ಬೆಂಗಳೂರು : ಕೋವಿಡ್ ಪರಿಸ್ಥಿತಿ ಕೈಮೀರಿ ಹೋಗುವ ಮೊದಲೇ ಅಗತ್ಯ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಸದೆ ಶೋಭಾ ಕರಂದ್ಲಾಜೆಯವರು ಪತ್ರ ಬರೆದು 13 ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ದಿನಕ್ಕೆ 29 ಸಾವಿರ ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಮುಂದಿನ 15 ದಿನಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಎಲ್ಲ ಸಾಧ್ಯತೆಗಳಿವೆ. ಜನರು ಆತಂಕಕ್ಕೆ ಒಳಗಾಗಿದ್ದಾರೆ. ಈಗಿರುವ ಹೆಲ್ಪ್ ಲೈನ್‌ಗಳಲ್ಲಿ ಸಹಾಯ ಪಡೆಯಲು ಗಂಟೆಗಟ್ಟಲೆ ಕಾಯಬೇಕು ಎಂದು ಜನರು ದೂರುತ್ತಿದ್ದಾರೆ. ಹೀಗಾಗಿ, ಕೆಲವೊಂದು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಹೆಲ್ಪ್ ಲೈನ್ ಗಳ ಸಂಖ್ಯೆಯನ್ನು 100ಕ್ಕೆ ಏರಿಸಿ ದಿನದ 24 ಗಂಟೆಯೂ ಸೇವೆ ಸಿಗುವಂತೆ ಮಾಡಬೇಕು. ಬೆಂಗಳೂರು ಸಹಿತವಾಗಿ ರಾಜ್ಯಾ ದ್ಯಂತ ತಲಾ 1 ಸಾವಿರ ವೆಂಟಿಲೇಟರ್ ಹೆಚ್ಚಿಸಲು ಕ್ರಮ ವಹಿಸಬೇಕು. ಆರೋಗ್ಯ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಘೋಷಿಸಿ, ಖಾಸಗಿ ಆಸ್ಪತ್ರೆಗಳಿಂದ ಶೇ. 50ರಷ್ಟು ಬೆಡ್ ಪಡೆಯಬೇಕು ಹಾಗೂ ಇದಕ್ಕಾಗಿ ಕಾರ್ಯಪಡೆ ರಚಿಸಬೇಕು. ವೆಂಟಿಲೇಟರ್ ಉತ್ಪಾದಿಸುವ ರಾಜ್ಯದ ಉದ್ಯಮಿಗಳಿಗೆ ಮುಂಗಡ ಹಣ ನೀಡಿ ಪ್ರೋತ್ಸಾಹಿಸಬೇಕು. ರೆಮಿಡಿಸಿವಿರ್ ಹಾಗೂ ಆಕ್ಸಿಜನ್ ಲಭ್ಯತೆ ಬಗ್ಗೆ ಆಗಿಂದಾಗ್ಗೆ ಜನರಿಗೆ ಮಾಹಿತಿ ನೀಡಬೇಕು. ಪ್ರತಿ ಆಸ್ಪತ್ರೆಯಲ್ಲೂ ಇದಕ್ಕಾಗಿ ಪ್ರತ್ಯೇಕ ಹೆಲ್ಪ್ಡೆಸ್ಕ್ ನಿರ್ಮಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ :ರೆಮಿಡಿಸಿವಿರ್ ಮರುಹಂಚಿಕೆ : ರಾಜ್ಯಕ್ಕೆ 1.22 ಲಕ್ಷ ವಯಲ್
ತಾಲೂಕು ಹಾಗೂ ನಗರ ವ್ಯಾಪ್ತಿಯಲ್ಲಿ ಶಾಲಾ ಕಾಲೇಜು, ಹಾಸ್ಟೆಲ್, ಹೊಟೇಲ್‌ಗಳಲ್ಲಿ ಬೆಡ್ ಹಾಗೂ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು. ಸರಕಾರದಿಂದ ಉಚಿತ ಆಂಬುಲೆನ್ಸ್ ಸೇವೆ ಒದಗಿಸಬೇಕು. ರೋಗಿಯ ಕಾಯಿಲೆಯ ತೀವ್ರತ ಆದಾರದಲ್ಲಿ ತತ್ಸಮಾನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಕ್ರಮ ವಹಿಸಬೇಕು. ರೋಗಿಗಳು ಆಸ್ಪತ್ರೆಯಿಂದ ಹೊರಗೆ ಸುತ್ತಾಡುವುದನ್ನು ತಡೆಯಲು ಕ್ರಮ ತೆಗೆದುಕೊಳ್ಳಬೇಕು. ರಕ್ತನಿಧಿ ಕೇಂದ್ರಗಳಲ್ಲಿ ಪ್ಲಾಸ್ಮಾ ಸಂಗ್ರಹಿಸಲು ಅಗತ್ಯ ಕ್ರಮ ವಹಿಸಬೇಕು ಮತ್ತು ಪ್ಲಾಸ್ಮಾ ದಾನಕ್ಕೆ ಅಗತ್ಯ ಪ್ರೋತ್ಸಾಹ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.