ಅಥಣಿ: ಅಧಿಕಾರ ಇರುವವರೆಗೆ ಅಹಂಕಾರ ಇರುತ್ತೆ ಎಂಬುದು ಶಿವಯೋಗಿ ಮುರುಘೇಂದ್ರ ಸ್ವಾಮೀಜಿಯವರ ಸೂಕ್ಷ್ಮ ದೃಷ್ಟಿಯಾಗಿತ್ತು ಎಂದು ಚಿತ್ರದುರ್ಗದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಅವರು ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಸಮಾರಂಭದ ಪ್ರತಿಗಳನ್ನು ಬಿಡುಗಡೆಗೋಳಿಸಿ, ಅಥಣಿ ಗಚ್ಚಿನಮಠದಲ್ಲಿ ಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಶಿವಯೋಗಿಗಳ ಅಂತರ್ಮುಖೀ ಸಾಧನೆ ಮತ್ತು ಲೋಕ ಚಿಂತನೆ ಕುರಿತು ಮಾತನಾಡಿ, ಅಧಿಕಾರದ ಜಂಜಾಟವೇ ಬೇಡ ಎನ್ನುವ ನಿರ್ಲಿಪ್ತತೆಯನ್ನು ಶಿವಯೋಗಿಗಳು ಹೊಂದಿದ್ದರು.
ಶಿವಯೋಗಿಗಳು ದೂರ ಇದ್ದಿರುವುದಕ್ಕೆ ನಮಗೆಲ್ಲ ಜಿಜ್ಞಾಸೆ ಇದೆ. ಸುಸಂಸ್ಕೃತ ಮತ್ತು ಹಾರ್ದಿಕ ಸಮಾಜವನ್ನು ಕಟ್ಟಿ ಬೆಳೆಸಿದವರು ಶಿವಶರಣರು. ಅದರಲ್ಲಿ ಶಿವಯೋಗಿಗಳು ಎಲ್ಲರ ಮನವನ್ನು ಬೆಳಗುವುದರ ಮುಖೇನ ಜನರ ಜೀವನವನ್ನು ಪಾವನಗೊಳಿಸಿದರು.ಅವರು ಅಂತರ್ ಮುಖೀಯಾಗಿದ್ದರು. ದಿನಕ್ಕೊಮ್ಮೆಯಾದರು ಭಜನೆ, ಪ್ರಾರ್ಥನೆ ಮಾಡುವುದರ ಜೊತೆ ಆಧ್ಯಾತ್ಮ ಯಾನ ಮಾಡಿ ಅಂತರ್ ಮುಖೀಯಾಗಬೇಕು. ಇಲ್ಲವಾದರೆ ಜೀವನ ಜ್ವಾಲಾಮುಖೀಯಾಗುತ್ತೆ ಎಂದವರು. ಎಲ್ಲ ದುಃಖ-ದುಮ್ಮಾನ ಮರೆಯಲು ಶಿವಯೋಗಗಳ ಮತ್ತು ಬಸವಣ್ಣವರ ದಾರಿಯಲ್ಲಿ ನಡೆಯಬೇಕು ಎಂದರು.
ಗೋಕಾಕದ ಶೂನ್ಯಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಬಿದ್ದವರನ್ನು, ತುಳಿತಕ್ಕೊಳಗಾದವರನ್ನು ಎತ್ತಿ ಹಿಡಿಯುವುದೇ ಶಿವಯೋಗಿ ಮುರುಘೇಂದ್ರ ಸ್ವಾಮಿಗಳ ಉದ್ದೇಶವಾಗಿತ್ತು. ಶಿವಯೋಗಿಗಳ ಪರಂಪರೆಯನ್ನು ಪಾಲಿಸುವ ಮೂಲಕ ಮುರುಘಾ ಶರಣರು ಸಹ ಬಿದ್ದವರನ್ನು, ತುಳಿತಕ್ಕೋಳಗಾದವರನ್ನು ಮತ್ತು ದಲಿತರನ್ನು ಎತ್ತಿ ಹಿಡಿಯುವ ಮೂಲಕ ಬಸವ ಪರಂಪರೆಯನ್ನು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
ಸಾಹಿತಿ ಬಾಳಾಸಾಬ ಲೋಕಾಪೂರ ಮಾತನಾಡಿ, ಅಹಂ ದಾಟಿದಾಗ ಸೋಹಂ ಬರುತ್ತೆ. ಸೋಹಂ ದಾಟಿದಾಗ ದಾಸೋಹ ಮತ್ತು ಶರಣ ಸಂಸ್ಕೃತಿ ಬರುತ್ತೆ. ಶರಣ ಸಂಸ್ಕೃತಿ ಬಹುತ್ವ ಸಂಸ್ಕೃತಿ, ಸಮಾನತೆ ಸಂಸ್ಕೃತಿಯಾಗಿದೆ. ಶರಣ ಸಂಸ್ಕೃತಿ ನಿರ್ದಿಷ್ಟ ಜನಾಂಗಕ್ಕೆ ಸೀಮಿತವಾಗದೆ ಸಮಸ್ತ ಮನುಕುಲಕ್ಕೆ ಶಾಂತ ಪರಂಪರೆಯಾಗಿದೆ ಎಂದರು.
ಚನ್ನಬಸವಸ್ವಾಮಿಗಳು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮುಜಾರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಬ ಜೊಲ್ಲೆ, ಶಾಸಕ ಶಿವರಾಯಗೌಡ, ಶಿವಬಸವ ಸ್ವಾಮೀಜಿ, ರಾವಸಾಬ ಐಹೊಳೆ, ರಾಜೇಂದ್ರಸಿಂಗ ಶೇಖಾವತ, ನಾರಗೌಂಡ ಪಾಟೀಲ, ರಾಮನಗೌಡ ಪಾಟೀಲ ಇದ್ದರು. ಶಿವಾನಂದ ದಿವಾನಮಳ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು.