Advertisement

ಶಿವಯೋಗಿ ಸಿದ್ಧರಾಮ ಶ್ರೀಗೆ ವೈಭವದ ಅಕ್ಷತೆ

06:41 AM Jan 15, 2019 | |

ಸೊಲ್ಲಾಪುರ: ಸೊನ್ನಲಿಗೆ ಶರಣ ಶಿವಯೋಗಿ ಸಿದ್ಧರಾಮನ ಜಾತ್ರಾ ಮಹೋತ್ಸವದಂದು ಸಿದ್ಧರಾಮನ ಯೋಗದಂಡವಾಗಿರುವ ನಂದಿ ಧ್ವಜಗಳಿಗೆ ಸಮ್ಮತಿ ಕಟ್ಟೆ ಮೇಲೆ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕ, ತೆಲಂಗಾಣದ ಲಕ್ಷಾಂತರ ಭಕ್ತರ ಸಮ್ಮಖದಲ್ಲಿ ಸೋಮವಾರ ಸಿದ್ಧರಾಮನ ಅಕ್ಷತಾ ಸಮಾರಂಭ ವಿಜೃಂಭಣೆಯಿಂದ ನಡೆಯಿತು.

Advertisement

ತಮಗಾಗಿ ಪ್ರಾಣ ಕೊಡಲೂ ಸಿದ್ಧಳಾದ ಕುಂಬಾರ ಕನ್ನೆಯನ್ನು ಸಿದ್ಧರಾಮರು ತಮ್ಮ ಯೋಗದಂಡದೊಂದಿಗೆ ಮದುವೆ ಮಾಡಿದ್ದರ ಸಂಕೇತವಾಗಿ ಮಕರ ಸಂಕ್ರಮಣದಂದು ಅಕ್ಷತಾ ಸಮಾರಂಭ ನಡೆಯುತ್ತದೆ. ಅಕ್ಷತಾ ಸಮಾರಂಭದ ಅಂಗವಾಗಿ ಏಳು ನಂದಿ ಧ್ವಜಗಳ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು. ಮೆರವಣಿಗೆ ಮೊದಲು ನಂದಿ ಧ್ವಜಗಳಿಗೆ ಎಣ್ಣೆ ಮಜ್ಜನ ಮಾಡಿಸಲಾಯಿತು.

ಸೊನ್ನಲಿಗೆ ಶರಣ ಶಿವಯೋಗಿ ಸಿದ್ಧರಾಮನ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧರಾಮನ ಯೋಗದಂಡವಾಗಿರುವ ನಂದಿ ಧ್ವಜಗಳು, ಪಲ್ಲಕ್ಕಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಿಂದ ಮಂದಿರ ತಲುಪಿದ ನಂತರ ಮಧ್ಯಾಹ್ನ 11:35ಕ್ಕೆ ಸಿದ್ಧರಾಮನ ಅಕ್ಷತೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಪ್ರತಿ ವರ್ಷ ಮಧ್ಯಾಹ್ನ 2:00ರಿಂದ 3:00ರ ವರೆಗೆ ಅಕ್ಷತಾ ಸಮಾರಂಭ ನಡೆಯುತಿತ್ತು. ಆದರೆ ಈ ಬಾರಿ ಅಕ್ಷತಾ ಸಮಾರಂಭ ಆದಷ್ಟು ಬೇಗ ನೆರವೇರಿಸುವ ಪ್ರಯತ್ನ ಮಾಡಿದ್ದರಿಂದ ಇದೇ ಮೊದಲಬಾರಿಗೆ ಸಮಯಕ್ಕೆ ಸರಿಯಾಗಿ ಅಂದರೆ ಮಧ್ಯಾಹ್ನ 12:41ಕ್ಕೆ ಅಕ್ಷತಾ ಸಮಾರಂಭ ನೆರವೇರಿತು. ಅಕ್ಷತಾ ಸಮಾರಂಭದಲ್ಲಿ ಯುವಕ-ಯುವತಿಯರು, ಮಹಿಳೆಯರು, ವಯೋವೃದ್ಧರು, ಚಿಕ್ಕ ಮಕ್ಕಳು ಪಾಲ್ಗೊಂಡಿದ್ದರು.

ಪರಂಪರಗತವಾಗಿ ಬಂದ ರಾಜಶೇಖರ ಹಿರೇಹಬ್ಬು ಹಾಗೂ ಅವರ ಕುಟುಂಬದ ವತಿಯಿಂದ ಗಂಗಾ ಪೂಜೆ, ಸುಗಡಿ ಪೂಜೆ ನೆರವೇರಿಸಲಾಯಿತು. ಮಧ್ಯಾಹ್ನ 12:41ರಿಂದ ಸಮ್ಮತಿ ಕಟ್ಟೆ ಮೇಲೆ ಬೊಲಾ ಹರ್‌… ಬೊಲಾ ಏಕದಾ ಭಕ್ತಲಿಂಗ ಹರ್‌… ಬೊಲಾ, ಶ್ರೀ ಸಿದ್ಧರಾಮೇಶ್ವರ ಮಹಾರಾಜಕಿ ಜೈ ಎಂಬ ನಾಮಘೋಷಗಳ ಮಧ್ಯೆ ಸಿದ್ಧರಾಮನ ಅಕ್ಷತೆ ಸಮಾರಂಭ ಅದ್ಧೂರಿಯಿಂದ ನಡೆಯಿತು. ಅಕ್ಷತೆ ಸಮಾರಂಭದಲ್ಲಿ ಸಿದ್ಧರಾಮನ ಭಕ್ತರು ಬಾರಾ ಬಂದಿ ಬಟ್ಟೆಗಳನ್ನು ಧರಿಸಿ ನೋಡುಗರ ಕಣ್ಮನ ಸೆಳೆದರು. ಸಿದ್ಧರಾಮನ ಅಕ್ಷತೆ ಸಮಾರಂಭದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಮಹಾರಾಜಕೀ ಜೈ ಎಂಬ ಭಕ್ತರ ಜೈ ಘೋಷಣೆಗಳು ಮುಗಿಲು ಮುಟ್ಟಿದವು. ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧೇಶ್ವರ ಮಂದಿರ, ಮಲ್ಲಿಕಾರ್ಜುನ ಮಂದಿರ ಹಾಗೂ 68 ಲಿಂಗಗಳಿಗೆ ಬಣ್ಣ ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಸಿದ್ಧೇಶ್ವರ ಮಂದಿರ ಮತ್ತು ಮಲ್ಲಿಕಾರ್ಜುನ ಮಂದಿರಕ್ಕೆ ವಿವಿಧ ಬಣ್ಣಗಳಿಂದ ಕಂಗೊಳಿಸಿದ್ದರು.

ಸಿದ್ಧರಾಮನ ಯೋಗದಂಡವಾಗಿರುವ ನಂದಿ ಧ್ವಜಗಳು ಮತ್ತು ಪಲ್ಲಕ್ಕಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಿಂದ ನಡೆಯುವ ಕಾರ್ಯಕ್ರಮಗಳಲ್ಲಿ ಹಾಗೂ ಅಕ್ಷತಾ ಸಮಾರಂಭದಲ್ಲಿ ಕಲಾ ಫೌಂಡೇಶನದ ರುಪಾಲಿ ಕುತಾಟೆ, ಕುಮಾರಿ ಶೆಟ್ಟಿ ಅವರ ನೇತೃತ್ವದಲ್ಲಿ ಸುಮಾರು 200 ಕಾರ್ಯಕರ್ತರು ಹಿರೇಹಬ್ಬು ಮಠದಿಂದ ಸಿದ್ಧೇಶ್ವರ ಮಂದಿರದಲ್ಲಿರುವ ಸಮ್ಮತಿ ಕಟ್ಟೆ ವರೆಗೆ ಅಂದರೆ ಸುಮಾರು 3 ಕಿಮೀ ಮೆರವಣಿಗೆ ಮಾರ್ಗದಲ್ಲಿ ರಂಗೋಲಿ ಹಾಕುವ ಮೂಲಕ ನೋಡುಗರ ಮನಸ್ಸು ಪ್ರಸನ್ನಗೊಳಿಸಿದ್ದಾರೆ.

Advertisement

ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧೇಶ್ವರ ಮಂದಿರ, ಮಲ್ಲಿಕಾರ್ಜುನ ಮಂದಿರ ಹಾಗೂ 68 ಲಿಂಗಗಳಿಗೆ ಬಣ್ಣ-ಬಣ್ಣದ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಸಿದ್ಧೇಶ್ವರ ಮಂದಿರ ಮತ್ತು ಮಲ್ಲಿಕಾರ್ಜುನ ಮಂದಿರಕ್ಕೆ ವಿವಿಧ ಬಣ್ಣಗಳಿಂದ ಕಂಗೊಳಿಸಲಾಗಿದೆ. ಅದರಂತೆ ಇದೇ ಮೊದಲ ಬಾರಿಗೆ ಎಲ್ಲ ಧರ್ಮದ ಜನರು ಸ್ವಯಂ ಪ್ರೇರಣೆಯಿಂದ ನಂದಿ ಧ್ವಜಗಳ ಮೆರವಣಿಗೆ ಮಾರ್ಗಗಳಲ್ಲಿ ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡುವ ಮೂಲಕ ಅನೇಕತೆಯಲ್ಲಿ ಏಕತೆ ಮನೋಭಾವದಿಂದ ಜಾತ್ರಾ ಮಹೋತ್ಸವ ಆಚರಿಸಿದರು.

ಸಿದ್ಧೇಶ್ವರ ದರ್ಶನಕ್ಕೆ ಬಂದ ಭಕ್ತರಿಗಾಗಿ ಮಹಾಪ್ರಸಾದ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷವಾಗಿ ಸುಮಾರು 50 ಸಾವಿರ ರೊಟ್ಟಿ ಮಾಡಲಾಗಿದೆ ಎಂದು ಪ್ರಸಾದ ಸಮಿತಿ ಪ್ರಮುಖ ಸಿದ್ಧೇಶ್ವರ ಬಮಣಿ ತಿಳಿಸಿದರು.

ಸಿದ್ಧೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸುರು ಮುನ್ನೆಚ್ಚರಿಕೆಯಾಗಿ ಮಂದಿರದಲ್ಲಿ 40ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಅಲ್ಲದೇ ಮೆರವಣಿಗೆ ಮಾರ್ಗದಲ್ಲಿ 19 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಮಂದಿರ ಸಮಿತಿಯಿಂದ ಸುಮಾರು 150 ಸ್ವಯಂ ಸೇವಕರು ಮತ್ತು 150 ಪೊಲೀಸರನ್ನು ನೇಮಿಸಲಾಗಿದೆ. ಅಲ್ಲದೆ ಭಕ್ತರಿಗಾಗಿ 1 ಕೋಟಿ ರೂ. ಅಪಘಾತ ವಿಮೆ ಯೋಜನೆ ಅಳವಡಿಸಲಾಗಿದೆ ಎಂದು ಸಿದ್ಧೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷ ಧರ್ಮರಾಜ ಕಾಡಾದಿ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿಜಯಕುಮಾರ ದೇಶಮುಖ, ಸಚಿವ ಸುಭಾಷ ದೇಶಮುಖ, ಸಂಸದ ಶರದ ಬನಸೋಡೆ, ಮಾಜಿ ಕೇಂದ್ರ ಗೃಹ ಸಚಿವ ಸುಶೀಲಕುಮಾರ ಶಿಂಧೆ, ಉಜ್ವಲಾ ಶಿಂಧೆ, ಶಾಸಕಿ ಪ್ರಣಿತಿ ಶಿಂಧೆ, ಸಂಸದ ಅಮರ ಸಾಬಳೆ, ಮಾಜಿ ಶಾಸಕ ವಿಶ್ವನಾಥ ಚಾಕೋತೆ, ಜಿಲ್ಲಾಧಿಕಾರಿ ಭೋಸಲೆ, ಪೊಲೀಸ್‌ ಆಯುಕ್ತ ಮಹಾದೇವ ತಾಂಬಡೆ, ಎಸ್‌ಪಿ ಮನೋಜ ಪಾಟೀಲ, ನಗರಸೇವಕರಾದ ಅವಿನಾಶ ಕೋಳಿ, ಗುರುಶಾಂತ ದುತ್ತರಗಾಂವಕರ, ಶಾಸಕ ಸಿದ್ಧರಾಮ ಮೆØೕತ್ರೆ, ಮಾಜಿ ಶಾಸಕ ಸಿದ್ರಾಮಪ್ಪ ಪಾಟೀಲ, ಮೇಯರ್‌ ಶೋಭಾ ಬನಶೆಟ್ಟಿ, ಜಿಪಂ ಉಪಾಧ್ಯಕ್ಷ ಶಿವಾನಂದ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಶಹಾಜಿ ಪವಾರ, ಅಕ್ಕಲಕೋಟ ಬಿಜೆಪಿ ತಾಲೂಕು ಅಧ್ಯಕ್ಷ ಸಚಿನ ಕಲ್ಯಾಣಶೆಟ್ಟಿ, ನಗರ ಸೇವಕ ಜಗದೀಶ ಪಾಟೀಲ, ಸೊಲ್ಲಾಪುರ ಸಿದ್ಧೇಶ್ವರ ಬ್ಯಾಂಕ್‌ ಚೇರಮನ್‌ ಪ್ರಕಾಶ ವಾಲೆ, ಬಸವರಾಜ ಶಾಸ್ತ್ರಿ, ಚೇತನ ನರೂಟೆ, ಗುಂಡಪ್ಪ ಕಾರಬಾರಿ, ನ್ಯಾಯಮೂರ್ತಿ ಮಿಲಿಂದ ಥೋಬಡೆ, ವಿಶ್ವನಾಥ ಆಳಂಗೆ, ಮಲ್ಲಿಕಾರ್ಜುನ ಕಳಕೆ ಪಾಲ್ಗೊಂಡಿದ್ದರು.

ಸೊಲ್ಲಾಪುರ ನಗರದ ಆರಾಧ್ಯ ದೈವ ಶಿವಯೋಗಿ ಸಿದ್ಧರಾಮೇಶ್ವರರ ಜಾತ್ರಾ ಮಹೋತ್ಸವ ಪ್ರತಿ ವರ್ಷ ವಿಜೃಂಭಣೆಯಿಂದ ನಡೆಯುತ್ತದೆ. ಸಿದ್ಧರಾಮನ ಅಕ್ಷತಾ ಸಮಾರಂಭಕ್ಕೆ ಮಹಾರಾಷ್ಟ್ರ ಸೇರಿದಂತೆ ಕರ್ನಾಟಕದ ಲಕ್ಷಾಂತರ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಸಿದ್ಧರಾಮನ ಸಾವಿರಾರು ವಚನಗಳಲ್ಲಿ ಸಂಸ್ಕಾರ ಮತ್ತು ಆಧ್ಯಾತ್ಮಿಕ ಜ್ಞಾನ ಭಂಡಾರವಿದೆ. ಸೊನ್ನಲಿಗೆಯ ಶ್ರೇಷ್ಠ ಶರಣ ಸಿದ್ಧರಾಮೇಶ್ವರರು ಕಾಯಕದ ಜತಗೆ ವಚನಗಳ ಮೂಲಕ ತಮಗೆ ಬೌದ್ಧಿಕ ಜ್ಞಾನ ನೀಡಿದ್ದಾರೆ. ಆದ್ದರಿಂದ ಭಕ್ತರು ದರ್ಶನದ ಜತೆಗೆ ಸಿದ್ಧರಾಮನ ವಚನಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಆಧ್ಯಾತ್ಮಿಕ ಜ್ಞಾನ ದೊರೆಯುತ್ತದೆ. ಶರಣರ ವಚನಗಳಿಂದ ನಮ್ಮ ಬದುಕು ಸುಂದರವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next