ಬೆಂಗಳೂರು: ಕೇಂದ್ರ ಕೃಷಿ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉತ್ತರ ಪ್ರದೇಶ ಚುನಾವಣಾ ಸಹ ಉಸ್ತುವಾರಿ ಜವಾಬ್ದಾರಿಯನ್ನೂ ಹೊಂದಿರುವ ಹಿನ್ನೆಲೆಯಲ್ಲಿ ಲಖಿಂಪುರದಲ್ಲಿ ಸಿದ್ಧತಾ ಸಭೆ ನಡೆಸಿದರು.
ಉತ್ತರ ಪ್ರದೇಶ ಸೇರಿದಂತೆ ಪಂಚರಾಜ್ಯಗಳಿಗೆ ಆಯೋಗ ದಿನಾಂಕ ನಿಗದಿ ಮಾಡುವುದಕ್ಕೂ ಕೆಲ ಗಂಟೆಗಳಿಗೆ ಮುನ್ನ ಈ ಸಭೆ ನಡೆಯಿತು. ಚುನಾವಣೆಗೆ ಜಿಲ್ಲಾವಾರು ತಂತ್ರಗಾರಿಕೆ ನಡೆಸುವುದು ಸೇರಿದಂತೆ ಮಹತ್ವ ದ ವಿಚಾರಗಳಿಗೆ ಚಾಲನೆ ನೀಡುವ ಉದ್ದೇಶದಿಂದ ಈ ಸಭೆ ನಡೆಸಲಾಯಿತು.
ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾದ ಕೆಲವೇ ದಿನದಲ್ಲಿ ಶೋಭಾ ಕರಂದ್ಲಾಜೆ ಅವರನ್ನು ಉತ್ತರ ಪ್ರದೇಶ ಚುನಾವಣಾ ಸಹ ಉಸ್ತುವಾರಿಯಾಗಿ ನೇಮಕ ಮಾಡಲಾಗಿತ್ತು. ಕಳೆದ ಕೆಲ ತಿಂಗಳಿಂದ ಶೋಭಾ ಕರಂದ್ಲಾಜೆ ಉತ್ತರ ಪ್ರದೇಶ ದಲ್ಲಿ ಸಂಘಟನಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಮಾರ್ಚ್ 7 ರ ವರೆಗೆ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿಯವರೆಗೂ ಶೋಭಾ ಕರಂದ್ಲಾಜೆ ಉತ್ತರದ ರಾಜಕೀಯದಲ್ಲಿ ಬ್ಯುಸಿಯಾಗಲಿದ್ದಾರೆ. ಉತ್ತರ ಪ್ರದೇಶದಂತ ದೊಡ್ಡ ರಾಜ್ಯದ ಚುನಾವಣಾ ಸಹ ಉಸ್ತುವಾರಿಯಾಗಿ ತಂತ್ರಗಾರಿಕೆ ನಡೆಸುವ ಕರ್ನಾಟಕದ ಮೊದಲ ಮಹಿಳಾ ರಾಜಕಾರಣಿ ಶೋಭಾ ಕರಂದ್ಲಾಜೆ ಆಗಿದ್ದಾರೆ.