Advertisement

ಶಿವಯೋಗಿ ಸಿದ್ದರಾಮರು ದೈವಿ ಸ್ವರೂಪಿ

01:09 PM Jan 16, 2018 | |

ವಿಜಯಪುರ: ಕಲ್ಯಾಣದ ಎಲ್ಲ ಶರಣರಲ್ಲಿ ಅದ್ವಿತೀಯ ಸಾಧನೆ ಮಾಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಶರಣರು ಮಾತ್ರ ದೈವಿ ಸ್ವರೂಪ ಹೊಂದಿದ್ದು ಪೂಜಿಸಲ್ಪಡುವ ಏಕೈಕ ಶರಣ ಸಾಹಿತಿ ಎಂದು ಉಪನ್ಯಾಸಕ ಜಂಬುನಾಥ ಕಂಚ್ಯಾಣಿ ಅಭಿಪ್ರಾಯಪಟ್ಟರು.

Advertisement

ಸೋಮವಾರ ನಗರದ ಕಂದಗಲ್‌ ಹನುಮಂತರಾಯ ರಂಗಮಂದಿರದಲ್ಲಿ, ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ
ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಹಠಯೋಗಿಯಾಗಿ ಹುಟ್ಟಿ ಕರ್ಮಯೋಗಿಯಾಗಿ ಬೆಳೆದು, ಶಿವಯೋಗಿಯಾಗಿ ಸಾಧನೆ ಮಾಡಿದ ಸಿದ್ದರಾಮೇಶ್ವರರು ನಿಷ್ಕಲ್ಮಷ ಯೋಗಿಯಾಗಿ ಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.
 
ಶರಣರಲ್ಲಿ ದೈವಿ ಸ್ವರೂಪಿಯಾಗಿದ್ದ ಸಿದ್ದರಾಮೇಶ್ವರ ಅವರು ತಮ್ಮ ಆರಂಭದ ಜೀವನದಲ್ಲಿ ಕೆರೆ ಕಟ್ಟೆ ನಿರ್ಮಾಣ,
ಅನ್ನದಾಸೋಹ, ದೇಗುಲಗಳ ನಿರ್ಮಾಣ, ಸಾಮೂಹಿಕ ಮದುವೆ ಸೇರಿದಂತೆ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಲ್ಲಿ ತೊಡಗಿದ್ದ ಸಾತ್ವಿಕ ವ್ಯಕ್ತಿಯಾಗಿದ್ದರು. ಕರ್ಮಯೋಗಿಯಾಗಿದ್ದ ಇವರನ್ನು ಅಲ್ಲಮಪ್ರಭು ಅವರು
ಜ್ಞಾನಯೋಗಿಯಾಗಿಸಲು ಪ್ರೇರೇಪಿಸಿದರು. ಬಸವೇಶ್ವರರು ಹಾಗೂ ಚನ್ನಬಸವಣ್ಣನವರು ಶಿವಯೋಗಿಯಾಗಿಸಲು ನೆರವಾಗಿದ್ದಕ್ಕೆ ಸಿದ್ದರಾಮೇಶ್ವರ ತಮ್ಮ ವಚನಗಳ ಮೂಲಕ ಸ್ಮರಿಸುತ್ತಾರೆ. 

ಕೈಲಾಸದ ಬಗ್ಗೆ, ಕುಲಬೇಧ-ಭಾವ, ಜಾತಿ ಪದ್ಧತಿ, ಮೂಢನಂಬಿಕೆಗಳ ನಿರ್ಮೂಲನೆ ಸೇರಿದಂತೆ ಸಾಮಾಜಿಕ ಸಮಸ್ಯೆಗಳ ನಿವಾರಣೆಗಾಗಿ ಸರಳ ಹಾಗೂ ಅರ್ಥಗರ್ಭೀತ ವಚನ ರಚಿಸಿ ಸ್ಮರಣೀಯರಾಗಿದ್ದಾರೆ. ಶರಣರು ರಚಿಸಿರುವ 1.96 ಲಕ್ಷ ವಚನಗಳಲ್ಲಿ 23 ಸಾವಿರ ವಚನಗಳು ಮಾತ್ರ ಲಭ್ಯವಾಗಿದ್ದು, ಇದರಲ್ಲಿ ಶಿವಯೋಗಿ ಸಿದ್ದರಾಮೇಶ್ವರರ 36 ಸಾವಿರ ವಚನಗಳಿದ್ದು, 1700 ವಚನಗಳು ಮಾತ್ರ ಲಭ್ಯವಾಗಿವೆ. 

ವಿವಿಧ 76 ಕ್ಷೇತ್ರದಲ್ಲಿ ಗದ್ದುಗೆ, ಮಠಗಳು ಹಾಗೂ ದೇಗುಲಗಳವನ್ನು ನಿರ್ಮಿಸಿ ಸಿದ್ದರಾಮೇಶ್ವರರನ್ನು ಈಗ ಪೂಜೆ ಮಾಡುತ್ತಿರುವುದು ಅವರ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ. ಅದರಂತೆ ಮಹಿಳೆಯರನ್ನು ದೈವಿ ಸ್ವರೂಪಿಯಾಗಿ ಬಣ್ಣಿಸಿರುವ ಸಿದ್ದರಾಮೇಶ್ವರ ಅವರು ಶರಣರಲ್ಲಿ ಇಂತಹ ವಿಚಾರಧಾರೆ ನೀಡಿರುವ ಅಗ್ರಗಣ್ಯರಾಗಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಡಾ| ಎಚ್‌.ಬಿ. ಬೂದೆಪ್ಪ ಮಾತನಾಡಿ, ನಗರದಲ್ಲಿ ಬೋವಿ ಸಮಾಜ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜದವರು ನಿವೇಶನ ಒದಗಿಸಿದ್ದು, ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ| ಎಂ.ಬಿ. ಪಾಟೀಲ 2 ಕೋಟಿ ರೂ. ನೀಡಿದ್ದಾರೆ ಎಂದರು.
 
ಮೇಯರ್‌ ಸಂಗೀತಾ ಪೋಳ ಸಮಾರಂಭಕ್ಕೆ ಚಾಲನೆ ನೀಡಿದರು. ಕೃಷ್ಣಾ ಕಾಡಾ ಅಧ್ಯಕ್ಷ ಜಕ್ಕಪ್ಪ ಎಡವೆ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಆಝಾದ್‌ ಪಟೇಲ್‌, ಉಪ ಮೇಯರ್‌ ರಾಜೇಶ ದೇವಗಿರಿ, ಬಸವರಾಜ ಅಥಣಿ,  ಅಶೋಕ ಆಲಕುಂಟೆ, ತಹಶೀಲ್ದಾರ್‌ ಎಂ.ಎನ್‌. ಬಳಿಗಾರ, ಐ.ಸಿ. ನಾಗಠಾಣ, ರಾಜುಗೌಡ
ಪೊಲೀಸ್‌ಪಾಟೀಲ ಇದ್ದರು. 

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ ಸ್ವಾಗತಿಸಿದರು. ಶಿಕ್ಷಕ ಹುಮಾಯೂನ್‌ ಮಮದಾಪುರ ನಿರೂಪಿಸಿದರು. ಇದಕ್ಕೂ ಮುನ್ನ ಸಿದ್ದೇಶ್ವರ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ಸುಮಂಗಲೆಯರ ಕುಂಭ ಮೆರವಣಿಗೆಗೆ ಉಪ ವಿಭಾಗಾಧಿಕಾರಿ ಡಾ| ಶಂಕರ ವಣಕ್ಯಾಳ ಚಾಲನೆ ನೀಡಿದರು.

ಭೋವಿ ಸಮಾಜದ ಕೊಡುಗೆ ಶ್ಲಾಘನೀಯ: ಪಾಟೀಲ
ಬಸವನಬಾಗೇವಾಡಿ: ಭೋವಿ ಜನಾಂಗದವರು ಶ್ರಮ ಜೀವಿಗಳಾಗಿದ್ದು ಸಮಾಜಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚರಂಡಿ ನಿಗಮ ಮಂಡಳಿ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಸೋಮವಾರ ಪಟ್ಟಣದ ವಿರಕ್ತಮಠದ ಶಿವಾನುಭವ ಪಂಟದಲ್ಲಿ ತಾಲೂಕಾಡಳಿತ ಹಾಗೂ ತಾಪಂ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮೇಶ್ವರರು ಸಮಾಜದ
ಅನಘ ರತ್ನ ಎಂದು ಬಣ್ಣಿಸಿದರು. ಸಾಹಿತಿ ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ವಚನ ಸಾಹಿತ್ಯದ ಮೂಲಕ ಸಿದ್ದರಾಮೇಶ್ವರರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. 12ನೇ ಶತಮಾನದಲ್ಲಿಯೇ ಸಿದ್ದರಾಮೇಶ್ವರರು ಕೆರೆಗೆ ನೀರು ತುಂಬಿಸುವಂತಹ ಮಹಾನ್‌ ಕಾರ್ಯ ಹಾಗೂ ಸಾಮೂಹಿಕ ವಿವಾಹ ಮಾಡಿ ಜನತೆಗೆ ಅನಕೂಲ ಮಾಡಿದ್ದಾರೆ ಎಂದರು.

ತಹಶೀಲ್ದಾರ್‌ ಎಂ.ಎನ್‌. ಚೋರಗಸ್ತಿ ಪ್ರಾಸ್ತಾವಿಕ ಮಾತನಾಡಿದರು. ಹಿರೇಮಠದ ಶಿವಪ್ರಕಾಶ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಈರಣ್ಣ ಪಟ್ಟಣಶೆಟ್ಟಿ, ಎಸ್‌.ಎಸ್‌. ಹಿಪ್ಪರಗಿ, ಎಸ್‌.ಜಿ. ಭೋಸ್ಲೆ, ಐ.ಎಸ್‌. ನಿಡೋಣಿ, ಗ್ರೇಡ್‌ 2 ತಹಶೀಲ್ದಾರ್‌ ಪಿ.ಜಿ. ಪವಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next