ಕಾಣಿಯೂರು : ದೇಶದ ಶೇ 80ರಷ್ಟು ರೈತರು ಅತ್ಯಂತ ಸಣ್ಣ ಹಿಡುವಳಿಗಳನ್ನು ಹೊಂದಿದ್ದು, ಕೃಷಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಪುನರುತ್ಥಾನಕ್ಕೆ ಪ್ರಧಾನಿ ಮೋದಿ ಸಂಕಲ್ಪ ಮಾಡಿದ್ದು, ಸಣ್ಣ ರೈತರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಸೆ 20ರಂದು ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಹುಟ್ಟೂರ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬೆಳೆಕಾಳು ಹಾಗೂ ಖಾದ್ಯ ತೈಲ ಉತ್ಪಾದನೆಯಲ್ಲಿ ದೇಶ ಸ್ವಾವಲಂಬಿಯಾಗಿಲ್ಲ. ಶೇ 70ರಷ್ಟು ಖಾದ್ಯತೈಲ ಆಮದಾಗುತ್ತಿದೆ. ಇದಕ್ಕೆ ದೊಡ್ಡ ಪ್ರಮಾಣದ ವಿದೇಶಿ ವಿನಿಮಯ ಖರ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು, ಖಾದ್ಯ ತೈಲ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ. ಒಣ ಭೂಮಿಯಲ್ಲೂ ಎಣ್ಣೆಕಾಳು ಬೆಳೆಯಲು ಸಂಶೋಧನೆ ನಡೆಯುತ್ತಿದೆ ಎಂದರು.
ಇದನ್ನೂ ಓದಿ :ಇಸ್ಲಾಂಗೆ ವಿರುದ್ಧವೆಂದು ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ಅಫ್ಘಾನ್ ನ ತಾಲಿಬಾನ್ ಸರ್ಕಾರ
ದೇಶ ಕಳೆದ ಒಂದು ವರ್ಷದಲ್ಲಿ ದಾಖಲೆ ಪ್ರಮಾಣದ ಆಹಾರ ಪದಾರ್ಥಗಳನ್ನು ಉತ್ಪಾದಿಸಿದೆ. 305 ಮಿಲಿಯನ್ ಮೆಟ್ರಿಕ್ ಟನ್ ಬೇಳೆಕಾಳು ಹಾಗೂ ದವಸ ಧಾನ್ಯ, 326 ಮಿಲಿಯನ್ ಮೆಟ್ರಿಕ್ ಟನ್ ಹಣ್ಣು ಹಾಗೂ ತರಕಾರಿ ಬೆಳೆಯಲಾಗಿದ್ದು, ದಾಖಲೆ ಪ್ರಮಾಣದಲ್ಲಿ ರಫ್ತು ನಡೆದಿದೆ. ಅತಿ ಹೆಚ್ಚು ರಫ್ತು ಮಾಡುವ ವಿಶ್ವದ ಮೊದಲ 10 ರಾಷ್ಟ್ರಗಳಲ್ಲಿ ಭಾರತ 9ನೇ ಸ್ಥಾನ ಪಡೆದಿದೆ , ತೆಂಗು ಉತ್ಪನ್ನಗಳ ರಫ್ತಿನ ಮೇಲಿದ್ದ ನಿರ್ಬಂಧ ತೆಗೆದುಹಾಕಲಾಗಿದ್ದು, ತೆಂಗು ಬೆಳೆಗಾರರಿಗೆ ಲಾಭ ಮಾಡಿಕೊಡಲಾಗಿದೆ ಎಂದರು.