Advertisement
“ನಮ್ಮ ಆಯ್ಕೆ ಶಿವಣ್ಣ ಬಿಟ್ಟು ಬೇರೆ ಯಾರೂ ಆಗಿರಲಿಲ್ಲ’ ಹೀಗೆ ಹೇಳಿಕೊಳ್ಳುತ್ತಾರೆ ಜಿವಿಆರ್ ವಾಸು. ವಾಸು ಬೇರಾರು ಅಲ್ಲ, ಬಿಡುಗಡೆಗೆ ಸಿದ್ಧವಾಗಿರುವ “ಕವಚ’ ಚಿತ್ರದ ನಿರ್ದೇಶಕರು. ರಾಮ್‌ಗೊಪಾಲ್ ವರ್ಮಾ ಅವರ ಜೊತೆ ಸಹಾಯಕ ನಿರ್ದೇಶಕರಾಗಿದ್ದ ವಾಸು ಅವರು ಈಗ ಕನ್ನಡದಲ್ಲಿ “ಕವಚ’ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರ ಡಿಸೆಂಬರ್ ಮೊದಲ ವಾರದಲ್ಲಿ ತೆರೆಕಾಣುತ್ತಿದ್ದು, ಈಗಾಗಲೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ.
Related Articles
Advertisement
ಶಿವಣ್ಣ ಖುಷಿಯಿಂದ ಒಪ್ಪಿದ ಚಿತ್ರ: “ಕವಚ’ ಚಿತ್ರದ ಪಾತ್ರವನ್ನು ಶಿವರಾಜಕುಮಾರ್ ತುಂಬಾ ಖುಷಿಯಿಂದ ಒಪ್ಪಿದರಂತೆ. ಅದಕ್ಕೆ ಕಾರಣ ಅದರಲ್ಲಿನ ಪಾತ್ರ. ಮೊದಲ ಬಾರಿಗೆ ಶಿವರಾಜಕುಮಾರ್ ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಾರೆ. ಶಿವರಾಜಕುಮಾರ್ ಅವರಿಗೆ ಈ ಪಾತ್ರ ಮಾಡುವ ಮೊದಲು ಸಹಜವಾಗಿಯೇ ಒಂದಷ್ಟು ಭಯವಿತ್ತಂತೆ. ಏಕೆಂದರೆ ಈ ತರಹದ ಪಾತ್ರ ಅವರು ಈ ಹಿಂದೆಂದೂ ಮಾಡಿಲ್ಲ.
ಆದರೆ, ಸೆಟ್‌ಗೆ ಹೋದ ನಂತರ ಒಬ್ಬೊಬ್ಬರು ಒಂದಷ್ಟು ಹೇಳಿಕೊಡುತ್ತಲೇ ಶಿವಣ್ಣ ಪಾತ್ರ ಪೋಷಣೆ ಮಾಡಿದ್ದಾರೆ. ಪಾತ್ರದ ಬಗ್ಗೆ ಮಾತನಾಡುವ ಶಿವಣ್ಣ,”ಸೆಟ್‌ಗೆ ಯಾವುದೇ ಪೂರ್ವತಯಾರಿ ಇಲ್ಲದೇ ಹೋದೆ. ಅಲ್ಲಿ ಏನು ಹೇಳಿಕೊಡುತ್ತಿದ್ದರೊ, ಅದನ್ನೇ ಮಾಡುತ್ತಾ ಹೋದೆ. ಅಂಧರು ಅಂದಾಕ್ಷಣ, ಎಲ್ಲರೂ ಒಂದೇ ರೀತಿ ಇರಲ್ಲ. ಇಲ್ಲಿ ಸಾಗರ ಎಂಬ ಊರಿನ ಬಗ್ಗೆ ಅವನಿಗೆ ಎಲ್ಲವೂ ಗೊತ್ತಿರುತ್ತೆ.
ಹಾಗಾಗಿ, ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ವೇಗವಾಗಿ ಅವನ ಪಾಡಿಗೆ ಅವನು ನಡೆದಾಡುತ್ತಿರುತ್ತಾನೆ. ಇನ್ನು, ಆ ಪಾತ್ರ ನಗುವುದು, ಅಳುವುದು ಓವರ್ ಆಗುತ್ತಾ ಎಂಬ ಪ್ರಶ್ನೆ ಇತ್ತು. ಮಾನಿಟರ್ ನೋಡಿ, ನೋಡಿ ನೈಜತೆ ಕಟ್ಟಿಕೊಡುವ ಉದ್ದೇಶದಿಂದ ಪಾತ್ರ ನಿರ್ವಹಿಸುತ್ತಿದ್ದೆ. ಜನ ಈ ಸಿನಿಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಶಿವಣ್ಣ ಮಾತು.
ಅದ್ಭುತ ಅನುಭವ: “ಕವಚ’ ಚಿತ್ರದಲ್ಲಿ ಕೃತಿಕಾ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಬಾರಿಗೆ ಶಿವರಾಜಕುಮಾರ್ ಜೊತೆ ನಟಿಸಿರುವ ಅವರು ಸಹಜವಾಗಿಯೇ ಎಕ್ಸೆ„ಟ್ ಆಗಿದ್ದಾರೆ. ಅದೇ ಕಾರಣದಿಂದ “ಕವಚ’ ನನ್ನ ಬದುಕಿನಲ್ಲಿ ಮರೆಯಲಾರದ ಸಿನಿಮಾ ಎನ್ನುತ್ತಾರೆ. “ಚಿತ್ರದ ತುಂಬಾ ಸಿನಿಮಾ ಪ್ರೀತಿಸುವ ಕಲಾವಿದರು, ತಾಂತ್ರಿಕ ವರ್ಗ ಇದ್ದಿದ್ದರಿಂದಲೇ ಈ ಸಿನಿಮಾ ಇಷ್ಟೊಂದು ಚೆನ್ನಾಗಿ ಬರೋದಕ್ಕೆ ಸಾಧ್ಯವಾಯಿತು.
ಚಿತ್ರದ ಸೆಟ್‌ನಲ್ಲಿ ಪ್ರತಿಯೊಬ್ಬರಿಂದಲೂ, ಒಂದೊಂದು ವಿಷಯಗಳನ್ನು ಕಲಿತುಕೊಂಡಿದ್ದೇನೆ. ಒಂದೇ ಚಿತ್ರದ ಸಾಕಷ್ಟು ಅನುಭವಗಳನ್ನು ಕೊಟ್ಟಿದೆ. ಈ ಚಿತ್ರದಲ್ಲಿ ರೇವತಿ ಎಂಬ ಪಾತ್ರವನ್ನು ನಿರ್ವಹಿಸಿದ್ದೇನೆ. ಪ್ರತಿಯೊಂದನ್ನೂ ಸೂಕ್ಷ್ಮವಾಗಿ ಗಮನಿಸುವ ತುಂಬ ಪ್ರಬುದ್ಧ ನನ್ನದು. ಎಲ್ಲಾ ಪಾತ್ರಗಳು ತುಂಬ ಸಹಜವಾಗಿರುವುದರಿಂದ, ಚಿತ್ರ ಕೂಡ ತುಂಬ ಚೆನ್ನಾಗಿ ಬಂದಿದೆ.
ಕನ್ನಡ ಪ್ರೇಕ್ಷಕರು ಇಂಥ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುತ್ತಾರೆ’ ಎಂಬ ವಿಶ್ವಾಸವಿದೆ ಎನ್ನುತ್ತಾರೆ ಕೃತಿಕಾ. ಶಿವರಾಜಕುಮಾರ್ ಅವರೊಂದಿಗೆ ಇಶಾ ಕೊಪ್ಪಿಕರ್, ರವಿಕಾಳೆ, ರಾಜೇಶ್ ನಟರಂಗ, ವಸಿಷ್ಠ ಸಿಂಹ, ಬೇಬಿ ಮೀನಾಕ್ಷಿ, ಜಯಪ್ರಕಾಶ್ ಮೊದಲಾದ ಕಲಾವಿದರ ತಾರಾಗಣವಿದೆ. “ಹೆಚ್.ಎಂ.ಎ ಸಿನಿಮಾ’ ಬ್ಯಾನರ್‌ನಲ್ಲಿ ಎಂ.ವಿ.ವಿ ಸತ್ಯ ನಾರಾಯಣ್ “ಕವಚ’ ಚಿತ್ರವನ್ನು ನಿರ್ಮಿಸಿದ್ದಾರೆ.
“ಕವಚ’ದ ದೃಶ್ಯಗಳನ್ನು ರಾಹುಲ್ ಶ್ರೀವಾತ್ಸವ್ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದರೆ, ಜೊ.ನಿ ಹರ್ಷ ಚಿತ್ರದ ಸಂಕಲನ ಕಾರ್ಯವನ್ನು ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಇದೆ. ಕೆ. ಕಲ್ಯಾಣ್, ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಚಿತ್ರದ ಹಾಡುಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ರವಿವರ್ಮ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ.