ಬೆಳಗಾವಿ : ”ಮೋದಿ ಹೆಸರು ಹೇಳಿ ಮತ ಕೇಳಿದರೆ ಕಪಾಳಮೋಕ್ಷ ಮಾಡಿ’ ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆ ಶೋಭೆ ತರುವುದಿಲ್ಲ, ಇದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ. ಅತಿರೇಕದ ಪರಮಾವಧಿ ಮಾತು’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಆಕ್ರೋಶ ಹೊರ ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ‘ಇಡೀ ಜಗತ್ತು ಮೋದಿಯವರನ್ನು ಗೌರವದಿಂದ ನೋಡುತ್ತಿದೆ.ಹಗುರವಾದ ಮಾತುಗಳನ್ನು ಆಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದರು.
ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲ್ಲಿಸಲು ಸಭೆ ಮಾಡಿದ್ದೇವೆ.ಎಲ್ಲರೂ ಸೇರಿ ಶೆಟ್ಟರ್ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವ ಭರವಸೆ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ನಾನು ಕೂಡ ಪ್ರತಿ ವಿಧಾನಸಭಾ ಕ್ಷೇತ್ರ ಪ್ರವಾಸ ಮಾಡುತ್ತೇನೆ.ಈ ಬಾರಿ 28ಕ್ಕೆ 28ಕ್ಷೇತ್ರ ಗೆಲ್ಲಿಸುವುದು ನಮ್ಮ ಗುರಿ ಎಂದರು.
ಸಿದ್ದರಾಮಯ್ಯನವರಿಂದ ಮೋದಿ ವಿರುದ್ಧ ವಾಗ್ದಾಳಿ ವಿಚಾರಕ್ಕೆ ಪ್ರತಿಕಿಯಿಸಿ ‘ಅವರ ಮನಸ್ಸಿನಲ್ಲಿ ಮೋದಿ ಬಗ್ಗೆ ಮಾತನಾಡಿದರೆ ದೊಡ್ಡವರು ಆಗೋ ಭಾವನೆ ಇದೆ. ಇದು ಎಷ್ಟರ ಮಟ್ಟಿಗೆ ಸರಿ ಅಂತಾ ಮುಖ್ಯಮಂತ್ರಿಯಾಗಿ ಯೋಚನೆ ಮಾಡಬೇಕು’ ಎಂದು ತಿರುಗೇಟು ನೀಡಿದರು.
‘ಹಣಕಾಸು ನೆರವಿನ ವಿಚಾರವಾಗಿ ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಎನು ಕೊಡಬೇಕು ಎಲ್ಲವನ್ನೂ ಕೊಟ್ಟು ಮುಗಿಸಿದ್ದೇವೆ ಅಂದಿದ್ದಾರೆ.ಇದಾದ ಮೇಲೂ ಮುಖ್ಯಮಂತ್ರಿಗಳು ಹಗುರವಾಗಿ ಮಾತಾಡುತ್ತಿದ್ದಾರೆ’ ಎಂದರು.
‘ಮೋದಿಯವರು ಅತ್ಯಂತ ಸುಳ್ಳು ಹೇಳುವ ಪ್ರಧಾನಿ’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಈ ಮಾತಿಗೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ.ಇನ್ನಾದರೂ ಮಾತುಗಳನ್ನು ಕಡಿಮೆ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ಗೌರವ ತರುವ ಕೆಲಸ ಮಾಡಲಿ’ ಎಂದರು.
‘ಮಂಡ್ಯದಲ್ಲಿ ಈಗಾಗಲೇ ಬಹುಪಾಲು ಎಚ್.ಡಿ. ಕುಮಾರಸ್ಚಾಮಿ ಸ್ಪರ್ಧೆ ಮಾಡುವುದು ನಿಶ್ಚಯ ಆಗಿದೆ.ಸುಮಲತಾ ಅವರಿಗೆ ಸಾಕಷ್ಟು ಅವಕಾಶಗಳಿವೆ. ಅವರನ್ನು ಕರೆದು ಮಾತಾಡುತ್ತೇವೆ. ಸಮಾಧಾನದಿಂದ ಇದ್ದರೆ ಮುಂದೆ ಸೂಕ್ತ ಸ್ಥಾನಮಾನ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ’ ಎಂದರು.