Advertisement
ಶ್ರೀ ಅರಕೇಶ್ವರಸ್ವಾಮಿಗೆ ವಿಶೇಷ ಪೂಜೆ: ಮಂಡ್ಯದ ಗುತ್ತಲು ಸಮೀಪವಿರುವ ಶ್ರೀ ಅರಕೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 4.30ರಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿಷೇಕ ನಡೆದವು. ಕ್ಷೀರ, ಮೊಸರು, ಎಳನೀರು, ಗಂಧ, ಜೇನುತುಪ್ಪ, ಸಕ್ಕರೆ, ನಿಂಬೆಹಣ್ಣು, ಪಂಚಾಮೃತಾಭಿಷೇಕ, ಅರಿಶಿನ-ಕುಂಕುಮ, ಬಿಲ್ವಪತ್ರ ಅರ್ಚನೆ ಮಾಡಲಾಯಿತು. ಮುಂಜಾನೆಯಿಂದಲೇ ಭಕ್ತರ ದಂಡು ದೇವಾಲಯದತ್ತ ಹರಿದುಬಂದಿತ್ತು. ಶ್ರೀ ಅರಕೇಶ್ವರ ಸ್ವಾಮಿಗೆ ಪ್ರಥಮ ಪೂಜೆ ಸಲ್ಲಿಸಿ ತೀರ್ಥ-ಪ್ರಸಾದ ಸ್ವೀಕರಿಸಿ ಧನ್ಯತಾ ಭಾವದಿಂದ ನಡೆಯುತ್ತಿದ್ದರು. ದೇವಾಲಯದಲ್ಲಿ ರಾತ್ರಿ ಪೂರ್ತಿ ಶಿವ ಪಾರಾಯಣ ನಡೆಯಿತು.
Related Articles
Advertisement
ತಾಲೂಕಿನ ಸಂತೆಕಸಲಗೆರೆ ಗ್ರಾಮದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದಲ್ಲಿ 17ನೇ ವರ್ಷದ ಶನೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದೆ. ಗಣಪತಿ ಹೋಮ, ರುದ್ರಹೋಮ, ಚಂಡಿಕಾಹೋಮ ಮತ್ತು ಪೂರ್ಣಾಹುತಿ ನಡೆಯಲಿದ್ದು, ಬಳಿಕ ಕರಗ ಮಹೋತ್ಸವ ಹಾಗೂ ಶನೇಶ್ವರಸ್ವಾಮಿ ಮುತ್ತಿನ ಪಲ್ಲಕ್ಕಿ ರಥೋತ್ಸವ, ಬಾಯಿಬೀಗ, ಮೀಸಲು ನೀರು ತರಲಾಯಿತು. ಹರಿಕೆ ಮುಡಿ, ಪೂಜಾ ಕುಣಿತ, ವೀರಗಾಸೆ, ದೊಣ್ಣೆವರಸೆ ಮತ್ತು ಕೋಲಾಟ ಕಾರ್ಯಕ್ರಮಗಳು ನಡೆಯಲಿದೆ.
ಮದ್ದೂರು ತಾಲೂಕಿನ ಹನುಮಂತನಗರದ ಶ್ರೀ ಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಜಾತ್ರಾ ಮಹೋತ್ಸವ ನಡೆಯಲಿದೆ. ದನಗಳ ಜಾತ್ರೆ, ರಥೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪೂಜಾ ವಿಧಿ ವಿಧಾನಗಳು ನಡೆದವು. ಮದ್ದೂರು ತಾಲೂಕು ವೈದ್ಯನಾಥಪುರ ಗ್ರಾಮದಲ್ಲಿರುವ ಶ್ರೀ ವೈಧ್ಯನಾಥೇಶ್ವರ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು. ಸಬ್ಬನಹಳ್ಳಿ ಗ್ರಾಮದ ಶ್ರೀ ಸೀತಾಳಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಯಿತು.
ಮಂಗಳವಾರದಿಂದ ಐದು ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಮಂಗಳವಾರ ಬಂಡಿಉತ್ಸವ, ಬುಧವಾರ ಕೊಂಡೋತ್ಸವ, ಗುರುವಾರ ಮಡೆ ಮತ್ತು ಬಾಯಿಬೀಗ, ಶುಕ್ರವಾರ ರಥೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ನಾಗಮಂಗಲ ತಾಲೂಕಿನ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯ, ಆದಿಚುಂಚನಗಿರಿ ಮಠದ ಶ್ರೀ ಭೈರವೇಶ್ವರ, ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲೂ ವಿವಿಧ ಪೂಜಾ ಕಾರ್ಯಗಳನ್ನು ನಡೆಸಲಾಯಿತು. ಭಕ್ತರ ದಂಡು ಹರಿದು ಬಂದು ದರ್ಶನ ಪಡೆದರು.
ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಭ ದೇವಾಲಯದಲ್ಲಿರುವ ಶಿವನಗುಡಿಯಲ್ಲಿ ವಿಶೇಷ ಪೂಜೆ ನಡೆಯಿತು. ಘೋಸಾಯಿಘಾಟ್‌ನ ಶ್ರೀ ಕಾಶಿವಿಶ್ವಾನಾಥ, ಚಂದ್ರವನದಲ್ಲಿರುವ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಾಂಡವಪುರ, ಕೆ.ಆರ್. ಪೇಟೆ, ಮಳವಳ್ಳಿ ತಾಲೂಕುಗಳಲ್ಲಿರುವ ಎಲ್ಲ ಶಿವ ದೇವಳಗಳಲ್ಲಿ ವಿಶೇಷ ಪೂಜೆ, ಭಜನೆ, ಹರಿಕಥೆ, ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಗಳು ಸಾಂಗೋಪಸಾಂಗವಾಗಿ ನೆರವೇರಿದವು. ಜಿಲ್ಲೆಯ ಎಲ್ಲ ಶಿವಾಲಯಗಳಲ್ಲೂ ಶಿವರಾತ್ರಿ ಹಬ್ಬದ ಅಂಗವಾಗಿ ವಿಶೇಷ ಪೂಜೆ, ಭಜನೆ, ಹರಿಕಥೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾಗರಣೆ ಸೇರಿದಂತೆ ವಿವಿಧ ಪೂಜೆಗಳು ನಡೆದವು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.