ಭೋಪಾಲ್, ಮಧ್ಯಪ್ರದೇಶ : ಸಾಲ ಮನ್ನಾ ಹಾಗೂ ತಮ್ಮ ಬೆಳೆಗೆ ನ್ಯಾಯಯುತ ಧಾರಣೆಯನ್ನು ಆಗ್ರಹಿಸಿ ಕಳೆದ ಜೂನ್ 1ರಿಂದ ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಯನ್ನು ಪರಿಗಣಿಸಲು ಮುಂದಾಗಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಮಧ್ಯಪ್ರದೇಶದ ಸುಮಾರು ಆರು ಲಕ್ಷಕ್ಕೂ ಅಧಿಕ ರೈತರಿಗೆ ಪ್ರಯೋಜನವಾಗುವಂತೆ, ತೆರಿಗೆ ಪಾವತಿದಾರರ ವೆಚ್ಚದಲ್ಲಿ, ಸುಮಾರು 2,000 ಕೋಟಿ ರೂ.ಗಳ ಪ್ರಮಾಣದಲ್ಲಿ ಸಾಲ ಬಡ್ಡಿ ಮನ್ನಾ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ರೈತರ ಪ್ರತಿಭಟನೆಗೆ ಹಿಂಸೆಗೆ ತಿರುಗಿ ಮೊನ್ನೆ ಮಂಗಳವಾರ ಐವರು ರೈತರು ಪೊಲೀಸ್ ಗುಂಡಿಗೆ ಬಲಿಯಾಗಿರುವುದನ್ನು ಸರಕಾರವೇ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚೌಹಾಣ್ ಇದೀಗ ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಂತೆ ಜೆಡಿಯು ಅಧ್ಯಕ್ಷ ಶರದ್ ಯಾದವ್ ಅವರು ಕೂಡ ಇಂದು ಸಂತ್ರಸ್ತ ರೈತರನ್ನು ಕಾಣಲು ಹಿಂಸಾತ್ರಸ್ತ ಮಾಂಡ್‌ಸೋರ್‌ಗೆ ಭೇಟಿ ನೀಡಲು ಪ್ರಯಾಣಿಸುತ್ತಿರುವುದಾಗಿ ತಿಳಿದು ಬಂದಿದೆ.
ಮಂದ್‌ಸೋರ್ ಹಿಂಸೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಬುಧವಾರ ಸಚಿವರು ಮತ್ತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದರು. ಸಭೆಯ ಫಲಶ್ರುತಿ ಎಂಬಂತೆ ಕೇಂದ್ರದಿಂದ ಮಧ್ಯಪ್ರದೇಶಕ್ಕೆ 1,000 ಅರೆಸೈನಿಕ ದಳದ ಸಿಬಂದಿಗಳನ್ನು ಕಳುಹಿಸಲಾಗಿತ್ತು.
ಮಧ್ಯಪ್ರದೇಶದಲ್ಲಿ ಬೀಕರ ಬರಗಾಲದಿಂದಾಗಿ 2016ರಲ್ಲಿ 1,600ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2011 ಮತ್ತು 2015ರ ನಡುವೆ ಮಧ್ಯಪ್ರದೇಶದಲ್ಲಿ 6,076 ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳು ತಿಳಿಸುತ್ತವೆ.