“ದೇವದಾಸಿ’ ಪದ್ಧತಿ, ನಮ್ಮ ಸಮಾಜಕ್ಕೆ ಅಂಟಿಕೊಂಡ ಕಳಂಕ. ಹೆಣ್ಣಿನ ಶೋಷಣೆ ಇಲ್ಲಿ ನಿರಂತರ. ಇದಕ್ಕೆ ತುತ್ತಾದ ಮಹಿಳೆಯರು ಸಾವಿರಾರು. “ನಮ್ಮ ಬದುಕು ಮುಗಿಯಿತು’ ಎಂದುಕೊಂಡ ಎಷ್ಟೋ ದೇವದಾಸಿಯರ ನೆರವಿಗೆ ನಿಂತವರು, ಬೆಳಗಾವಿ ಜಿಲ್ಲೆ ಮೂಡಲಗಿಯ ಶೋಭಾ ಗಸ್ತಿ. ದೇವದಾಸಿಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ ಅವರು ತಮ್ಮ ಬಾಳ ಕಥೆಯನ್ನು ಹೇಳಿಕೊಂಡಿದ್ದಾರೆ…
ನಪಿರುವಂಗ ಆಗ ನನಗ 12 ವರ್ಷ, 6ನೇ ಕ್ಲಾಸ್ ಕಲಿಲಿಕತ್ತಿದೆ. ಆಗ ನನಗ ದೇವದಾಸಿ ಅಂತಹೇಳಿ ಬಿಟ್ರಿಟ್ರಾ. ನಮ್ಮ ಮನ್ಯಾಗ ದೇವದಾಸಿ ಆದಕಿ ನಾನ ಮೊದಲೇನಲ್ಲ. ನಮ್ಮ ಅಜ್ಜಿ, ಆಮ್ಯಾಲ ನಮ್ಮಕ್ಕ ದೇವದಾಸಿ ಆಗಿದ್ರು. “ಯಲ್ಲಮ್ಮ ಬಂದು ಜೋಗಪ್ಪನಾಗಿ ಕುಣಿದಂಗ’ ನಮ್ಮವ್ವಗ ಕನಸು ಬಿದ್ದಿತಂತ. ಇದೇನಂತ ನಮ್ಮವ್ವ ಸವದತ್ತಿ ಯಲ್ಲಮ್ಮಗ ಹೋಗಿ ಕೇಳಿದಾಗ, “ನಿನ್ನ ಸಣ್ಣ ಮಗಳಿಗೆ ಮುತ್ತು ಕಟ್ಟಬೇಕು’ ಅಂತ ದೇವಿ ಹೇಳಿದಂಗಾತಂತ. ಹಂಗಾಗಿ ನಮ್ಮವ್ವ ಮನಿಗೆ ಕಂಟಕ ಆಗಬಾರದೂ ಅಂತ ದೇವರಿಗೆ ವಚನ ಕೊಟ್ಟಳು. ನಾನು ದೇವದಾಸಿ ಆದೆ…! ಅಸಲಿಗೆ ದೇವದಾಸಿ ಅಂದ್ರೇನು ಅಂತ ನನಗ ಗೊತ್ತ ಇರಲಿಲ್ಲ. ನನ್ನನ್ನ ಕಾರ್ ಗಾಡ್ಯಾಗ ಸವದತ್ತಿಗೆ ಕರಕೊಂಡು ಹೋದ್ರು, ರೇಶ್ಮಿ ಸೀರಿ ಉಡಸಿದ್ರು, ತಲಿಯೊಳಗ ಹೂವ, ಕೊರಳಾಗ ಕೆಂಪು, ಬಿಳಿ ಮುತ್ತು, ಕಾಲುಂಗುರ, ಗುಡದಾಳಿ, ತಾಳಿ ಹಾಕಿ ಅಕ್ಕಿ ಕಾಳು ಉಗ್ಗಿದ್ರು, ಹೂ ಹಾಕಿದ್ರು, ಚೌಡಕಿ ಬಾರಸಿದ್ರು, ಎಲ್ಲಾರೂ ನನ್ನ ನೋಡೋರು… ನನಗ ಇದೆಲ್ಲ ಸಂಭ್ರಮ ಅನಸ್ತು. ಆದರ, ದೇವದಾಸಿ ಅಂದ್ರೇನು ಅಂತ ನನಗ ಗೊತ್ತಾಗಿದ್ದು ನಾನು ದೊಡ್ಡಕಿ (ಋತುಮತಿ) ಆದಮ್ಯಾಲೆ…!
ಆಗ ನಮ್ಮವ್ವ “ನಿನಗ ಮುತ್ತು ಕಟ್ಟೇತಿ. ನೀ ಇನ್ನ ಶಾಲಿಗೆ ಹೋಗಬಾರದು. ಹೊರಗ (ವೇಶ್ಯಾವಾಟಿಕೆ) ಹೋಗಬೇಕು, ಘರವಾಣಿ ಕಡೆ ಇರಬೇಕು, ರೊಕ್ಕ ಗಳಿಸಿ ತರಬೇಕು’ ಹಿಂಗ ಹೇಳಿದ ಮ್ಯಾಲೆ ನನಗ ಸಿಡಿಲು ಬಡದಂಗ ಆತು. ಯಾರ ಮುಂದ ಏನಂತ ಹೇಳತೀರಿ? ಈ ಪದ್ಧತಿ ಆಗ ಯಾರಿಗೂ ಹೊಸದಿರಲಿಲ್ಲ. ಎಲ್ಲರಿಗೂ ಸಹಜ ಅನಸಿತ್ತು. ನನಗರೇ ಶಾಲಿ ಕಲಿಬೇಕು ಅಂತ ಇಚ್ಛಾ. ಇನ್ನೂ ಎಂಟನೇತ್ತ ಇದ್ದೆ, ಅವ್ವನ ಕೂಡ ವಾದಾ ಮಾಡಿದೆ, “ಯವ್ವಾ, ನನ್ನ ಗೆಳತ್ಯಾರೆಲ್ಲ ಯುನಿಫಾರ್ಮ್ ಹಾಕೊಂಡು ಶಾಲಿಗೆ ಹೋಗ್ತಾರು. ನಾನು ಹೋಗ್ತೀನಿ. ನಾ ಒಬ್ಬಕಿನ ಸೀರಿ ಉಟ್ಟಿಕೊಳ್ಳೋದು ಸಮ ಕಾಣಂಗಿಲ್ಲ’ ಅಂದೆ. ಏನೂ ಉಪಯೋಗ ಆಗಲಿಲ್ಲ. ನೋಡ ನೋಡತಿದ್ದಂಗನ ಊರಾಗೆಲ್ಲ ಗೊತ್ತಾತು ನಾನು ದೇವದಾಸಿ ಆಗೇನಿ ಅಂತ. ನನ್ನ ಮ್ಯಾಲೆ ಲೈಂಗಿಕ ಶೋಷಣೆ ಶುರು ಆತು. ನಮ್ಮೂರು ಅಲ್ಲದನ ಆಜುಬಾಜು ಊರಿನ ದೊಡ್ಡವರೆಲ್ಲ ನನ್ನ ಕಡೆ ಬಂದು ಹೋಗಲಿಕ್ಕೆ ಶುರು ಮಾಡಿದ್ರು. ಹತ್ತನೇತ್ತ ಬರೋ ಹೊತ್ತಿಗೆ ನನ್ನ ಜೀವ ಸುಸ್ತು ಆಗಿತ್ತು. ಅತ್ಲಾಗ ಕ್ಲಾಸ್ ಒಳಗೂ ಕುಂಡ್ರಾಕ ಆಗ್ತಿರಲಿಲ್ಲ. ಇತ್ಲಾಗ ಮನ್ಯಾಗೂ ಇರಾಕ್ ಆಗ್ತಿರಲಿಲ್ಲ. ಅಷ್ಟು ನರಕ ಅನುಭವಿಸಿದೆ. ನಾನು ಹತ್ತನೇತ್ತ ಪರೀಕ್ಷೆ ಬರೆದಾಗ ಹೊಟ್ಟಾéಗ ಮೂರು ತಿಂಗಳ ಕೂಸು ಇತ್ತು. ಪರೀಕ್ಷೆ ಹೆಂಗ ಬರದು ಪಾಸ್ ಮಾಡಿದ್ನೋ ದೇವರಿಗೆ ಗೊತ್ತು.
ಈ ನರಳಾಟದಾಗ ನನ್ನ ಕಲಿಕಿ ಅರ್ಧಕ್ಕ ನಿಂತು. ಆಗ ನನಗ 18 ವರ್ಷ, ಎರಡು ಮಕ್ಕಳು ಆಗಿದ್ವು. ಹೆಸರಿಗೆ ದೇವದಾಸಿಯರಾದ್ರೂ ಜನ ನಮ್ಮನ್ನ ಕರಿತಿದ್ದದ್ದ ಬ್ಯಾರೆ, ಏಕವಚನ ದಾಗ ಮಾತಾಡಸ್ತಿದ್ರು, ಗೌರವ ಕೊಡ್ತಿರಲಿಲ್ಲ… 1991ರೊಳಗ ಮೈಸೂರು ರಿಸೆಟಲ್‌ಮೆಂಟ್ ಆ್ಯಂಡ್ ಡೆವಲಪ್‌ಮೆಂಟ್ ಏಜೆನ್ಸಿ (ಮೈರಾಡ) ಮತ್ತ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಸಂಪರ್ಕಕ್ಕ ಬಂದೆ. ಅವರಿಂದ ಬಾಳಿಗೆ ಹೊಸ ಬೆಳಕು ಬಂದಂಗಾತು. ಈ ಅನಿಷ್ಠ ಪದ್ಧತಿಯಿಂದ ನನಗ ಹೊರಗ ತಂದ್ರು. ಜೀವನ ನಡಸ್ಲಿಕ್ಕೆ ಸರ್ಕಾರದಿಂದ ಟೇಲರಿಂಗ್ ಮೆಷಿನ್ ಕೊಡಸಿದ್ರು. ಪಿಕೊ, ಫಾಲ್ ಮಾಡ್ಕೊತ ಹೊಸ ಬದುಕು ಶುರು ಮಾಡಿದೆ.
ಮುಂದ, ದೇವದಾಸಿ ಪದ್ಧತಿ ನಿಲ್ಲಸ್ಲಿಕ್ಕೆ ನಾವು ನೂರು ಜನ ತಂಡ ಕಟ್ಟಿಕೊಂಡು ಸವದತ್ತಿ ಯಲ್ಲಮ್ಮ ಗುಡ್ಡದಾಗ ಕ್ಯಾಂಪ್ ಹಾಕಿದ್ವಿ. ಬಂದವರಿಗೆಲ್ಲ ದೇವದಾಸಿ ಮೂಢನಂಬಿಕೆ, ಕಾನೂನು ಪ್ರಕಾರ ತಪ್ಪು ಅಂತ ತಿಳಿಸಿ ಹೇಳಿದ್ವಿ. ಹಿಂಗ ಮಾಡೋದಕ್ಕ ಅಲ್ಲಿನ ಪೂಜಾರಿಗಳು ವಿರೋಧಿಸಿದ್ರು. ಜಿಲ್ಲಾಧಿಕಾರಿಗಳ ತನ ವಿಷಯ ಮುಟ್ಟತು. ಆಗ ಜಿ.ವಿ. ಕೊಂಗವಾಡ ಅವರು ಜಿಲ್ಲಾಧಿಕಾರಿ ಆಗಿದ್ರು. ನಮ್ಮ ಕಷ್ಟ ಅವರಿಗೆ ಗೊತ್ತಿತ್ತು. ಅವರು ನಮ್ಮ ಪರವಾಗಿ ನಿಂತ್ರು. “ನೀವು ಪ್ರಚಾರ ಮಾಡ್ರಿ, ನಿಮಗ ಪೊಲೀಸ್ ಸೆಕ್ಯುರಿಟಿ ಕೊಡ್ತೇನಿ’ ಅಂದ್ರು. ಹಳ್ಳೂರ, ಶಿವಾಪುರ, ಮೂಡಲಗಿ, ರಾಯಬಾಗ್ ಇಲ್ಲೆಲ್ಲ ದೇವದಾಸಿ ಪದ್ಧತಿಗೆ ಬೆಂಬಲ ನೀಡ್ತಿದ್ದ ಕೆಲ ಪೂಜಾರಿಗಳ ಮ್ಯಾಲೆ ಎಫ್ಐಆರ್ ಹಾಕಿದ್ವಿ. ಅತುಲ್ ಕುಮಾರ್ ಅಂತ ಇನ್ನೊಬ್ಬ ಡಿಸಿ ಇದ್ರು, ಅವರೂ ನಮ್ಮ ಕೆಲಸಕ್ಕ ಬೆಂಬಲ ನೀಡಿದ್ರು.
ದೇವದಾಸಿಯರು ಅನಿಷ್ಠ ಪದ್ಧತಿಯಿಂದ ಹೊರಗ ಬಂದ್ರೂ ಗೌರವ ಇರಲಿಲ್ಲ, ದೇವದಾಸಿಯರ ಮಕ್ಕಳಿಗೂ ಸಮಸ್ಯೆ ಭಾಳ ಇದ್ವು. “ಅಪ್ಪ ಯಾರು?’ ಅಂತ ಕೇಳಿದ್ರ ಆ ಮಕ್ಕಳು ಹೇಳಲಿಕ್ಕೆ ಪರದಾಡತಿದ್ವಿ. ಜಾಗೃತಿ ಇನ್ನೂ ಆಗಬೇಕಿತ್ತು… ಅದಕ್ಕ 2017ರೊಳಗ “ಅಮ್ಮ ಫೌಂಡೇಶನ್’ ಶುರು ಮಾಡಿದ್ವಿ. ಗೋಕಾಕ, ಚಿಕ್ಕೋಡಿ ಇಲ್ಲೆಲ್ಲ 100 ಕಿಶೋರಿ ತಂಡಗಳನ್ನ ಮಾಡೇವಿ. ಯಾವ ಹೆಣ್ಣು ಮಗುನೂ ದೇವದಾಸಿ ಆಗಬಾರದು, ವೇಶ್ಯಾವಾಟಿಕೆಗೆ ಇಳಿಬಾರದು, ಬಾಲ್ಯ ವಿವಾಹ, ಮಕ್ಕಳ ಸಾಗಿಸೋದು ಆಗಬಾರದು, ಅವರಿಗೆ ಉನ್ನತ ಶಿಕ್ಷಣದ ಮಹತ್ವ ತಿಳಿಸೋದು ಇದ ನಮ್ಮ ಉದ್ದೇಶ. ಇಲ್ಲಿವರಿಗಿ 200ಕ್ಕೂ ಹೆಚ್ಚು ಹೆಣ್ಣಮಕ್ಕಳು ದೇವದಾಸಿ ಆಗೋದು ತಡ ದೇವಿ, ಸುಮಾರು 50 ಬಾಲ್ಯ ವಿವಾಹ ನಿಲ್ಲ ಸೇವಿ. ದೇವದಾಸಿಯರ ಮಕ್ಕಳೂ ಇವತ್ತ ಛೊಲೊ ಸ್ಥಾನಮಾನದೊಳಗ ಇದಾರ. ಆದರ, ಇನ್ನೂ 20 ವರ್ಷ ಬೇಕು, ಇದನ್ನ ಬೇರು ಸಮೇತ ತಗದ ಹಾಕಲಿಕ್ಕೆ. ಶಿಕ್ಷಣ, ಜಾಗೃತಿ ಇವ ಇದಕ್ಕ ದಾರಿ. ನನ್ಹಂಗ ಯಾರೂ ಆಗೋದು ಬ್ಯಾಡ.
ದೆಹಲಿ ತನ ಮುಟ್ಟಿತು ನಮ್ಮ ಕೆಲಸ…
ಎರಡು ವರ್ಷದ ಹಿಂದ, ರಾತ್ರಿ ಫೋನ್ ಬಂತು. ಆಗ ಗೊತ್ತಾಗಿದ್ದು ನನಗ “ನಾರಿ ಶಕ್ತಿ’ ಪುರಸ್ಕಾರ ಸಿಕ್ಕದ ಅಂತ. ದೆಹಲಿಗೆ ಕರಸಿದ್ರು, ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರ ಕಡೆಯಿಂದ ಪ್ರಶಸ್ತಿ ತೊಗೊಂಡೆ. ಪ್ರಧಾನಿ ನರೇಂದ್ರ ಮೋದಿಯವರ ಜೊತೆನೂ ಮಾತಾಡ್ಲಿಕ್ಕೆ ಅವಕಾಶ ಸಿಕ್ತು. ನಾನು ಮಾಡಿರೋ ಕೆಲಸಕ್ಕ ಖುಷಿಪಟ್ಟರು. ಈ ವರ್ಷದ ಸ್ವಾತಂತ್ರ್ಯೋತ್ಸವಕ್ಕೂ ದೆಹಲಿಯಿಂದ ಆಮಂತ್ರಣ ಬಂದಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮಾತಾಡಿÕದೆ. ಚೆನ್ನೈನ ಒಂದು ಸಂಸ್ಥೆಯವರ ಸಹಕಾರದಿಂದ ಅಮೆರಿಕ, ಫಿಲಿಫೈನ್ಸ್, ಸಿಂಗಪೂರ್ ದೇಶಗಳಿಗೆ ಭೇಟಿ ನೀಡಿದ್ದೆ. ಅಲ್ಲಿ ಹೆಣ್ಣಮಕ್ಕಳ ವಿಷಯದಾಗ ಕಾನೂನು ಏನೇನು ಅವ ಅಂತ ತಿಳಿದುಕೊಂಡು ಬಂದೆ.
ಶೋಭಾ ಗಸ್ತಿ
ನಿರೂಪಣೆ: ನಿತೀಶ ಡಂಬಳ