Advertisement

ಹೊನ್ನಿನ ಮೊಗದ ಮುಕ್ಕಣ್ಣನ ಶಿವರಾತ್ರಿ

06:08 PM Feb 20, 2020 | Lakshmi GovindaRaj |

ಮಹಾ ಶಿವರಾತ್ರಿಯಂದು ಮೈಸೂರು ಅರಮನೆ ಆವರಣದಲ್ಲಿರುವ ಶ್ರೀ ತ್ರಿಣೇಶ್ವರಸ್ವಾಮಿಯನ್ನು (ಮುಕ್ಕಣ್ಣ) ನೋಡುವುದೇ ಒಂದು ಚೆಂದ. ಬಂಗಾರದ ಮುಖ ಹೊತ್ತು ಫ‌ಳಗುಟ್ಟುತ್ತಿರುತ್ತಾನೆ. ಮೈಸೂರಿನ ದೊಡ್ಡ ಕೆರೆ ಏರಿಯ ಮೇಲೆ ಅರಮನೆ ನಿರ್ಮಿಸುವ ಮುಂಚೆಯೇ ಇಲ್ಲಿ ತ್ರಿಣೇಶ್ವರ ಸ್ವಾಮಿ ಮತ್ತು ಕೋಡಿ ಸೋಮೇಶ್ವರ ಸ್ವಾಮಿ ದೇಗುಲಗಳನ್ನು 16ನೇ ಶತಮಾನದಲ್ಲಿ ರಾಜ ಒಡೆಯರ್‌ ಆಳ್ವಿಕೆಯ ಕಾಲದಲ್ಲಿ ಕಟ್ಟಿಸಲಾಗಿತ್ತು. ದ್ರಾವಿಡ ಶೈಲಿಯ ದೇಗುಲ ಇದು. ಸಾಮಾನ್ಯವಾಗಿ ದೇಗುಲಗಳು ಪೂರ್ವಾಭಿಮುಖವಾಗಿದ್ದರೆ, ಶಿವನ ಸ್ವರೂಪಿ ಮೂರು ಕಣ್ಣಿನ ದೈವ ತ್ರಿಣೇಶ್ವರ ಸ್ವಾಮಿ ದೇಗುಲ ಪಶ್ಚಿಮಾಭಿಮುಖವಾಗಿದೆ.

Advertisement

ತ್ರಿಣೇಶ್ವರನ ಅಂಗಳದಲ್ಲಿ…: ದೇಗುಲ ಪ್ರಕಾರದ ಸುತ್ತಲೂ ಪಾರ್ವತಿ, ಸೂರ್ಯ ನಾರಾಯಣ ಮತ್ತು ಶಂಕರಾಚಾರ್ಯರ ವಿಗ್ರಹಗಳು ಮತ್ತು ಹಲವಾರು ಲಿಂಗಗಳು ಇವೆ. ದೇವಾಲಯದ ಮಹಾದ್ವಾರದ ಒಳಗಿನ ಗೂಡುಗಳಲ್ಲಿ ಗಣಪತಿ ಮತ್ತು ಭೈರವನ ಮೂರ್ತಿಗಳಿವೆ. ನವರಂಗದಲ್ಲಿ ಎರಡು ಪ್ರವೇಶದ್ವಾರಗಳಿದ್ದು, ಒಂದು ಪಶ್ಚಿಮ ಮತ್ತು ಇನ್ನೊಂದು ದಕ್ಷಿಣಕ್ಕಿದೆ. ಪ್ರವೇಶದ್ವಾರದ ಎಡಭಾಗದಲ್ಲಿ ಸುಮಾರು ಅರ್ಧ ಮೀಟರ್‌ ಎತ್ತರವಿರುವ ತೃಣಬಿಂದು ಮಹರ್ಷಿಯ ಪ್ರತಿಮೆ ಇದೆ. “ತೃಣಬಿಂದು ಮಹರ್ಷಿಗಳು ಈ ಸ್ಥಳದಲ್ಲಿ ಶಿವನಿಗಾಗಿ ತಪಸ್ಸು ಮಾಡಿದಾಗ ಇಲ್ಲಿಯೇ ಶಿವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿ ತ್ರಿಣೇಶ್ವರನನ್ನು ಪ್ರತಿಷ್ಠಾಪಿಸಿದರು ಎಂದು ಸ್ಥಳ ಪುರಾಣ ಇದೆ’ ಎನ್ನುತ್ತಾರೆ, ತ್ರಿಣೇಶ್ವರ ಸ್ವಾಮಿ ದೇಗುಲದ ಅಂಗಳದಲ್ಲಿರುವ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಅರ್ಚಕ ಶ್ರೀಹರಿ ಅವರು.

ಮುಖವಾಡ ಹೇಗಿದೆ?: ತ್ರಿಣೇಶ್ವರ ಸ್ವಾಮಿಗೆ ತೊಡಿಸುವ ಚಿನ್ನದ ಮುಖವಾಡ 11 ಕಿಲೊ (716 ತೊಲ) ತೂಗುತ್ತದೆ. ಅಪರಂಜಿ ಚಿನ್ನದ ಈ ಮುಖವಾಡದಲ್ಲಿ ಶಿವನ ತಲೆಯ ಮೇಲೆ ಗಂಗೆ, ಆಕೆಗೆ ಮೂಗುತಿ, ಓಲೆ ಇದೆ. ಶಿವನಿಗೆ ಎಡಭಾಗದಲ್ಲಿ ಕರ್ಣಕುಂಡಲ, ಬಲಭಾಗದಲ್ಲಿ ಕಾಂತಕ (ಲಾಳಾಕೃತಿ), ತಲೆಯ ಮೇಲೆ ಬೆಳ್ಳಿಯ ಚಂದ್ರ… ಹೀಗೆ ಚಿನ್ನದ ಕೊಳಗದ ಮೂರು ಭಾಗಗಳಿದ್ದು, ವರ್ಷಪೂರ್ತಿ ಜಿಲ್ಲಾ ಖಜಾನೆಯಲ್ಲಿರಿಸಲಾಗುತ್ತದೆ. ಮಹಾ ಶಿವರಾತ್ರಿಯ ಹಿಂದಿನ ದಿನ ಜಿಲ್ಲಾ ಖಜಾನೆಯಿಂದ ತಂದು ದೇವಸ್ಥಾನದ ಆಡಳಿತ ವರ್ಗಕ್ಕೆ ಚಿನ್ನದ ಕೊಳಗವನ್ನು ಒಪ್ಪಿಸಲಾಗುತ್ತದೆ. ಮಹಾಶಿವರಾತ್ರಿ­ಯಂದು ಶಿವನಿಗೆ ಚಿನ್ನದ ಕೊಳಗ ಧಾರಣೆ ಮಾಡಿ, ವಿಶೇಷ ಪೂಜೆ ಸಲ್ಲಿಸಿ ಹಗಲು- ರಾತ್ರಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತೆ. ಶಿವರಾತ್ರಿ ಮುಗಿದ ಮೇಲೆ ಚಿನ್ನದ ಕೊಳಗವನ್ನು ಮತ್ತೆ ಜಿಲ್ಲಾ ಖಜಾನೆಗೆ ಒಪ್ಪಿಸಲಾಗುತ್ತದೆ.

ಪುತ್ರ ಸಂತಾನದ ನೆನಪಿಗೆ ಚಿನ್ನದ ಮುಖವಾಡ: ಶಿವರಾತ್ರಿಯಲ್ಲಿ ತ್ರಿಣೇಶ್ವರ ಧರಿಸುವ ಮುಖವಾಡಕ್ಕೂ ಒಂದು ಕಥೆ ಇದೆ. ಮೈಸೂರು ಸಂಸ್ಥಾನದ ಕೊನೆಯ ಮಹಾರಾಜರಾದ ಶ್ರೀ ಜಯಚಾಮರಾಜೇಂದ್ರ ಒಡೆಯರ್‌, ತಮಗೆ ಪುತ್ರ ಸಂತಾನವಾದ ಸವಿನೆನಪಿಗಾಗಿ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಹುಟ್ಟಿದ) 1953ರಲ್ಲಿ ಅರಮನೆ ಕೋಟೆಯಲ್ಲಿರುವ ಶ್ರೀ ತ್ರಿಣೇ ಶ್ವರ ಸ್ವಾಮಿ, ನಂಜನಗೂಡಿನ ಶ್ರೀ ಕಂಠೇಶ್ವರ ಸ್ವಾಮಿ ಹಾಗೂ ಮಲೆ ಮಹದೇಶ್ವರ ಸ್ವಾಮಿಗೆ ಚಿನ್ನದಲ್ಲಿ ಸುಂದರವಾದ ಕೊಳಗ (ಮುಖವಾಡ) ಮಾಡಿಸಿಕೊಟ್ಟಿದ್ದಾರೆ.

* ಗಿರೀಶ್‌ ಹುಣಸೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next