Advertisement

“ಸೇನೆ ಸೇರುವವರು ರೈಲಿಗೆ ಬೆಂಕಿ ಹಚ್ಚುವುದಿಲ್ಲ’ : ಶೋಭಾ ಕರಂದ್ಲಾಜೆ 

11:00 PM Jun 20, 2022 | Team Udayavani |

ಉಡುಪಿ: ಸೈನ್ಯಕ್ಕೆ ಸೇರಲು ಇಚ್ಛಿಸುವವರು, ದೇಶದ ಮೇಲೆ ಭಕ್ತಿ ಇರುವವರು ಎಂದೂ ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವುದಿಲ್ಲ ಮತ್ತು ರೈಲಿಗೆ ಬೆಂಕಿಯನ್ನು ಹಚ್ಚುವುದಿಲ್ಲ. ಅನಾವಶ್ಯಕವಾಗಿ ಗೊಂದಲ ನಿರ್ಮಿಸುವ ಮತ್ತು ವಿದೇಶಿ ಶಕ್ತಿಗಳೊಂದಿಗೆ ಸೇರಿಕೊಂಡು ದೇಶಕ್ಕೆ ನಷ್ಟ ಮಾಡುವ ವ್ಯವಸ್ಥಿತ ಷಡ್ಯಂತ್ರವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದರು.

Advertisement

ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ದೇಶದ ವಿವಿಧ ಭಾಗದಲ್ಲಿ ಸೈನಿಕರ ಮೇಲೆ ಕಲ್ಲು ತೂರಾಟ ಆದಾಗ ಹಲವು ಪಕ್ಷಗಳ ನಾಯಕರು ಮೌನವಾಗಿದ್ದರು. ಇಂಥ ಘಟನೆಯನ್ನು ನಾವು ಪದೇಪದೆ ನೊಡುತ್ತಿದ್ದೇವೆ. ಶಾಲಾ ಶಿಕ್ಷಣದಿಂದಲೇ ಯುವ ಪೀಳಿಗೆಗೆ ದೇಶಭಕ್ತಿ ತುಂಬುವ ಕಾರ್ಯ ವಿದೇಶಗಳಲ್ಲಿ ಆಗುತ್ತಿದೆ. ಭಾರತದ ಯುವಕರಿಗೆ ಅಗ್ನಿವೀರ್‌ ಯೋಜನೆ ಮೂಲಕ ನಾಲ್ಕು ವರ್ಷಗಳ ತರಬೇತಿ ಸಿಗಲಿದೆ. ಇದಾದ ಅನಂತರದಲ್ಲಿ ಆಯುವಕರು ಖಂಡಿತವಾಗಿಯೂ ದೇಶಕ್ಕಾಗಿ ಒಳ್ಳೆಯ ಕೆಲಸ ಮಾಡುವ ಜತೆಗೆ ಉತ್ತಮ ಸಮಾಜವನ್ನು ನಿರ್ಮಿಸಲಿದ್ದಾರೆ. ಆದರೆ ಉತ್ತಮ ಸಮಾಜ ನಿರ್ಮಾಣ ವಿಪಕ್ಷಗಳಿಗೆ ಬೇಕಾಗಿಲ್ಲ. ಸಮಾಜ ಕೆಟ್ಟ ಹಾದಿಯಲ್ಲೇ ಸಾಗಬೇಕು ಮತ್ತು ಓಟ್‌ ಬ್ಯಾಂಕ್‌ ರಾಜಕಾರಣ ಮಾತ್ರ ಅವರಿಗೆ ಬೇಕಿರುವುದು. ಕೇಂದ್ರ ಸರಕಾರವು ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲದ ಸದ್ಬಳಕೆ ಮೂಲಕ ದೇಶವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಅಗ್ನಿವೀರ್‌ ಯೋಜನೆ ರೂಪಿಸಿದೆ. ಇಲ್ಲಿ ಯಾರು ಕೂಡ ಯಾರ ಮೇಲೂ ಒತ್ತಡ ಹೇರುವುದಿಲ್ಲ. ಸ್ವ ಇಚ್ಛೆಯಿಂದ ಕುಟುಂಬದವರ ಅನುಮತಿ ಪಡೆದೇ ಅಗ್ನಿವೀರರಾಗಲಿದ್ದಾರೆ. ಈ ಮೂಲಕ ದೇಶದಲ್ಲಿ ಯುವ ಪಡೆ ನಿರ್ಮಾಣವಾಗಲಿದೆ ಎಂದರು.

75 ಸಚಿವರು, 75 ಕಡೆ : 

ಅಂತಾರಾಷ್ಟ್ರೀಯ ಯೋಗದ ದಿನವನ್ನು ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಜತೆಗೆ ವಿಶಿಷ್ಟವಾಗಿ ಆಚರಿಸುವ ನಿಟ್ಟಿನಲ್ಲಿ ಕೇಂದ್ರದ 75 ಸಚಿವರು ದೇಶದ 75 ಐತಿಹಾಸ ಸ್ಥಳಗಳಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಯೋಗದ ಮಹತ್ವವನ್ನು ಪ್ರಪಂಚಕ್ಕೆ ತಿಳಿಸಿ ಹೇಳಲಾಗುತ್ತಿದೆ ಎಂದರು.

ಅನುದಾನ ಸದ್ಬಳಕೆ ಆಗಬೇಕು : 

Advertisement

ಪ್ರತೀ ಜಿಲ್ಲೆಯಲ್ಲೂ ಧಾನ್ಯಗಳ ಪರೀಕ್ಷೆಗೆ ಲ್ಯಾಬ್‌, ಕೋಲ್ಡ್‌ ಸ್ಟೋರೇಜ್‌, ಮಣ್ಣು ಪರೀಕ್ಷೆ ಕೇಂದ್ರ ಇತ್ಯಾದಿ ನಿರ್ಮಿಸಲು ಕೇಂದ್ರ ಸರಕಾರದ ವಿವಿಧ ಯೋಜನೆಯಡಿ ಅನು ದಾನ ಒದಗಿಸಲಾಗುತ್ತದೆ. ಆದರೆ ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನಿರೀಕ್ಷಿತ ಮಟ್ಟದಲ್ಲಿ ಪ್ರಸ್ತಾವನೆ ಬಂದಿಲ್ಲ. ಶೀಘ್ರ ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.

ಪ್ರಸ್ತಾವನೆಗೆ ಸೂಚನೆ :

ಸಾರ್ವಜನಿಕ ಪಡಿತರ ವ್ಯವಸ್ಥೆಯಡಿ ಸ್ಥಳೀಯ ಕುಚ್ಚಲು ಭತ್ತ/ಅಕ್ಕಿ ಖರೀದಿ ಹಾಗೂ ವಿತರಣೆಗೆ ಒಂದು ವರ್ಷದ ಮಟ್ಟಿಗೆ ಕೇಂದ್ರ ಸರಕಾರ ಅನುಮತಿ ನೀಡಿತ್ತು. ಕಳೆದ ವರ್ಷ ಅನುಮತಿ ಸಿಗುವ ವೇಳೆಗೆ ಶೇ. 90ರಷ್ಟು ರೈತರು ಭತ್ತ ಮಾರಾಟ ಮಾಡಿದ್ದರು. ಈ ಬಾರಿ ಆದಷ್ಟು ಬೇಗ ಅನುಮತಿ ಪಡೆಯುವ ನಿಟ್ಟಿನಲ್ಲಿ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದೇವೆ. ಉಭಯ ಜಿಲ್ಲೆಗಳಿಂದ ಪ್ರಸ್ತಾವನೆ ರಾಜ್ಯಕ್ಕೆ ಸಲ್ಲಿಕೆಯಾಗಿ, ಅಲ್ಲಿಂದ ಕೇಂದ್ರಕ್ಕೆ ಬರಲಿದೆ. ಕೇಂದ್ರದಿಂದ ಅನುಮತಿ ಸಿಕ್ಕ ಅನಂತರದಲ್ಲಿ ಸ್ಥಳೀಯ ಭತ್ತದ ಜತೆಗೆ ಅಗತ್ಯಬಿದ್ದರೆ ತೀರ್ಥಹಳ್ಳಿ, ಮೈಸೂರು ಭಾಗದಲ್ಲಿ ಬೆಳೆಯುವ ಕರಾವಳಿಗರಿಗೆ ಸೂಕ್ತವೆನಿಸುವ ಕುಚ್ಚಲು ಅಕ್ಕಿ ಖರೀದಿಸಿ, ವಿತರಿಸಲು ವ್ಯವಸ್ಥೆ ಮಾಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next