Advertisement

ಜಿಲ್ಲಾದ್ಯಂತ ಶ್ರದ್ಧಾ ಭಕ್ತಿಯ ಶಿವರಾತಿ

05:51 PM Feb 14, 2018 | |

ತುಮಕೂರು: ಜಿಲ್ಲಾದ್ಯಂತ ಮಂಗಳವಾರ ಸಡಗರ ಸಂಭ್ರಮದಿಂದ ಭಕ್ತರು ಮಹಾಶಿವರಾತ್ರಿ ಹಬ್ಬವನ್ನು ಆಚರಿಸಿದರು.  ನಗರದ ಬಿ.ಎಚ್‌ರಸ್ತೆಯಲ್ಲಿರುವ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಸಾಮೂಹಿಕ ಅಭಿಷೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆದವು.

Advertisement

ಸಾವಿರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡಿ ಶಿವಲಿಂಗಗಳ ಮೇಲೆ ಜಲಾಭಿಷೇಕ, ಹಾಲಿನ ಅಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಅರ್ಚನೆಗಳನ್ನು ಮಾಡುವ ಮೂಲಕ ದೇವರಲ್ಲಿ ತಮ್ಮ ಇಷ್ಟಾರ್ಥಗಳ ಸಿದ್ದಿಗಾಗಿ ಪ್ರಾರ್ಥಿಸಿದರು. ನಗರದ ಸರಪಳಿಸ್ವಾಮಿ ಮಠದಲ್ಲಿ ಕೈಲಾಸದಲ್ಲಿ ಶಿವ ಅಲಂಕಾರ, ಜ್ಯೋತಿರ್ಲಿಂಗ ಅಲಂಕಾರ ಏರ್ಪಡಿಸಲಾಗಿತ್ತು. 

ಬನಶಂಕರಿ ನಗರದ ಈಶ್ವರ ದೇವಾಲಯದಲ್ಲಿ ಪಂಚಮುಖೀ ಈಶ್ವರನನ್ನು ಪ್ರತಿಷ್ಠಾಪಿಸಿ ಸಾವಿರಾರು ಭಕ್ತರು ಸಾಮೂಹಿಕ ಪೂಜೆ ಸಲ್ಲಿಸಿದರು. ಹೀಗೆ ಹಲವಾರು ಕಡೆಗಳಲ್ಲಿ ಶಿವ ಪೂಜಾ ಕಾರ್ಯಕ್ರಮಗಳು ಜರುಗಿದವು ಟಿಜಿಎಂಸಿ ಬ್ಯಾಂಕ್‌ ಆವರಣದ ಮಹಾಲಕ್ಷ್ಮೀ ದೇವಾಲಯದಲ್ಲಿ ಶಿವನ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ವಾಸವಿ ದೇವಾಲಯದಲ್ಲಿ, ಹೊರಪೇಟೆ ನೀಲಕಂಠಸ್ವಾಮಿ ದೇವಾಲಯದಲ್ಲಿ, ಮಹಾಗಣಪತಿ ನವಗ್ರಹ ದೇವಾಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ಮಹಾಶಿವರಾತ್ರಿ ಪೂಜೆಗಳು ನಡೆದವು.
 
ನಗರದ ಬಿ.ಹೆಚ್‌.ರಸ್ತೆಯ ಸರ್ಕಾರಿ ಜೂನಿಯರ್‌ ಕಾಲೇಜು ಮುಂಭಾಗದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ಮಹಾ
ವಿದ್ಯಾಲಯದ ವತಿಯಿಂದ ಮಹಾ ಶಿವರಾತ್ರಿ ಅಂಗವಾಗಿ ಪಂಚಲಿಂಗ ದರ್ಶನದ ಮೆರ ವಣಿಗೆಯು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. 

ನಗರದ ಕುಣಿಗಲ್‌ ರಸ್ತೆಯ ಬನಶಂಕರಿಯಲ್ಲಿನ ಮಳೆ ಬಸವಣ್ಣ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಪಂಚಲಿಂಗ ದರ್ಶನ, ಬಸವನ ಮೇಲೆ ಕುಳಿತ ಶಿವ, ಹಾಗೂ ದೇವಾಲಯದ ಆವರಣದಲ್ಲಿರುವ ಬೃಹತ್‌ ಶಿವನ ಪ್ರತಿಮೆಗೆ ವಿಶೇಷ ಅಲಂಕಾರ ಹಾಗೂ ಪೂಜೆ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ದೇವಾಲಯಕ್ಕೆ ತೆರಳಿ ಶಿವನ ದರ್ಶನ ಪಡೆದರು. 

ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅರೆಯೂರು ವೈದ್ಯನಾಥೇಶ್ವರ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವೈದ್ಯನಾಥೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಹಾಗೂ ರಥೋತ್ಸವ ವೈಭವಯುತವಾಗಿ ನಡೆಯಿತು. ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು.
 
ತಾಲೂಕಿನ ಹಾಲನೂರಿನಲ್ಲಿರುವ ಮಲ್ಲಿಕಾರ್ಜುನಸ್ವಾಮಿಯ ಉತ್ಸವವು ವೈಭವಯುತವಾಗಿ ನಡೆಯಿತು. ನಂಜುಂಡ ಶಿವಯೋಗಿಗಗಳ ಗದ್ದುಗೆಯ ಬಳಿ ಆಗಮಿಸಿ ಅಲ್ಲಿ ಸ್ವಾಮಿಯ ಗದ್ದುಗೆ ಮೇಲೆ ಸ್ಥಾಪಿಸಿ ಶಿವಲಿಂಗಕ್ಕೆ ಹಾಗೂ ಗಣಪತಿ ಮತ್ತು
ನವಗ್ರಹಗಳಿಗೆ ರುದ್ರಾಭಿಷೇಕ, ಸಹಸ್ರನಾಮ ಪೂಜೆ, ಮಹಾಮಂಗಳಾರತಿ ಜರುಗಿತು. 

Advertisement

ನಗರದ ಜಯಪುರ ಬಡಾವಣೆಯಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಲಕ್ಷ್ಮೀದೇವಿ ದೇವಾಲಯದಲ್ಲಿ ಗಂಗಾಧರೇಶ್ವರಸ್ವಾಮಿಯ ಉತ್ಸವವು ಮೆರವಣಿಗೆಯ ಮೂಲಕ ನಡೆಯಿತು. ಉಪ್ಪಾರಹಳ್ಳಿಯ ಶಿವಲಿಂಗರಸ್ತೆಯಲ್ಲಿರುವ ಮಹಾಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕುಂಭಾಭಿಷೇಕ ಮತ್ತು ಕ್ಷೀರಾಭಿಷೇಕವನ್ನು ಹಮ್ಮಿಕೊಳ್ಳಲಾಗಿತ್ತು. 

 ಬಿಲ್ವಪತ್ರೆ ಎಳನೀರು ಅಭಿಷೇಕ : ಶಿವನಿಗೆ ಪ್ರಿಯವಾದ ಪತ್ರೆ ಬಿಲ್ವಪತ್ರೆಯಾಗಿದ್ದು, ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ಬಿಲ್ವಾರ್ಚನೆ ಮಾಡಿ ಎಳನೀರ ಹಾಲಾಭಿಷೇಕ ಮಾಡಿದರೆ ಪುಣ್ಯಪ್ರಾಪ್ತಿ ದೊರೆಯುತ್ತದೆ ಎನ್ನುವ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ದೇವಾಲಯ ಗಳಲ್ಲೂ ಅಪಾರ ಸಂಖ್ಯೆಯ ಭಕ್ತರು ಸಾಲುಗಟ್ಟಿ ನಿಂತು ಶಿವನಿಗೆ ಬಿಲ್ವಾರ್ಚನೆ ಹಾಗೂ ಸಾಮೂಹಿಕ ಅಭಿಷೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶಿವನದರ್ಶನ ಪಡೆದರು.

ಯಡಿಯೂರಿನ ಪ್ರಸಿದ್ಧ ಸಿದ್ಧಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಅಭಿಷೇಕಗಳು ನಡೆದವು, ಸಾವಿರಾರು ಭಕ್ತರು ಯಡಿಯೂರಿಗೆ ಬಂದು ದೇವರ ದರ್ಶನ ಪಡೆದರು. ಮಧುಗಿರಿಯ ಪ್ರಸಿದ್ಧ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ರುದ್ರಾಭಿಷೇಕ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಚಿ.ನಾ.ಹಳ್ಳಿ ತಾಲೂಕಿನ ವಜ್ರದ ರಾಮೇಶ್ವರ ದೇವಾಲಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಜಿಲ್ಲಾದ್ಯಂತಬರ ಹಾಗೂ ಬಿಸಿಲಿನ ನಡುವೆಯೂ ಮಹಾಶಿವರಾತ್ರಿ ಸಡಗರ ಸಂಭ್ರಮದಿಂದಲೇ ಆಚರಣೆ ಮಾಡಲಾಯಿತು.’ 

ದೃಷ್ಟೇಶ್ವರಸ್ವಾಮಿ ದೇವಾಲಯದಲ್ಲಿ ಪೂಜೆ 
ಚೇಳೂರು: ಚೇಳೂರಿನ ದೃಷ್ಟೇಶ್ವರಸ್ವಾಮಿ ದೇವಾಲಯದಲ್ಲಿ 37 ನೇ ವರ್ಷದ ಅಖಂಡ ಶಿವಪಂಚಾಕ್ಷರಿ ನಾಮಾವಳಿ ಮಹಾಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ದೃಷ್ಟೇಶ್ವರಸ್ವಾಮಿ ಭಜನೆ ಮತ್ತು ಭಕ್ತ ಮಂಡಳಿಯಿಂದ ಭಕ್ತಿಪೂರ್ವಕವಾಗಿ ನಡೆಯಿತು. ಬೆಳಗ್ಗೆಯಿಂದ ದೇವಾಲಯದಲ್ಲಿ ಸ್ವಾಮಿಯವರಿಗೆ ಅಭಿಷೇಕ, ವಿಶೇಷ ಅಲಂಕಾರ, ಪೂಜಾ ಕಾರ್ಯಗಳು ನಡೆಯಿತು.
ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. 

ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next