Advertisement

ಶೋಭಾ ಬ್ರೂಟರಿಗೆ ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ

06:45 AM Jan 15, 2018 | Team Udayavani |

ಮೂಡಬಿದಿರೆ: ಹೊಸದಿಲ್ಲಿಯ ಹಿರಿಯ ಚಿತ್ರ ಕಲಾವಿದೆ ಶೋಭಾ ಬ್ರೂಟ ಅವರಿಗೆ ರವಿವಾರ ಮುಕ್ತಾಯಗೊಂಡ 24ನೇ ವರ್ಷದ ಆಳ್ವಾಸ್‌ ವಿರಾಸತ್‌ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದಲ್ಲಿ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು “ಆಳ್ವಾಸ್‌ ವರ್ಣ ವಿರಾಸತ್‌ 2018′ ಪ್ರಶಸ್ತಿ ಪ್ರದಾನ ಮಾಡಿದರು.

Advertisement

ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಶಿಕ್ಷಣ, ಲಲಿತ ಕಲೆಗಳಲ್ಲಿ ಡಿಪ್ಲೊಮಾ ಹೊಂದಿರುವ ಶೋಭಾ ಬ್ರೂಟ ಅವರು ದೇಶದ ವಿವಿಧೆಡೆ ಮಾತ್ರವಲ್ಲದೆ ಆಸ್ಟ್ರೇಲಿಯ, ಅಮೆರಿಕ, ಬೆಲ್ಜಿಯಂ, ಇಂಗ್ಲಂಡ್‌ ದೇಶ ಗಳಲ್ಲಿ ಏಕವ್ಯಕ್ತಿ ಪ್ರದರ್ಶನ ನೀಡಿದ್ದಾರೆ. ಭಾರತದ ಮಹಾನಗರಗಳಲ್ಲದೆ ಅಮೆರಿಕ ಸಹಿತ ಹಲವು ದೇಶಗಳ ನಗರಗಳಲ್ಲಿ ನಡೆದ ಚಿತ್ರಕಲಾ ಶಿಬಿರಗಳಲ್ಲಿ ಆಹ್ವಾನಿತ ಕಲಾವಿದೆ ಯಾಗಿ ಪಾಲ್ಗೊಂಡಿದ್ದಾರೆ. ಗಯಾನ ಸರಕಾರದಿಂದ ಆಹ್ವಾನಿತರಾಗಿ ಅಲ್ಲಿನ ಪಾರ್ಲಿಮೆಂಟ್‌ ಭವನಕ್ಕೆ ರಾಷ್ಟ್ರಾಧ್ಯಕ್ಷರ ಭಾವ ಚಿತ್ರ ರಚಿಸಲು ಆಹ್ವಾನಿತರಾಗಿದ್ದಾರೆ ಎಂದು ಸಮ್ಮಾನ ಪೂರ್ವ ಪರಿಚಯದಲ್ಲಿ ವಿದ್ಯಾರ್ಥಿನಿ ಲಿಖೀತಾ ಶೆಟ್ಟಿ ತಿಳಿಸಿದರು.

ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್‌ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ರಮಾನಂದ ಸಾಲಿಯಾನ್‌, ವರ್ಣ ವಿರಾಸತ್‌ ರಾಷ್ಟ್ರೀಯ ಚಿತ್ರ ಶಿಬಿರದ ಗೌರವ ಸಲಹೆಗಾರರಾದ ಗಣೇಶ ಸೋಮ ಯಾಜಿ, ಕೋಟಿಪ್ರಸಾದ್‌ ಆಳ್ವ, ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.

ವಿರಾಸತ್‌ ಮುಕ್ತಾಯ
ಆಳ್ವಾಸ್‌ ವಿರಾಸತ್‌ 2018ರ ರವಿವಾರ ನಡೆದ ಹಿಂದಿ ಚಲನಚಿತ್ರ ರಂಗದ ಸುಪ್ರಸಿದ್ಧ ಹಿನ್ನೆಲೆ ಗಾಯಕ, ಮುಂಬಯಿಯ ಕೈಲಾಶ್‌ ಖೇರ್‌ ಮತ್ತು ಬಳಗದ ಚಿತ್ರ ಸಂಗೀತ ಆಲಿಸಲು ಜನಸಾಗರವೇ ಹರಿದುಬಂತು.

ಕೈಲಾಶ್‌ ಖೇರ್‌ ಅವರು ಹಿಂದಿ ಚಿತ್ರಗೀತೆಗಳನ್ನು ಮಾತ್ರ ವಲ್ಲದೆ ಕನ್ನಡ ಗೀತೆಗಳನ್ನೂ ಹಾಡಿ ರಂಜಿಸಿ ದರು. ಸೂಫಿ ಸಂಗೀತವೂ ಹರಿದುಬಂತು. ಕನ್ನಡದ “ಎಕ್ಕ ರಾಜ ರಾಣಿ ನಮ್ಮೊಳಗೆ’ ಹಾಡು ಮೂಡಿ ಬಂದಾಗ, ಪಂ| ಮಲ್ಲಿಕಾರ್ಜುನ ಮನ್ಸೂರರು ಹಾಡಿದ ಅಕ್ಕ ಮಹಾದೇವಿಯವರ “ಅಕ್ಕ  ಕೇಳವ್ವಾ…’ ಹಾಡು ಕೇಳಿಬಂದಾಗ ಜನರು ಹರ್ಷೋದ್ಗಾರ ಗೈದರು. ಹಿಂದಿಯ “ಬಾಹುಬಲಿ’ ಚಲನಚಿತ್ರದ ಶೀರ್ಷಿಕೆ ಗೀತೆ ಸೇರಿದಂತೆ ಜನಪ್ರಿಯ ಹಿಂದಿ ಚಿತ್ರಗಳ ಹಾಡುಗಳನ್ನು ಖೇರ್‌ ಹಾಡಿದರು. 160 ಅಡಿ ಅಗಲ, 60 ಅಡಿ ಉದ್ದದ ವೇದಿಕೆಯನ್ನು ತಮ್ಮ ಪ್ರಸ್ತುತಿಯ ಶೈಲಿಯಿಂದ ಸಂಪೂರ್ಣವಾಗಿ ತುಂಬಿದ ಕೈಲಾಶ್‌, ಒಂದು ಹಾಡಿಗೆ ಗ್ಯಾಲರಿಯ ಎಲ್ಲ ವಿದ್ಯುದ್ದೀಪಗಳನ್ನು ಆರಿಸಿ ಸಂಪೂರ್ಣ ಕತ್ತ ಲಾವರಿಸಿದ ಸ್ಥಿತಿಯನ್ನು ನಿರ್ಮಿಸಿದರು. ಆಗ ಸಭಿಕರು ತಮ್ಮ ಮೊಬೈಲ್‌ ಟಾರ್ಚ್‌ಲೈಟ್‌ಗಳನ್ನು ಬೆಳಗಿ ದಾಗ ರಾತ್ರಿಯಾಗಸದಲ್ಲಿ ಸಹಸ್ರಾರು ತಾರೆ ಗಳು ಬೆಳಗಿದಂತೆ ಭಾಸವಾಗಿ ಪ್ರೇಕ್ಷಕರಿಗೆ ವಿಶಿಷ್ಟ ಅನುಭವ ಒದಗಿತು.

Advertisement

ಮಾ| ಸದ್ಗುಣ ಐತಾಳ್‌ ಬಳಗದವರ ಮ್ಯಾಂಡೋ ಲಿನ್‌, ಒರಿಸ್ಸಾದ ಗತ ಒಡಿಸ್ಸಿ -ಒಡಿಸ್ಸಿ ನೃತ್ಯ, ಕೊಡವೂರು ನೃತ್ಯ ನಿಕೇತನದ ನೃತ್ಯ ವೈಭವ ಮತ್ತು ಕೊನೆಯದಾಗಿ ಆಳ್ವಾಸ್‌ನ ಬಂಜಾರ, ಗೋಟಿಪುವ, ಮಣಿಪುರಿ ಸ್ಟಿಕ್‌ ಡ್ಯಾನ್ಸ್‌, ಕಥಕ್‌ ನೃತ್ಯದೊಂದಿಗೆ ಈ ಬಾರಿಯ ವಿರಾಸತ್‌ ಮುಕ್ತಾಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next