ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ನಡೆಯುತ್ತಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಗುರುವಾರ ನಗರಸಭೆಯ 35 ವಾರ್ಡ್, ತಾಲೂಕಿನ 19 ಗ್ರಾ.ಪಂ., ಏಳೆಂಟು ದೇವಸ್ಥಾನಗಳಿಂದ 100 ಕ್ಕೂ ಅಧಿಕ ವಾಹನಗಳಲ್ಲಿ ಹಸುರು ಹೊರೆಕಾಣಿಕೆಯು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸಮರ್ಪಣೆಗೊಂಡಿತು.
ಸಿಂಡಿಕೇಟ್ ಸರ್ಕಲ್ ಬಳಿ ಶಾಸಕ ಕೆ.ರಘುಪತಿ ಭಟ್ ಅವರು ಚಾಲನೆ ನೀಡಿದರು. ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಕಲ್ಮಾಡಿ ಸಹಿತ ನಗರಸಭೆ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು. ಆದಿಯೋಗಿ ಶಿವನ ವಿಗ್ರಹ, ಸಹಿತ ಚೆಂಡೆಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ತೆಂಗಿನಕಾಯಿ, ಬೆಲ್ಲ, ಸೀಯಾಳ, ಹಲಸು, ಎಣ್ಣೆ, ವಿವಿಧ ಬಗೆಯ ತರಕಾರಿಗಳು, ಹಣ್ಣುಗಳು, ಅಕ್ಕಿ ಸಹಿತ ಹಲವಾರು ಬಗೆಯ ವಸ್ತುಗಳು ಹೊರೆಕಾಣಿಕೆಯಲ್ಲಿದ್ದವು.
ಉಚಿತ ಆಟೋ ಸೇವೆ
ಅತಿರುದ್ರ ಮಹಾಯಾಗಕ್ಕೆ ಆಗಮಿಸುವ ಭಕ್ತರಿಗೆ ಉಡುಪಿ ಸಂತೆಕಟ್ಟೆಯ ಕೆನರಾ ಆಟೋಮೋಟಿವ್ ಶೋರೂಮ್ ಅವರು ಉಚಿತವಾಗಿ ಆಟೋ ಪಯಣವನ್ನು ಕಲ್ಪಿಸಿದ್ದಾರೆ. ಇದರ ಉದ್ಘಾಟನೆಯನ್ನು ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್ ನೆರವೇರಿಸಿ ಶುಭ ಹಾರೈಸಿದರು. ಮಾ 2 ರಿಂದ 3 ದಿನಗಳ ಕಾಲ ಮಣಿಪಾಲದ ಈಶ್ವರನಗರದಿಂದ ದೇವಸ್ಥಾನಕ್ಕೆ ಉಚಿತವಾಗಿ ಆಟೋದಲ್ಲಿ ತಲುಪಿಸುವ ವಿಶೇಷ ಸೇವೆ ನಡೆಯಲಿದೆ. ಇದು ಕೆನರಾ ಆಟೋಮೋಟಿವ್ ಶೋರೂಮ್ ಅವರ ವಿಶಿಷ್ಟವಾದ ಸೇವೆಯಾಗಿದೆ. ಭಕ್ತರು ಈ ಸೇವೆಯನ್ನು ಪಡೆಯಬಹುದಾಗಿದೆ ಪ್ರಕಟನೆ ತಿಳಿಸಿದೆ.