Advertisement
ಬೇಡಿ ಬಂದ ಭಕ್ತರ ಇಷ್ಟಾರ್ಥ ನೆರವೇರಿಸುವ ತಪೋನಿಷ್ಠೆಯ ಸಿದ್ಧಿ ರೂಪವಾಗಿ ಉದ್ಭವವಾದ ಗಂಗೆಯು ನೆಲೆಸಿರುವ ಶ್ರೀ ಕ್ಷೇತ್ರ ಸಿದ್ಧಗಂಗೆಯಲ್ಲಿ ಕ್ಷೇತ್ರದ ಆರಾಧ್ಯ ದೈವ ಸಿದ್ಧಲಿಂಗೇಶ್ವರ ಸ್ವಾಮಿಯವರ ರಥೋತ್ಸವದಲ್ಲಿ ಸಾವಿರಾರು ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೆ ಭಾಗವಹಿಸಿ ರಥಕ್ಕೆ ಬಾಳೆಹಣ್ಣು, ದವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.
Related Articles
Advertisement
ನೆತ್ತಿ ಸುಡುವ ಬಿಸಿಲಿನ ಝಳವನ್ನು ಲೆಕ್ಕಿಸದೆ ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಹಲವು ಸಂಘ-ಸಂಸ್ಥೆಗಳಿಂದ ಪಾನಕ, ನೀರು, ಮಜ್ಜಿಗೆ ವಿತರಿಸಲಾಯಿತು. ರಥೋತ್ಸವದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಅಮೂಲ್ಯ ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ವಿವಿಧ ಮಠಾಧೀಶರುಗಳು ಸೇರಿದಂತೆ ಅನೇಕ ಗಣ್ಯರು, ಭಕ್ತರು ಭಾಗವಹಿಸಿದ್ದರು.
ಇಂದು ಬೆಳ್ಳಿ ಪಲ್ಲಕ್ಕಿ ಉತ್ಸವ: ಬುಧವಾರ ರಾತ್ರಿ 11 ಗಂಟೆಗೆ ಪ್ರಸಿದ್ಧ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಮಾ.7ರಂದು ತೆಪ್ಪೋತ್ಸವ ಮತ್ತು ಪಂಚಬ್ರಹ್ಮೋತ್ಸವಗಳು ನಡೆಯಲಿವೆ. ಜಾತ್ರೆಯ ಅಂಗವಾಗಿ ನಡೆಯುತ್ತಿರುವ ರಾಜ್ಯ ಮಟ್ಟದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜನ ಮನ ಸೆಳೆಯುತ್ತಿವೆ.
ಜಾತ್ರೆಯ ಅಂಗವಾಗಿ ಮಠದ ಆವರಣದಲ್ಲೆಲ್ಲಾ ಬಗೆ ಬಗೆಯ ವಸ್ತುಗಳ ಮಾರಾಟ ನಡೆಯುತ್ತಿದೆ. ಜಾತ್ರೆಗೆ ಬಂದವರು ಕಡಲೆ ಪುರಿಕೊಳ್ಳುವುದು ವಿಶೇಷ. ಕಡಲೆಪುರಿ ಅಂಗಡಿಗಳೇ ಹೆಚ್ಚಾಗಿದ್ದು, ಸಾವಿರಾರು ಮೂಟೆ ಪುರಿ, ಬಗೆ ಬಗೆಯ ಕಾರಾ, ಚಕುಲಿ, ಕಡಲೆಬೀಜ, ಕಡ್ಲೆ, ಬತಾಸು, ಜಿಲೇಬಿ, ಬೋಂಡಾ, ವಡೆ ಬಜ್ಜಿ, ಹೀಗೆ ಹಲವು ತಿಂಡಿ ತಿನ್ನಿಸುಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.