Advertisement

ಬಾಬರ್‌ ಶತಕ; ಪಾಕ್‌ ಗೆಲುವಿನಾರಂಭ

06:30 AM Oct 15, 2017 | Team Udayavani |

ದುಬಾೖ: ಟೆಸ್ಟ್‌ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ 2-0 ವೈಟ್‌ವಾಶ್‌ಗೆ ತುತ್ತಾಗಿದ್ದ ಪಾಕಿಸ್ಥಾನ ಏಕದಿನ ಸರಣಿಯಲ್ಲಿ ಗೆಲುವಿನಾರಂಭ ಕಂಡುಕೊಂಡಿದೆ. ಶುಕ್ರವಾರ ದುಬಾೖಯಲ್ಲಿ ನಡೆದ ಮೊದಲ ಪಂದ್ಯವನ್ನು 83 ರನ್ನುಗಳಿಂದ ಗೆದ್ದಿದೆ. ಬಾಬರ್‌ ಆಜಂ ಅವರ ಶತಕ ಪಾಕ್‌ ಸರದಿಯ ಆಕರ್ಷಣೆ ಆಗಿತ್ತು.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಾಕಿಸ್ಥಾನ 6 ವಿಕೆಟಿಗೆ 292 ರನ್‌ ಪೇರಿಸಿ ಸವಾಲೊಡ್ಡಿದರೆ, ಶ್ರೀಲಂಕಾಕ್ಕೆ ಗಳಿಸಲು ಸಾಧ್ಯವಾದದ್ದು 8 ವಿಕೆಟಿಗೆ 209 ರನ್‌ ಮಾತ್ರ. ಇದು ಶ್ರೀಲಂಕಾ ಅನುಭವಿಸಿದ ಸತತ 8ನೇ ಸೋಲು ಹಾಗೂ ಇದೊಂದು “ದಾಖಲೆ’. 1998-99ರ ಅವಧಿಯಲ್ಲೂ ಲಂಕಾ ಸತತ 8 ಪಂದ್ಯಗಳಲ್ಲಿ ಎಡವಿತ್ತು. ಹಾಗೆಯೇ ಈ ವರ್ಷದ 21 ಏಕದಿನ ಪಂದ್ಯಗಳಲ್ಲಿ ಲಂಕೆಗೆ ಎದುರಾದ 16ನೇ ಸೋಲು ಇದಾಗಿದೆ.

ವನ್‌ಡೌನ್‌ ಬ್ಯಾಟ್ಸ್‌ಮನ್‌ ಬಾಬರ್‌ ಆಜಂ 131 ಎಸೆತ ಎದುರಿಸಿ 103 ರನ್‌ ಹೊಡೆದರು. ಇದು ಅವರ 6ನೇ ಶತಕ. ಹೊಡೆದದ್ದು ಕೇವಲ 5 ಬೌಂಡರಿ ಮಾತ್ರ. ಅವರ ಸೆಂಚುರಿಗೆ 128 ಎಸೆತ ಬೇಕಾಯಿತು. ಇದು ಬಾಬರ್‌ ಅವರ ಶತಕಗಳಲ್ಲೇ ಅತ್ಯಂತ ನಿಧಾನ ಗತಿಯದ್ದಾಗಿದೆ.

5ನೇ ಕ್ರಮಾಂಕದಲ್ಲಿ ಆಡಲಿಳಿದ ಶೋಯಿಬ್‌ ಮಲಿಕ್‌ ಬಿರುಸಿನ ಗತಿಯಲ್ಲಿ 81 ರನ್‌ ಬಾರಿಸಿದರು. 61 ಎಸೆತಗಳ ಈ ಆಟದಲ್ಲಿ 5 ಬೌಂಡರಿ, 2 ಸಿಕ್ಸರ್‌ ಒಳಗೊಂಡಿತ್ತು. ಈ ಸಾಧನೆಗಾಗಿ ಮಲಿಕ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. 43 ರನ್‌ ಮಾಡಿದ ಆರಂಭಕಾರ ಫ‌ಕರ್‌ ಜಮಾನ್‌ ಪಾಕ್‌ ಸರದಿಯ ಮತ್ತೂಬ್ಬ ಪ್ರಮುಖ ಸ್ಕೋರರ್‌.

67ಕ್ಕೆ ಬಿತ್ತು 5 ವಿಕೆಟ್‌
ಶ್ರೀಲಂಕಾ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. 16 ಓವರ್‌ ಮುಗಿದಾಗ 67 ರನ್ನಿಗೆ 5 ವಿಕೆಟ್‌ ಉದುರಿಸಿಕೊಂಡಿತ್ತು. ಇಂಥ ಸ್ಥಿತಿಯಲ್ಲಿ ಲಂಕಾ ಇನ್ನೂರರ ಗಡಿ ದಾಟಿದ್ದೇ ವಿಶೇಷ. 8ನೇ ಕ್ರಮಾಂಕದಲ್ಲಿ ಬ್ಯಾಟ್‌ ಹಿಡಿದು ಬಂದ ಅಖೀಲ ಧನಂಜಯ ಅಜೇಯ 50 ರನ್‌ ಹೊಡೆದುದರಿಂದ ಇದು ಸಾಧ್ಯವಾಯಿತು. ಲಹಿರು ತಿರಿಮನ್ನೆ 53 ರನ್‌ ಮಾಡಿದರು. ಪಾಕ್‌ ಪರ ರುಮ್ಮನ್‌ ರಯೀಸ್‌ ಮತ್ತು ಹಸನ್‌ ಅಲಿ ತಲಾ 3 ವಿಕೆಟ್‌ ಹಾರಿಸಿದರು.

Advertisement

5 ಪಂದ್ಯಗಳ ಸರಣಿಯ ಮುಂದಿನ ಮುಖಾಮುಖೀ ಅ. 16ರಂದು ಅಬುದಾಭಿಯಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-6 ವಿಕೆಟಿಗೆ 292 (ಬಾಬರ್‌ 103, ಮಲಿಕ್‌ 81, ಜಮಾನ್‌ 43, ಲಕ್ಮಲ್‌ 47ಕ್ಕೆ 2). ಶ್ರೀಲಂಕಾ-8 ವಿಕೆಟಿಗೆ 209 (ತಿರಿಮನ್ನೆ 53, ಧನಂಜಯ ಔಟಾಗದೆ 50, ರಯೀಸ್‌ 49ಕ್ಕೆ 3, ಹಸನ್‌ ಅಲಿ 36ಕ್ಕೆ 3). ಪಂದ್ಯಶ್ರೇಷ್ಠ: ಶೋಯಿಬ್‌ ಮಲಿಕ್‌.

Advertisement

Udayavani is now on Telegram. Click here to join our channel and stay updated with the latest news.

Next