ನೇ ಸಾಲಿನಲ್ಲಿ ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ 1,404.08 ಕೋಟಿ ರೂ. ಸಂಗ್ರಹವಾಗಿತ್ತು.
2021-22ನೇ ಸಾಲಿನ ಬಜೆಟ್‌ನಲ್ಲಿ ಜಿಎಸ್‌ಟಿ ನಷ್ಟ ಪರಿಹಾರ ಸಹಿತ ಸ್ವಂತ ತೆರಿಗೆಯಿಂದ 1,24,202 ಕೋಟಿ ರೂ. ನಿರೀಕ್ಷಿಸಲಾಗಿದೆ. ಈ ಪೈಕಿ ಅಬಕಾರಿಯಿಂದ 24,580 ಕೋ.ರೂ. ಮೋಟಾರು ವಾಹನ ತೆರಿಗೆ ಬಾಬಿ¤ನಿಂದ 7,515 ಕೋ.ರೂ., ಮುದ್ರಾಂಕ ಮತ್ತು ನೋಂದಣಿಯಿಂದ 12,655 ಕೋ.ರೂ. ನಿರೀಕ್ಷೆ ಮಾಡಲಾಗಿದೆ.

ತೆರಿಗೆ ಸಂಗ್ರಹದಲ್ಲಿ ಗಣನೀಯ
ಕುಸಿತ ಆಗಿದ್ದು, ರಾಜ್ಯದ ಆರ್ಥಿಕತೆ ಸಂಕಷ್ಟ ದಲ್ಲಿದೆ. ಆದರೂ ಅಭಿವೃದ್ಧಿಗೆ ಧಕ್ಕೆಯಾಗದಂತೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.
-ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

ಆರು ತಿಂಗಳು ಬೇಕು!
ರಾಜ್ಯದಲ್ಲಿ 2 ತಿಂಗಳುಗಳಲ್ಲಿ ಸುಮಾರು 75 ಸಾವಿರ ಕೋಟಿ ರೂ.ನಷ್ಟು ವ್ಯಾಪಾರ ವಹಿವಾಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಲಾಕ್‌ಡೌನ್‌ ಪರಿಣಾಮ ಕೈಗಾರಿಕೆ ವಲಯ, ವಾಣಿಜ್ಯ ಮತ್ತು ವ್ಯಾಪಾರ ವಲಯ ಸ್ತಬ್ಧವಾಗಿರುವುದರಿಂದ ಭಾರೀ ನಷ್ಟ ಆಗಿದೆ. ಸಹಜ ಸ್ಥಿತಿಗೆ ಬರಲು ಇನ್ನು ಆರು ತಿಂಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

– ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next